Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೇಡುಗಳೆಲ್ಲ ದೂರವಾಗಿ ಬದುಕಿನಲ್ಲಿ ಮೂಡಲಿ ಬೆಳಕು :  ದೀಪಾವಳಿ ವಿಶೇಷ ಲೇಖನ ಮೋದೂರು ತೇಜ,

Facebook
Twitter
Telegram
WhatsApp

ಲೇಖಕರು; ಮೋದೂರು ತೇಜ, ಚಳ್ಳಕೆರೆ
ಮೊ : 91643 88528

ಪ್ರತಿಯೊಂದು ಹಬ್ಬವು ಕೆಲವು ಆಚರಣೆಗಳನ್ನು, ನಂಬಿಕೆಗಳನ್ನು ಅರ್ಥ ಸತ್ಯದ ಇತಿಹಾಸವನ್ನು ತನ್ನೊಳಗೆ ಗರ್ಭೀಕರಿಸಿಕೊಂಡಿರುತ್ತದೆ. ಅದರಲ್ಲಿ ಬೆಳಕಿನ ಹಬ್ಬ ಎಂದೇ ಕರೆಯುವ ದೀಪಾವಳಿಯೂ ಒಂದು.

ದೀಪಾವಳಿ ಮೂರು ದಿನಗಳ ಹಬ್ಬ. ಕೃಷ್ಣನು ನರಕಾಸುರನನ್ನು ಸಂಹರಿಸಿದ ದಿನದ ಸಂಕೇತವಾಗಿ ನರಕ ಚತುದರ್ಶಿ. ಆ ದಿನ ಅಂಧಕಾರಕ್ಕೆ ಸಮಾನವಾದ ಅಜ್ಞಾನವನ್ನು ತೊಲಗಿಸುವ ಪ್ರತೀಕವಾಗಿ ಜ್ಞಾನಕ್ಕೆ ಸಮಾನವಾದ ಬೆಳಕನ್ನು ಬರ ಮಾಡಿಕೊಳ್ಳುವ ನೆಪದಲ್ಲಿ ದೀಪಗಳೊಂದಿಗೆ ಮನೆಯನ್ನು ಸಿಂಗರಿಸುತ್ತಾರೆ. ಈ ದೇಶಕ್ಕೆ ಆವರಿಸಿರುವ ಕರೋನಾ ಕೇಡಿನ ಜೊತೆಗೆ ಎಲ್ಲಾ ಕೇಡುಗಳು ಕೊನೆಯಾಗಿ ನಾಡಿಗೆ, ದೇಶಕ್ಕೆ ಒಳಿತಾಗಲೆಂದು ನಾವು ಬೆಳಕಿನ ಹಬ್ಬವನ್ನು ಆಚರಿಸಬೇಕಿದೆ.

ಅದೇ ರೀತಿ ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ. ಇದು ವರ್ತಕ ವರ್ಗಕ್ಕೆ ತುಂಬ ಪವಿತ್ರವಾದ ದಿನ. ಆದರೆ, ರೈತಾಪಿ ವರ್ಗಕ್ಕೆ ಜೀವಧಾತುವಾದ ಧಾನ್ಯವೇ ಲಕ್ಷ್ಮೀ ಆಗಿರುವುದರಿಂದ ಆ ಧಾನ್ಯವನ್ನು ಬೆಳೆಯಲು ಬೇಕಾಗುವ ನೇಗಿಲು ಮತ್ತು ಇತರೆ ಪರಿಕರಗಳು, ದನಕರುಗಳೇ ಅವರಿಗೆ ದೇವರ ಸಮಾನವಾಗಿರುವುದರಿಂದ ಹಳ್ಳಿಯ ರೈತಾಪಿ ವರ್ಗದವರ ಲಕ್ಷ್ಮಿಪೂಜೆಯೇ ಭಿನ್ನವಾಗಿರುತ್ತದೆ.

ದೀಪಾವಳಿ ಅಮಾವಸ್ಯೆಯನ್ನು ಪ್ರಾರಂಭಿಸಿ ತಿರುಗ ಬರೋ ಅಮಾವಾಸ್ಯೆ ತನಕ ಒಂದು ತಿಂಗಳು ಕಾಲ ಬಯಲುಸೀಮೆಯ ಒಂದಲ್ಲ ಒಂದು ಊರಿನಲ್ಲಿ ಎತ್ತಿನ ಹಬ್ಬ ಆಚರಿಸುತ್ತಾರೆ. ದೀಪಾವಳಿ ಸಮಯಕ್ಕೆಲ್ಲ ಬಿತ್ತಿದ ಬೆಳೆ ಕಟಾವಿಗೆ ಬಂದು ನಿಂತಿರುತ್ತದೆ. ಅದಕ್ಕೆ ಕಾರಣೀಭೂತರಾದ ರೈತರ ಹೆಗಲಿಗೆ ಹೆಗಲು ಕೊಟ್ಟು ಹಗಲು ರಾತ್ರಿ ದುಡಿದ ದನಕರುಗಳಿಗೆ ಕೃತಜ್ಞತೆ ಸಲ್ಲಿಸುವ ರೂಪದಲ್ಲಿ ಬಯಲುಸೀಮೆಯಲ್ಲಿ ಎತ್ತಿನ ಹಬ್ಬ ಆಚರಿಸುತ್ತಾರೆ. ಇದೇ ಆಚರಣೆಯನ್ನು ಕೆಲವು ಕಡೆ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಆಚರಿಸುತ್ತಾರೆ.

ಎಲ್ಲಾ ಹಬ್ಬಗಳಲ್ಲಿ ಮನುಷ್ಯ ಹೊಸ ಬಟ್ಟೆ ಧರಿಸಿ ಸಿಂಗಾರಗೊಂಡರೆ, ಎತ್ತಿನ ಹಬ್ಬದಲ್ಲಿ ಎತ್ತುಗಳು ಸಿಂಗಾರಗೊಳ್ಳುತ್ತವೆ. ಆದ್ದರಿಂದ ಬಯಲು ಸೀಮೆಯಲ್ಲಿ ಎತ್ತಿನ ಹಬ್ಬ ಅಂದರೆ, ರೈತಾಪಿ ವರ್ಗಕ್ಕೆ ಏನೋ ಒಂದು ರೀತಿಯ ಖುಷಿ. ಮಾತಿನಲ್ಲಿ ಹೇಳಲಾಗದ ಪುಳಕ, ಎತ್ತಿನ ಹಬ್ಬದ ದಿನ ದನಕರುಗಳ ಮೈತೊಳೆದು, ಮೊದಲೇ ಬಣ್ಣ ಬಳಿದು ಸಿದ್ದಗೊಳಿಸಿದ ಕೊಂಬಿಗೆ ಕೋಡಣಸಿಟ್ಟು ಅದರ ತುದಿಗೆ ಬಣ್ಣ ಬಣ್ಣದ ಕುಚ್ಚು ಕಟ್ಟತ್ತಾರೆ. ಕೆಲವರು ಕಟ್ಟುಮಸ್ತಾದ ಎತ್ತುಗಳ ಕೊಂಬುಗಳಿಗೆ ಗುಮ್ಮಟ ಕಟ್ಟುತ್ತಾರೆ. ಕೊರಳಿಗೆ ಗಳಗಂಟೆಯ ಕೊರಳಪಟ್ಟಿ ಕಟ್ಟುತ್ತಾರೆ. ಮೈ ಮೇಲೆ ಜೂಲು ಹಾಕಿ ಕಾಲಿಗೆ ಕಿರುಗೆಜ್ಜೆ ಕಟ್ಟುತ್ತಾರೆ. ಹೂವಿನಿಂದ, ಬಲೂನಿನಿಂದ ದನಕರುಗಳನ್ನು ಸಿಂಗರಿಸಿಕೊಂಡು ಊರ ಹೊರಗಿನ ಬಯಲಿನಲ್ಲಿ ಸಿದ್ದಪಡಿಸಿದ ಎರಡು ಮೂರಾಳಿನ ಎತ್ತರಕ್ಕೂ ಜಾಸ್ತಿಯಿರುವ ಈಡು ಸುಡುವ ಜಾಗಕ್ಕೆ ಮೆರವಣಿಗೆಯ ಮೂಲಕ ನಡೆದು ಬರುವ ಎತ್ತುಗಳ ಗಾಂಭೀರ್ಯವನ್ನು ನೋಡುವುದೇ ಒಂದು ಸೊಗಸು. ಈಡಿಗೆ ಹಚ್ಚಿದ ಬೆಂಕಿಯಲ್ಲಿ ಎತ್ತುಗಳನ್ನು ಜಿಗಿಸಿಕೊಂಡು ಮತ್ತೆ ಮನೆ ಸೇರುವ ಹೊತ್ತಿಗೆ ಮೊದಲ ಕೋಳಿ ಕೂಗುತ್ತಿತ್ತು. ಹಿಂದೆ ಊರಲ್ಲಿ ಅಷ್ಟೊಂದು ದನಕರುಗಳಿರುತ್ತಿದ್ದವು.

ಆದರೆ ಈಗ ಹಳ್ಳಿಗಳಲ್ಲಿ ಎತ್ತಿನ ಹಬ್ಬವೇನೋ ಆಚರಿಸುತ್ತಾರೆ. ಆದರೆ ಮೊದಲಿನಷ್ಟು ಹುರುಪು ಇಲ್ಲವೆಂದೇ ಹೇಳಬಹುದು. ಕಾಲಕ್ಕೆ ಸರಿಯಾಗಿ ಮಳೆ ಬೆಳೆಯಿಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿದ ರೈತರು ಜೀವನಕ್ಕೆ ಆಧಾರವಾಗಿದ್ದ ಜಮೀನನ್ನು ಮಾರಿಕೊಂಡು ನಗರದ ಕಡೆ ವಲಸೆ ಹೊರಟಿದ್ದಾರೆ. ಮೇವಿಗೆ ಕೊರತೆಯಾಗಿ ಮೂಕ ಜೀವಿಗಳ ಕಷ್ಟ ನೋಡೋಕಾಗದೆ ಹೋದೋಟಿಗೆ ಹೋಗಲೆಂದು ಸೋವಿ ರೇಟಿಗೆ ದನಕರುಗಳನ್ನು ಮಾರಿರುವುದರಿಂದ ಸಂಕ್ರಾಂತಿ ಹಬ್ಬದಲ್ಲಿ ರಂಗೋಲಿಯ ನಡುವೆ ಪಿಳ್ಳೆರಾಯನನ್ನು ಮಾಡಿಡಲು ಹಿಡಿಯೋಟು ಸಗಣಿಗೂ ಪರದಾಡುವಂತಾಗಿರುವಾಗ, ಎತ್ತಿನ ಹಬ್ಬದ ಮೊದಲಿನ ವೈಭವ ಮರೆಯಾಗುತ್ತಿದೆ ಎಂದೇ ಹೇಳಬಹುದು.

ಮೂರು ದಿನಗಳ ಕಾಲ ಆಚರಿಸುವ ದೀಪಾವಳಿ ಹಬ್ಬದ ಕೊನೆಯ ದಿನ ಬಲಿಪಾಡ್ಯಮಿ. ವಾಮನನ ಅವತಾರವೆತ್ತಿದ ವಿಷ್ಣು ಬಲಿ ಚಕ್ರವರ್ತಿಯ ಹತ್ತಿರ ಮೂರು ಹೆಜ್ಜೆಯ ಜಾಗವನ್ನು ದಾನ ಕೇಳಿ. ಒಂದು ಹೆಜ್ಜೆ ಭೂಮಿ ಮೇಲೆ, ಇನ್ನೊಂದು ಹೆಜ್ಜೆ ಆಕಾಶದ ಮೇಲೆ, ಮತ್ತೊಂದು ಬಲಿಯ ನೆತ್ತಿಯ ಮೇಲಿಟ್ಟು ಪಾತಾಳಕ್ಕೆ ತುಳಿದನೆಂದು ಪುರಾಣ ಪ್ರತೀತಿ ಇದೆ. ಆದರೆ, ಈ ಕಥೆಯ ಸತ್ಯಾಸತ್ಯತೆಯನ್ನು ತಿಳಿಯಲು ಅಧ್ಯಯನ ನಡೆಸಿದ ಚಿಂತಕರು, ಇತಿಹಾಸಕಾರರು, ಕಾಲಗರ್ಭದಲ್ಲಿ ಮರೆಮಾಚಿದ ನಿಜವನ್ನು ಬಯಲಿಗೆಳೆದಿದ್ದಾರೆ.

ಮಧ್ಯಪ್ರಾಚ್ಯದಿಂದ ಭಾರತಕ್ಕೆ ವಲಸೆ ಬಂದ ಆರ್ಯರು, ಇಲ್ಲಿನ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಾ, ಇಲ್ಲವೆ ನಿರ್ನಾಮ ಮಾಡುತ್ತಾ ಬಂದರು. ಆರ್ಯರು ತನ್ನ ಎದುರಾಳಿಗಳಿಗೆ ಕೆಟ್ಟವರೆಂದು, ರಾಕ್ಷಸರೆಂದು ಹೆಸರಿಟ್ಟು ಕೊಲ್ಲುವುದನ್ನು ಧರ್ಮಸಮ್ಮತಗೊಳಿಸಿದರು. ಅದರಲ್ಲಿ ಬಲಿಚಕ್ರವರ್ತಿಯ ಕಥೆಯೂ ಒಂದು. ಆತ ಪ್ರಜಾಪರಿಪಾಲಕನಾಗಿ ರಾಜ್ಯವಾಳುತ್ತಿರುವಾಗ ಆತನ ರಾಜ್ಯ ಸುಭಿಕ್ಷವಾಗಿತ್ತು, ಸಮೃದ್ಧವಾಗಿತ್ತು. ಅದರ ಮೇಲೆ ಕಣ್ಣುಹಾಕಿದ ಆರ್ಯರು ದಂಡೆತ್ತಿ ಹೋಗಿ ವಾಮಮಾರ್ಗದಿಂದ ಅಂದರೆ ಮೋಸದಿಂದ ಬಲಿ ಚಕ್ರವರ್ತಿಯನ್ನು ಕೊಂದರೆಂದು ಸಂಶೋಧನೆಗಳು ತಿಳಿಸುತ್ತವೆ. ಬಲಿಚಕ್ರವರ್ತಿ ಪ್ರಜೆಗಳಿಗೆ ಎಷ್ಟು ಪ್ರೀತಿ ಪಾತ್ರನಾಗಿದ್ದ ಎನ್ನುವುದು ಕೇರಳದಲ್ಲಿ ಆಚರಿಸುವ ಓಣಂ ಹಬ್ಬವೇ ಸಾಕ್ಷಿ. ಪುರಾಣ ಪ್ರಸಿದ್ಧವಾದ ಬಲಿಚಕ್ರವರ್ತಿ ಮನೆಗೆ ಮರಳಿ ಬಂದ ಕುರುಹಾಗಿ ಹತ್ತು ದಿನಗಳ ಕಾಲ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವು ಕೇರಳದ ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದೆ.

ದೀಪಾವಳಿ ಎಂದರೆ ಮನೆ ಮುಂದೆ ದೀಪ ಹಚ್ಚಿ ಪರಿಸರ ಮಾಲಿನ್ಯ ಮಾಡುವಂತೆ ಪಟಾಕಿ ಸಿಡಿಸುವುದೊಂದೇ ಅಲ್ಲ, ಅದರಾಚೆಗೂ ಇದು ತನ್ನ ವಿಸ್ತಾರವನ್ನು ಚಾಚಿಕೊಂಡಿದೆ. ಜನಪದರ ಹಬ್ಬವಾಗಿ, ಮೂಲ ನಿವಾಸಿಗಳ ಸಾಂಸ್ಕøತಿಕ ಮಹತ್ವವಾಗಿ ಅಚರಿಸಲಾಗುತ್ತಿದೆ. ಇಂತಹ ಬೆಳಕಿನ ಹಬ್ಬದ ಶುಭಾಶಯ ತಿಳಿಸುತ್ತಾ, ಈ ದೇಶಕ್ಕೆ, ನಾಡಿಗೆ ಮುಸುಕಿರುವ ಕತ್ತಲಿನ ಕೇಡು ಕರಗಿ ಮತ್ತೆ ಭರವಸೆಯ ಬೆಳಕು ಮೂಡಲೆಂದು ಬಯಸುತ್ತೇನೆ.

ಮೋದೂರು ತೇಜ ಕತೆಗಾರ, ಚಳ್ಳಕೆರೆ

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ!

ಈ ರಾಶಿ ಒಲ್ಲದ ಮನಸಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-29,2024 ಸೂರ್ಯೋದಯ: 06:16, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944,

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

error: Content is protected !!