ದಾವಣಗೆರೆ (ಮೇ.11) : ಜಿಲ್ಲೆಯಲ್ಲಿ ಈಗಾಗಲೇ ಒಂದು ಗೋಶಾಲೆಗೆ ಸರ್ಕಾರದಿಂದ ಅನುಮೋದನೆ ದೊರತಿದ್ದು ಕಾಮಗಾರಿ ಪ್ರಾರಂಭಿಸಲಾಗಿದೆ, ಇದರೊಂದಿಗೆ ಹೆಚ್ಚುವರಿಯಾಗಿ ದಾವಣಗೆರೆ ಜಿಲ್ಲೆಗೆ ಮುಖ್ಯಮಂತ್ರಿಗಳು ಎರಡು ಗೋ ಶಾಲೆ ಪ್ರಾರಂಭಿಸಲು ಅನುಮೋದನೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಬುಧವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸರ್ಕಾರಿ ಗೋ ಶಾಲೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಈಗಾಗಲೇ ಪ್ರತಿ ಜಿಲ್ಲೆಗೂ ಒಂದು ಗೋಶಾಲೆ ಮಂಜೂರು ಮಾಡಿದ್ದು, ಅದರಂತೆ ದಾವಣಗೆರೆ ತಾಲ್ಲೂಕು ಹೊಸಹಳ್ಳಿ ಸಮೀಪ 7 ಎಕರೆ ಜಾಗ ಗುರುತಿಸಿ ಗೋಶಾಲೆ ಕಾಮಗಾರಿ ಆರಂಭಿಸಲಾಗಿದೆ. ಇದರೊಂದಿಗೆ ಮಾನ್ಯ ಮುಖ್ಯಮಂತ್ರಿಗಳು ಜಿಲ್ಲೆಗೆ 2 ಹೆಚ್ಚುವರಿ ಗೋಶಾಲೆಗಳನ್ನು ಮಂಜೂರು ಮಾಡಿದ್ದು ಗೋಶಾಲೆ ನಿರ್ಮಾಣಕ್ಕಾಗಿ ಜಗಳೂರು ಹಾಗೂ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳಲ್ಲಿ ಗೋಶಾಲೆ ನಿರ್ಮಾಣಕ್ಕೆ ಭೂಮಿ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಖ್ಯಮಂತ್ರಿಗಳು ಗೋಶಾಲೆಗಳಿಗೆ 10 ಎಕರೆ ಜಮೀನು ಮೀಸಲಿರಿಸುವಂತೆ ತಿಳಿಸಿದ್ದಾರೆ ಎಂದರು.
ಇದೇ ವೇಳೆ ದಾವಣಗೆರೆ ಹಳೇ ಭಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳ ಮೇಲೆ ದಾಳಿ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ ಹಾಗಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯವರು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಹಾಜರಿದ್ದ ಮಹಾನಗರ ಪಾಲಿಕೆ ಅಧಿಕಾರಿ ಮಾಹಿತಿ ನೀಡಿ, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದು ಸಂತಾನಹರಣ(ಎಬಿಸಿ) ಪ್ರಕ್ರಿಯೆಯನ್ನು ಶುರು ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ವರ್ಷ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಜಾನುವಾರುಗಳ ಆರೋಗ್ಯ ರಕ್ಷಣೆ ಹಾಗೂ ಹಾಲಿನ ಇಳುವರಿ ಕಾಪಾಡಲು ಹಾಗೂ ಮಾರಣಾಂತಿಕ ರೋಗ ರೇಬಿಸ್ ಕುರಿತು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಮಾಹಿತಿ ಒಳಗೊಂಡ ಕರ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರಾದ ಚಂದ್ರಶೇಖರ್ ಸುಂಕದ್, ಪಾಲಿ ಕ್ಲಿನಿಕ್ ಉಪ ನಿರ್ದೇಶಕರಾದ ವೀರೇಶ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಾದ ರಾಘವೇಂದ್ರ, ತಾಲ್ಲೂಕು ಪಂಚಾಯಿತಿ ಇಒ ಆನಂದ್, ರೈಲ್ವೆ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ನಿರ್ಮಿತಿ ಕೇಂದ್ರದ ರವಿ, ಡಾ.ರಾಮ್ ಪ್ರಸಾದ್ ಕುಲಕರ್ಣಿ, ಡಾ.ಜಗದೀಶ್, ಡಾ.ಶಂಕರಪ್ಪ, ಡಾ.ರವಿಚಂದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.






GIPHY App Key not set. Please check settings