ಕೊರೊನಾ ವೈರಸ್ ಯಾವಾಗ ತೊಲಗುತ್ತೆ, ಅದಕ್ಕೆ ಲಸಿಕೆ ಬಂದ್ರೆ ಸಾಕಪ್ಪ ಅಂತ ಕಾಯುತ್ತಿದ್ದ ಜನತೆಗೆ ಈಗೀಗ ಸಂತಸ ವಿಚಾರ ಸಿಕ್ಕಿದೆ. ಲಸಿಕೆ ಸಿದ್ಧವಾಗಿದ್ದು, ದೇಶದ ಜನತೆಗೆ ಇನ್ನು ಮುಂದೆ ಲಸಿಕೆ ಸಿಗುತ್ತೆ ಅನ್ನೋ ಸಂತಸದಲ್ಲಿದ್ದರು. ಇದೀಗ ಕೇಂದ್ರ ಆರೋಗ್ಯ ಸಚಿವಾಲಯ ಲಸಿಕೆ ಬಗ್ಗೆ ನೀಡಿರುವ ಹೇಳಿಕೆಗೆ ರಾಹುಲ್ ಗಾಂಧಿ ಕೆರಳಿ ಕೆಂಡವಾಗಿದ್ದಾರೆ.
ಭಾರತದಲ್ಲಿ ಎಲ್ಲರಿಗೂ ಕೊರೊನಾವೈರಸ್ ಸೋಂಕಿನ ಲಸಿಕೆಯನ್ನು ನೀಡುತ್ತೇವೆ ಎಂದು ನಾವು ಹೇಳಿಲ್ಲ ಎಂಬ ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆಗೆ ಸಂಸದ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲರಿಗೂ ಕೊರೊನಾವೈರಸ್ ಲಸಿಕೆ ಸಿಗಲಿದೆ ಎನ್ನುತ್ತಾರೆ. ಬಿಹಾರ ಚುನಾವಣೆಯಲ್ಲಿ ಬಿಜೆಪಿಯವರು, ಬಿಹಾರದಲ್ಲಿ ಪ್ರತಿಯೊಬ್ಬರಿಗೂ ಉಚಿತವಾಗಿ ಕೊರೊನಾವೈರಸ್ ಲಸಿಕೆ ಸಿಗಲಿದೆ ಎಂದು ಹೇಳುತ್ತಾರೆ. ಅದೇ ಕೇಂದ್ರ ಸರ್ಕಾರವು ಇದೀಗ ಎಲ್ಲರಿಗೂ ಲಸಿಕೆ ಸಿಗುತ್ತದೆ ಎಂದು ಯಾವಾಗಲೂ ಹೇಳಿಲ್ಲ ಎಂದು ಹೇಳುತ್ತಿದೆ. ಅಸಲಿಗೆ ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿಲುವು ಏನು” ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಭಾರತದಲ್ಲಿ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಲಸಿಕೆ ನೀಡುವ ಅಗತ್ಯವಿಲ್ಲ. ಕೊವಿಡ್-19 ಸೋಂಕಿನಿಂದ ಬಳಲುತ್ತಿರುವ ಜನರಿಗೆ ಲಸಿಕೆ ನೀಡಿದ್ದಲ್ಲಿ ಸೋಂಕಿನ ಹರಡುವಿಕೆಯ ಸರಪಳಿ ಕಳಚಿದಂತೆ ಆಗುತ್ತದೆ. ಅಷ್ಟಕ್ಕೂ ನಾವು ದೇಶದ 135 ಕೋಟಿ ಜನರಿಗೂ ಲಸಿಕೆ ನೀಡುತ್ತೇವೆ ಎಂಬುದಾಗಿ ಹೇಳಿಲ್ಲವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿಕೆ ನೀಡಿತ್ತು.
