ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಡಿ.23) : ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು ಎಂದು ಚಳ್ಳಕೆರೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಮಹಾಗುಂಡಪ್ಪ ಎಂ.ಬೆನಲ್ ಹೇಳಿದರು.
ಚಳ್ಳಕೆರೆ ನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಚಿತ್ರದುರ್ಗ ನೆಹರು ಯುವ ಕೇಂದ್ರ, ಯುವ ರೆಡ್ ಕ್ರಾಸ್ ಘಟಕ, ಚಳ್ಳಕೆರೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಂಯುಕ್ತಾಶ್ರಯದಲ್ಲಿ ಸೇವಾ SEVA-(Service and Empowerment through Voluntary Action ) ಪ್ರಯುಕ್ತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಕ್ತದಾನ ಪುಣ್ಯದ ಕೆಲಸ, ವಿದ್ಯಾರ್ಥಿಗಳು ರಕ್ತದಾನದ ಮಹತ್ಕಾರ್ಯದಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನ ಮಾಡಿದರೆ ಯಾವುದೇ ಅಡ್ಡ ಪರಿಣಾಮ ಇಲ್ಲ. ನಮ್ಮ ಕಾಲೇಜಿನಲ್ಲಿ ರಕ್ತದಾನ ಶಿಬಿರ ಆಯೋಜಿಸಿರುವ ನೆಹರು ಯುವ ಕೇಂದ್ರ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕಾರ್ಯ ಶ್ಲಾಘನೀಯ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಕಾರ್ಯದರ್ಶಿ ಮಜಹರ್ ಉಲ್ಲಾ ಮಾತನಾಡಿ, ರೆಡ್ ಕ್ರಾಸ್ ಇತಿಹಾಸ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ, ಕಾಲೇಜಿನಲ್ಲಿ ಸ್ಥಾಪನೆಗೊಂಡಿರುವ ಯುವ ರೆಡ್ ಕ್ರಾಸ್ ಕಾರ್ಯಕ್ರಮಗಳ ಬಗ್ಗೆ ಮತ್ತು ರಕ್ತದಾನದ ಮಹತ್ವದ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳು ರಕ್ತದಾನ ಮಾಡಲು ಪ್ರೇರೇಪಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಸ್ಥಾಪಿಸಲಾಯಿತು. ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ 21 ವಿದ್ಯಾರ್ಥಿಗಳು ರಕ್ತದಾನವನ್ನು ಮಾಡಿ ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಸುಹಾಸ್, ಯುವ ರೆಡ್ ಕ್ರಾಸ್ ಸಂಯೋಜಕರಾದ ಡಾ. ಲಕ್ಷ್ಮೀದೇವಮ್ಮ, ಕಿರಿಯ ರೆಡ್ ಕ್ರಾಸ್ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಭರತ್ ಜಿ ಪಿ, ನೆಹರು ಯುವ ಕೇಂದ್ರದ ಸ್ವಯಂಸೇವಕ ಗಣೇಶ್ ಮತ್ತು ಬಾಲಾಜಿ ರಕ್ತ ನಿಧಿ ಕೇಂದ್ರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.