ಸುದ್ದಿಒನ್,ನವದೆಹಲಿ,ಮೇ.24: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಚಾಲ್ತಿ ತಿಂಗಳಿನಲ್ಲಿ ಇಂಧನ ದರಗಳು ಮೂರನೇ ಬಾರಿಗೆ ಏರಿಕೆ ಕಂಡಿವೆ. ಕಳೆದ ಕೇವಲ 8 ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಬರೋಬ್ಬರಿ ಮೂರು ಬಾರಿ ಹೆಚ್ಚಾಗಿವೆ.
ಶನಿವಾರ ಪೆಟ್ರೋಲ್ ದರ ಮತ್ತೊಮ್ಮೆ ಏರಿಕೆಯಾಗಿದ್ದು, ಇದರಿಂದಾಗಿ ದೇಶದ ಹಲವು ನಗರಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 99.51 ರೂಪಾಯಿಗೆ ತಲುಪಿದೆ. ಶನಿವಾರ ಕೇಂದ್ರ ಸರ್ಕಾರವು ಲೀಟರ್ ಪೆಟ್ರೋಲ್ ಮೇಲಿನ ದರವನ್ನು 87 ಪೈಸೆ ಹಾಗೂ ಡೀಸೆಲ್ ಮೇಲಿನ ದರವನ್ನು 91 ಪೈಸೆಗಳಷ್ಟು ಹೆಚ್ಚಿಸಿದೆ.
ಈ ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರುತ್ತವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿಂದೆ ಲೀಟರ್ಗೆ 3 ರೂಪಾಯಿ ಹೆಚ್ಚಿಸಲಾಗಿತ್ತು, ಈಗ ಮತ್ತೊಮ್ಮೆ ದರ ಏರಿಕೆ ಮಾಡಿರುವುದು ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ (GST) ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ. ತೈಲ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಒತ್ತಾಯಿಸಿದೆ. ಈ ಕುರಿತು ಮಂಡಳಿಯ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಜಿಎಸ್ಟಿ ವ್ಯಾಪ್ತಿಗೆ ತಂದರೆ ಬೆಲೆ ಎಷ್ಟು ಕಡಿಮೆಯಾಗುತ್ತೆ?
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಜಿಎಸ್ಟಿ ವಿಧಿಸಿದರೆ ಪ್ರಸ್ತುತ ಇರುವ ಎಲ್ಲಾ ವಿಭಿನ್ನ ತೆರಿಗೆಗಳು ರದ್ದಾಗುತ್ತವೆ. ಇದರ ಪರಿಣಾಮವಾಗಿ ದೇಶಾದ್ಯಂತ ಒಂದೇ ತೆರಿಗೆ ಜಾರಿಗೆ ಬರಲಿದ್ದು, ಕೇಂದ್ರ ಸರ್ಕಾರದ ಎಕ್ಸೈಸ್ ಸುಂಕ ಮತ್ತು ರಾಜ್ಯ ಸರ್ಕಾರಗಳ ವ್ಯಾಟ್ (VAT) ಇಲ್ಲವಾಗುತ್ತದೆ. ಇದರಿಂದಾಗಿ ಲೀಟರ್ ಪೆಟ್ರೋಲ್ ಮೇಲೆ ಬರೋಬ್ಬರಿ 27.93 ರೂಪಾಯಿ ಇಳಿಕೆಯಾಗುವ ಸಾಧ್ಯತೆಯಿದೆ.
ಉದಾಹರಣೆಗೆ: ಪೆಟ್ರೋಲ್ ಮೂಲ ಬೆಲೆ ₹ 66.29 ಆಗಿದ್ದು, ಅದರ ಮೇಲೆ ಗರಿಷ್ಠ 18 ಪ್ರತಿಶತ ಜಿಎಸ್ಟಿ ವಿಧಿಸಿದರೆ, ಒಟ್ಟು ತೆರಿಗೆ ಕೇವಲ ₹ 11.93 ಆಗುತ್ತದೆ. ಆಗ ಸಾರ್ವಜನಿಕರಿಗೆ ಲೀಟರ್ ಪೆಟ್ರೋಲ್ ಕೇವಲ ₹ 78.22 ಕ್ಕೆ ಲಭ್ಯವಾಗುತ್ತದೆ. ಅಂದರೆ ಪ್ರಸ್ತುತ ದರಕ್ಕಿಂತ ಸುಮಾರು 22 ರೂಪಾಯಿಗಳಷ್ಟು ಬೆಲೆ ಕಡಿಮೆಯಾಗಲಿದೆ.
2017ರಲ್ಲಿ ಜಿಎಸ್ಟಿ ಜಾರಿಗೆ ತಂದಾಗ ‘ಒಂದೇ ದೇಶ – ಒಂದೇ ತೆರಿಗೆ’ ಎಂಬ ಘೋಷಣೆಯನ್ನು ಮಾಡಲಾಗಿತ್ತು. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಟ್ಟಿರುವುದರಿಂದ ಈ ಪರಿಕಲ್ಪನೆಗೆ ಧಕ್ಕೆಯುಂಟಾಗುತ್ತಿದೆ. ಆದ್ದರಿಂದ ತಕ್ಷಣವೇ ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕ ಮತ್ತು ವ್ಯಾಟ್ ರದ್ದುಗೊಳಿಸಿ, ಅದನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂದು ಸಾರ್ವಜನಿಕರು ಹಾಗೂ ವಾಣಿಜ್ಯ ಮಂಡಳಿಗಳು ಒಕ್ಕೊರಲಿನಿಂದ ಆಗ್ರಹಿಸುತ್ತಿವೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















