ಬೆಳೆನಷ್ಟ ಪರಿಹಾರವನ್ನು ರೈತರಿಗೆ ವಿತರಿಸಬೇಕು : ಕರ್ನಾಟಕ ರಾಜ್ಯ ರೈತ ಸಂಘ

suddionenews
1 Min Read

ಚಿತ್ರದುರ್ಗ, (ಜ.31) : ಜಿಲ್ಲೆಯಲ್ಲಿ 2020-2021 ನೇ ಸಾಲಿನ ಖಾಸಗಿ ಬೆಳೆವಿಮೆ ಸಂಸ್ಥೆಗಳು ಹಾಲಿ ದರ ಹೆಚ್ಚಿಸಿದ ಬೆಳೆನಷ್ಟ ಪರಿಹಾರವನ್ನು ರೈತರಿಗೆ ಸರಿಯಾಗಿ ವಿತರಿಸದೆ ವಿಳಂಬ ಮಾಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಿಯೋಜಿಸಿ ಶೀಘ್ರವೇ ಬೆಳೆನಷ್ಟ ಪರಿಹಾರವನ್ನು ರೈತರಿಗೆ ವಿತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಜಾರಿಯಾದಾಗಿನಿಂದಲೂ ಸರ್ಕಾರದ ಮಾರ್ಗಸೂಚಿಗಳನ್ನು ವಿಮಾ ಕಂಪನಿಗಳು ಸರಿಯಾಗಿ ಪಾಲಿಸದೆ, ರೈತರಿಗೆ ಸರಿಯಾಗಿ ಬೆಳೆವಿಮೆ ವಿತರಿಸದೆ ವಂಚಿಸಿದ್ದಾರೆ. 2020-2021 ನೇ ಸಾಲಿನಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಸರ್ಕಾರವೇ ಅತಿವೃಷ್ಟಿ ಜಿಲ್ಲೆಯೆಂದು ಘೋಷಣೆ ಮಾಡಿದ್ದರು ಸಹ ಖಾಸಗಿ ಬೆಳೆವಿಮಾ ಸಂಸ್ಥೆಗಳು, ರೈತರಿಂದ ಬ್ಯಾಂಕ್ ಖಾತೆಗೆ ಬೆಳೆವಿಮೆಯನ್ನು ಪಾವತಿಸಿಕೊಂಡು ರೈತರ ಬ್ಯಾಂಕ್ ಖಾತೆಗೆ ಬೆಳೆವಿಮೆಯನ್ನು ಪಾವತಿಸದೆ, ಕೇವಲ 10% ಜನರಿಗೆ ಮಾತ್ರ ವಿತರಿಸಿದ್ದಾರೆ. ಉಳಿದ 90% ಜನರಿಗೆ ಯಾವುದೇ ಹಣವನ್ನು ನೀಡಿಲ್ಲ ಎಂದು ದೂರಿದರು.

ಸರ್ಕಾರ ಬೆಳೆನಷ್ಟ ಪರಿಹಾರ ಇನ್‍ಪುಟ್ ಸಬ್ಸಿಡಿ ಪೂರ್ಣ ಪ್ರಮಾಣದ ರೈತರಿಗೆ ವಿತರಿಸದೆ 2 ಹೆಕ್ಟೇರ್ ಲೆಕ್ಕದಲ್ಲಿ ರೂ.13600 ಗಳನ್ನು ನಿಗಧಿಮಾಡಿದ್ದು, ಈಗಿನ ಬೊಮ್ಮಾಯಿ ಸರ್ಕಾರ 2 ಹೆಕ್ಟೇರ್ ಲೆಕ್ಕದಲ್ಲಿ ರೂ.26000 ಗಳಿಗೆ ಹೆಚ್ಚಿಗೆ ಮಾಡಿರುವುದು ರೈತರಿಗೆ ವಂಚಿಸುವ ಯೋಜನೆಗಳಾಗಿವೆ.

ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರು, ಖಾಸಗಿ ವಿಮಾ ಕಂಪನಿಗಳ ಮುಖ್ಯಸ್ಥರು, ಕೃಷಿ ನಿರ್ದೇಶಕರು, ಕೃಷಿ ವಿಜ್ಞಾನಿಗಳ ಮತ್ತು ಜಿಲ್ಲಾಧಿಕಾರಿಗಳು, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ಹವಮಾನ ಇಲಾಖೆ ಅಧಿಕಾರಿಗಳನ್ನು ಕರೆಯಿಸಿ ರೈತರ ಸಮ್ಮುಖದಲ್ಲಿ ಸಭೆಯನ್ನು ನಿಯೋಜಿಸಿ ಕೃಷಿ ಸಚಿವರು ಒಂದು ವಾರದೊಳಗಾಗಿ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ರೈತ ಸಂಘ ಘರಾವ್ ಮಾಡಿ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ, ಜಿಲ್ಲಾಧ್ಯಕ್ಷ ಸುರೇಶ್ ಬಾಬು, ಹೊರಕೇರಪ್ಪ, ಧನಂಜಯ್, ತಿಪ್ಪೇಸ್ವಾಮಿ, ಪ್ರಭು, ಹಂಪಣ್ಣ, ರಾಜಣ್ಣ ಸೇರಿದಂತೆ ರೈತರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *