ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ, (ಜ.11) : ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ತಾಲ್ಲೂಕು ಆಡಳಿತದವತಿಯಿಂದ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಮನವಿ ಮಾಡಲಾಯಿತು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದಿದ್ದು, ಇದುವರೆಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲಾಗಿ, ಮಂಗಳ ಅಂಗಳದವರೆಗೂ ಹೋಗಲಾಗಿದೆ. ಆದರೆ ಜೀವನಕ್ಕೆ ಅತಿ ಅಗತ್ಯವಾಗಿ ಬೇಕಾದ ಆಹಾರ ಧಾನ್ಯವನ್ನು ಉತ್ಪಾದಿಸುವ ನಿಟ್ಟಿನಲ್ಲಿ ಹಿನ್ನಡೆಯಾಗಿದೆ. ಕೃಷಿ ಲಾಭದಾಯಕವಲ್ಲ ಎಂದು ಬಹಳಷ್ಟು ಜನ ಇದರಿಂದ ಹಿಮ್ಮುಖವಾಗುತ್ತಾ ನಗರದತ್ತ ಮುಖ ಮಾಡುತ್ತಿದ್ದಾರೆ. ರೈತ ಬೆಳೆದ ಬೆಳೆಗೆ ಸರಿಯಾದ ರೀತಿಯಲ್ಲಿ ಬೆಲೆ ಇಲ್ಲದೆ ಹಾಕಿದ ಬಂಡವಾಳವೂ ಸಹಾ ಹಿಂತಿರುಗಿ ಬಾರದೆ ಸಂಕಷ್ಟ ಸ್ಥಿತಿಯಲ್ಲಿ ಇದ್ದಾನೆ.
ಕೃಷಿಯಲ್ಲಿ ಲಾಭದಾಯಕ ಬೆಲೆ ಸಿಗದ ಕಾರಣ ಕೃಷಿಯನ್ನು ಬಿಡುವ ಹಂತಕ್ಕೆ ತಲುಪಿದ್ದಾನೆ ಎಂದು ತಿಳಿಸಿದ್ದಾರೆ.

ಕೃಷಿ ಬಿಟ್ಟು ಬೇರೆ ಉತ್ಪಾದನೆಗಳಲ್ಲಿ ಯಾರು ಉತ್ಪಾದನೆ ಮಾಡುತ್ತಾರೂ ಅವರೇ ದರವನ್ನು ನಿಗಧಿ ಮಾಡುತ್ತಾರೆ ಆದರೆ ಕೃಷಿಯಲ್ಲಿ ಈ ರೀತಿಯಾಗದೇ ಇಲ್ಲಿ ಬೆಲೆಯನ್ನು ರೈತ ನಿಗಧಿ ಮಾಡದೇ ಬೇರೆ ಮಧ್ಯವರ್ತಿಗಳು ನಿಗಧಿ ಮಾಡುವುದರಿಂದ ರೈತ ಬಡವನಾಗುತ್ತಿದ್ದಾನೆ. ಇದರಿಂದ ಕೃಷಿ ಕ್ಷೇತ್ರ ಅವನತಿಗೊಂಡು ಆಹಾರದ ಅಭಾವ ಉಂಟಾಗುತ್ತದೆ. ರೈತರ ಉತ್ಪಾದನೆ ವೆಚ್ಚದ ಮೇಲೆ ಲಾಭದಾಯಕ ಬೆಲೆ ದೊರೆಯುವಂತಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.
ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಿ ಖರೀದಿ ಗ್ಯಾರೆಂಟಿ ನೀಡಿ ಘೋಷಿತ ಬೆಲೆ ಕಡಿಮೆ ಬೆಲೆಗೆ ಖರೀದಿಯಾಗಬಾರದು, ಪ್ರತಿ ವರ್ಷ ಬೆಲೆ ಘೋಷಣೆಯ ಹಣದುಬ್ಬರ ದರಕ್ಕೆ ಅನುಗುಣವಾಗಿರಬೇಕಿದೆ. ಮಂಡಿ ಒಳಗೆ ಅಥವಾ ಹೊರಗೆ ಘೋಷಿತ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸಿದರೆ ಶಿಕ್ಷಾರ್ಹವಾಗಿಸುವ ಕಾನೂನು ಜಾರಿ ಮಾಡುವಂತೆ ರಾಷ್ಟ್ರಪತಿಗಳನ್ನು ಒತ್ತಾಯಿಸಿದ್ದಾರೆ.
ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಆರ್. ಜ್ಞಾನೇಶ್, ಕಾರ್ಯದರ್ಶಿ ವೆಂಕಟೇಶ್ ರೆಡ್ಡಿ, ತಾಯಣ್ಣ, ವೇಮದೇವ್ ರೆಡ್ಡಿ ವಿರೇಶ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
