ಧಾರವಾಡ: ಧಾರವಾಡದಲ್ಲಿ ನಿನ್ನೆ ತಡರಾತ್ರಿ ಗುಂಡಿನ ಸದ್ದು ಕೇಳಿ ಬಂದಿದ್ದು, ಓರ್ವ ಹತ್ಯೆಗೀಡಾಗಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಕಿಮ್ಸ್ ಗೆ ದಾಖಲಾಗಿದ್ದಾರೆ.
ಧಾರವಾಡದ ಮದಿಹಾಳದ ಗಣೇಶನಗರದಲ್ಲಿ ಈ ಘಟನೆ ನಡೆದಿದೆ. ಶಿವಯೋಗಿ ಭಾವಿಕಟ್ಟಿ ಎಂಬಾತನೇ ಹತ್ಯೆಗೀಡಾಗಿದ್ದು, ಈರಪ್ಪ ಹೆಬ್ಬಳ್ಳಿ ಹಾಗೂ ಸುನೀಲ ಪೊನ್ನಣ್ಣವರ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಗೆ ದಾಖಲಾಗಿದ್ದಾರೆ. ತಡರಾತ್ರಿಯೇ ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನವಲಗುಂದ ತಾಲೂಕಿನ ಶಿರೂರು ಗ್ರಾಮದ ಶ್ರೀಶೈಲ ಗಾಣಿಗೇರ ಎಂಬಾತನೇ ಹತ್ಯೆ ಮಾಡಿದ ಆರೋಪಿ. ಶ್ರೀಶೈಲ ಹಾಗೂ ಶಿವಯೋಗಿ ಮಧ್ಯೆ ಆಸ್ತಿಗೆ ಸಂಬಂಧಿಸಿದ ವ್ಯವಹಾರ ಇತ್ತು. ನಿನ್ನೆ ತಡರಾತ್ರಿ ಶಿವಯೋಗಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಮದಿಹಾಳದ ಶ್ರೀಶೈಲನ ಮನೆಗೆ ಹೋಗಿ ಕ್ಯಾತೆ ತೆಗೆದಿದ್ದಾನೆ. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದು, ಆ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡಿದೆ.
ಶ್ರೀಶೈಲ ರಿವಾಲ್ವಾರ್ ನಿಂದ ಗುಂಡು ಹಾರಿಸಿದ್ದು, ಶಿವಯೋಗಿ ಸಾವನ್ನಪ್ಪಿದ್ದಾನೆ. ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
