ಕೆಡಿಪಿ ಸಭೆಯಲ್ಲಿ ಸದ್ದು ಮಾಡಿದ ಡಿವೈಡರ್ ಸಮಸ್ಯೆ : ಶಾಸಕ ಕೆ.ಸಿ.ವೀರೇಂದ್ರ ಹೇಳಿದ್ದೇನು ?

1 Min Read

ಸುದ್ದಿಒನ್, ಚಿತ್ರದುರ್ಗ, (ಜೂ.23) : ನಗರದ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಡಿವೈಡರ್‍ಗಳದ್ದು, ಪ್ರಮುಖ ಸಮಸ್ಯೆಯಾಗಿದೆ ಎಂದು ಶಾಸಕ ಕೆ.ಸಿ. ವೀರೇಂದ್ರ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾದ ಈ ಸಾಲಿನ ಮೊದಲ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ಏಕಮುಖ ಸಂಚಾರವಿರುವ ರಸ್ತೆಯಲ್ಲೂ ಡಿವೈಡರ್ ನಿರ್ಮಿಸಿದ್ದೀರಿ, ಸಾರ್ವಜನಿಕರು, ವಾಹನ ಚಾಲಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ, ಡಿವೈಡರ್‍ಗಳನ್ನು ಯಾವಾಗ ತೆರವುಗೊಳಿಸುತ್ತೀರಿ ಎಂದು ನಿತ್ಯ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ಅವರು ಉತ್ತರಿಸಿ, ರಸ್ತೆ, ಡಿವೈಡರ್, ಡಿವೈಡರ್ ಮೇಲೆ ಅಲಂಕಾರಿಕ ಗಿಡ ಸೇರಿದಂತೆ ಒಟ್ಟು 32 ಕೋಟಿ ರೂ. ಅನುದಾನದಡಿ ನಿರ್ಮಿಸಲಾಗಿದೆ, ಡಿವೈಡರ್ ಬಗೆಗಿನ ಸಮಸ್ಯೆ ಬಗ್ಗೆ ಸಮೀಕ್ಷಾ ವರದಿ ಪಡೆಯಲಾಗುತ್ತಿದ್ದು, ಇದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಾದೇಶಿಕ ಆಯುಕ್ತ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಪ್ರತಿಕ್ರಿಯಿಸಿ, ಚಿತ್ರದುರ್ಗ ನಗರದಲ್ಲಿನ ಡಿವೈಡರ್‍ಗಳನ್ನು ನಾನು ಗಮನಿಸಿದ್ದು, ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ,  ಅಧಿಕಾರಿಗಳು ಬ್ಲಾಕ್‍ಸ್ಪಾಟ್, ತಿರುವು ಪ್ರದೇಶಗಳು ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು, ಸೋಮವಾರದೊಳಗೆ ವರದಿಯನ್ನು ಸಲ್ಲಿಸಬೇಕು, ಸಮಸ್ಯೆ ಪರಿಹಾರ ಆಗುವವರೆಗೆ ಗುತ್ತಿಗೆದಾರರಿಗೆ ಹಣ ಪಾವತಿಸಬಾರದು ಎಂದು ತಾಕೀತು ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *