ಗುಣಮಟ್ಟದ ಶಿಕ್ಷಣದ ಜೊತೆಗೆ ಶೈಕ್ಷಣಿಕ ಕಾರ್ಯಾಗಾರಗಳು ಪೂರಕ : ಹೆಚ್.ಕೆ.ಮಂಜುನಾಥ್

suddionenews
1 Min Read

ಚಿತ್ರದುರ್ಗ : ಶೈಕ್ಷಣಿಕವಾಗಿ ಸಮಾಜ ಅಭಿವೃದ್ದಿಯಾಗಬೇಕಾದರೆ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಶೈಕ್ಷಣಿಕ ಕಾರ್ಯಾಗಾರಗಳನ್ನು ಏರ್ಪಡಿಸಿದಾಗ ವೃತ್ತಿಯಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಹೆಚ್.ಕೆ.ಮಂಜುನಾಥ್ ಶಿಕ್ಷಕರುಗಳಿಗೆ ಕರೆ ನೀಡಿದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರೀಯ ಹೆದ್ದಾರಿ-13 ರಲ್ಲಿರುವ ಚಿನ್ಮೂಲಾದ್ರಿ ಶಾಲೆಯಲ್ಲಿ ಶನಿವಾರ ನಿಕಟಪೂರ್ವ ಜಿಲ್ಲಾ ಪದಾಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ನಿಕಟಪೂರ್ವ ಪದಾಧಿಕಾರಿಗಳಿಗೆ ಬೀಳ್ಕೊಡುವುದು ನಮ್ಮ ಸಂಸ್ಕøತಿ. ಸಮುದಾಯದ ಏಳಿಗೆಗೆ ಕೆಲಸ ಮಾಡಿದವರನ್ನು ಗೌರವಿಸುವುದರಿಂದ ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡಿದಂತಾಗುತ್ತದೆ. ಶುದ್ದ ಮನಸ್ಸಿನಿಂದ ಸೇವೆ ಮಾಡುವವರಿಗೆ ಆರೋಗ್ಯ ಉತ್ತಮವಾಗಿರುತ್ತದೆ. ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಜವಾಬ್ದಾರಿಯಿದೆ. ಘನತೆ, ಗಾಂಭಿರ್ಯತೆಯನ್ನು ಅರಿತುಕೊಂಡು ಕೆಲಸ ಮಾಡಬೇಕಿದೆ. ಸಮಾಜದ ಹಿತ ಕಾಪಾಡುವ ವ್ಯಕ್ತಿತ್ವ ನಿಮ್ಮದಾಗಲಿ. ವೇತನ ತಾರತಮ್ಯಕ್ಕಾಗಿ 1986 ರಲ್ಲಿ ಹುಟ್ಟಿಕೊಂಡ ನಮ್ಮ ಸಂಘ ಅನೇಕ ಸವಾಲು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಸಾಧಕ-ಬಾಧಕಗಳ ಬಗ್ಗೆ ಚಿಂತಿಸಿ ಸರ್ಕಾರದ ಮುಂದಿಡುವುದು ದೊಡ್ಡ ಸವಾಲಿನ ಕೆಲಸ. ನಮ್ಮ ಸಂಘಟನೆ ಮೇಲೆ ವಿರೋಧಿಗಳು ಅನೇಕ ದೌರ್ಜನ್ಯ, ದಬ್ಬಾಳಿಕೆ ನಡೆಸಿ ಕೇಸು ದಾಖಲಿಸಿದರೂ ಎಲ್ಲವನ್ನು ಕಾನೂನು ಅಡಿಯಲ್ಲಿ ಹೋರಾಟ ನಡೆಸಿ ಜಯಸಿದ್ದೇವೆ. ರಾಜ್ಯದ 35 ಜಿಲ್ಲೆಗಳಲ್ಲಿಯೂ ಸಂಘಟನೆ ಕಟ್ಟಿದ್ದೇವೆ. ಒಳ್ಳೆಯ ರೀತಿಯಲ್ಲಿ ಪದಾಧಿಕಾರಿಗಳು ಕೆಲಸ ಮಾಡಿದಾಗ ಮಾತ್ರ ಎಂತಹ ಸಮಸ್ಯೆಗಳನ್ನಾದರೂ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಯಣ್ಣ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಎಸ್.ರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಿಕಟಪೂರ್ವ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟೇಶರೆಡ್ಡಿ, ಕಾರ್ಯದರ್ಶಿ ಎಸ್.ಹನುಮಂತಪ್ಪ, ಜಿಲ್ಲೆಯ ಎಲ್ಲಾ ನಿಕಟಪೂರ್ವ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಜಿಲ್ಲೆಯ ಎಲ್ಲಾ ತಾಲ್ಲೂಕಿನ ಅಧ್ಯಕ್ಷರು, ಕಾರ್ಯದರ್ಶಿಗಳು, ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಹ ಶಿಕ್ಷಕಿ ಶ್ರೀಮತಿ ಶಿಲ್ಪ ಪ್ರಾರ್ಥಿಸಿದರು.

ಜಿಲ್ಲಾ ಘಟಕದ ಖಜಾಂಚಿ ಡಿ.ಮಂಜುನಾಥ ಸ್ವಾಗತಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಶ್ರೀನಿವಾಸ್ ವಂದಿಸಿದರು. ಅರ್ಪಿತ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *