ದಾವಣಗೆರೆ: ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಹೆಂಡತಿಯನ್ನೇ ಕತ್ತು ಹಿಸುಕಿ ಕೊಲೆಗೈದಿದ್ದ ಆರೋಪಿಗೆ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ, 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಹುಣಸೆಕಟ್ಟೆ ಗ್ರಾಮದ ನಾಗರಾಜ್ (38) ವರ್ಷ ಶಿಕ್ಷೆಗೊಳಗಾದವ. ಸುಧಾ ಕೊಲೆಯಾಗಿದ್ದ ಮಹಿಳೆ. ಕಳೆದ 2017 ರಲ್ಲಿ ಸುಧಾ ಇವರನ್ನು ಹಣ ವಿಚಾರವಾಗಿ ಆರೋಪಿ ನಾಗರಾಜ್ ಕೊಲೆ ಮಾಡಿದ್ದಾನೆಂದು ಮೃತ ಸುಧಾಳ ಸಹೋದರ ಶ್ರೀನಿವಾಸ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಗ್ರಾಮಾಂತರ ವೃತ್ತ ನಿರೀಕ್ಷಕರಾದ ಗುರುಬಸವರಾಜ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಿತನ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನಂತರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಂದು ನ್ಯಾಯಲಯವು ಆರೋಪಿತನಿಗೆ ಜೀವಾವಧಿ ಶಿಕ್ಷೆ, 25 ಸಾವಿರ ದಂಡ ವಿಧಿಸಿ, ದಂಡದ ಹಣವನ್ನು ಮೃತಳ ಮಗಳಿಗೆ ನೀಡಲು ನ್ಯಾಯಾಧೀಶರಾದ ಕೆಂಗಬಾಲಯ್ಯ ತೀರ್ಪು ನೀಡಿದ್ದಾರೆ.
ಸರ್ಕಾರಿ ಅಭಿಯೋಜಕರಾಗಿ ಕೆಂಚಪ್ಪ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.


