ನವದೆಹಲಿ: ಕೇಂದ್ರ ಸರ್ಕಾರ ಜಾರಿ ತಂದಿರುವ ರೈತ ವಿರೋಧಿ ಕಾನೂನು ವಿರೋಧಿ ರೈತರು 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನನ್ನು ಹಿಂತೆಗೆದುಕೊಳ್ಳುವುದಕ್ಕೆ ಒಪ್ಪಿಲ್ಲ. ಈ ಮಧ್ಯೆ ರೈತ ಸಂಘಟನೆಗಳು ಡಿ.8 ರಂದು ಭಾರತ್ ಬಂದ್ ಗೆ ಕರೆ ನೀಡಿವೆ. ಈ ಬಂದ್ಗೆ ಕಾಂಗ್ರೆಸ್, ಟಿಆರ್ಎಸ್ ಸೇರಿದಂತೆ ಎಡಪಕ್ಷಗಳು ಬೆಂಬಲ ನೀಡಿವೆ.
ಕಳೆದ 10 ದಿನಗಳಿಂದ ದೆಹಲಿಗೆ ಸಂಪರ್ಕ ಕಲ್ಪಿಸುವ ಪ್ರಮುಖ 5 ಗಡಿ ಪ್ರದೇಶಗಳು ಸೇರಿದಂತೆ ದೇಶದ್ಯಾಂತ ರೈತ ಸಂಘಟನೆಗಳು ಪ್ರತಿಭಟನೆಯನ್ನು ನಡೆಸುತ್ತಿವೆ. ಕೇಂದ್ರ ಸರ್ಕಾರದೊಂದಿಗೆ ನಿನ್ನೆ ನಡೆದಿದ್ದ ಐದನೇ ಸುತ್ತಿನ ಮಾತುಕತೆ ಬಳಿಕವೂ ರೈತರ ಪ್ರತಿಭಟನೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮೇಲೆ ಮತ್ತಷ್ಟು ಒತ್ತಡ ಹೇರುವ ಹಿನ್ನೆಲೆಯಲ್ಲಿ ಭಾರತ್ ಬಂದ್ ಮಾಡಲು ಆಲ್ ಇಂಡಿಯಾ ಕಿಸಾನ್ ಫೇಡರೆಷನ್ ಅಧ್ಯಕ್ಷ ಪ್ರೇಮ್ ಸಿಂಗ್ ಭಾಗು ಭಾರತ್ ಬಂದ್ ಮಾಡುವುದಾಗಿ ತಿಳಿಸಿದ್ದರು.
‘ಭಾರತ್ ಬಂದ್’ಗೆ ಕಾಂಗ್ರೆಸ್ ಕೂಡ ಬೆಂಬಲ ಸೂಚಿಸಿದ್ದು, ಇದನ್ನ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಸ್ಪಷ್ಟಪಡಿಸಿದ್ದಾರೆ. ತೆಲಂಗಾಣದಲ್ಲೂ ಭಾರತ್ ಬಂದ್ಗೆ ಬೆಂಬಲ ವ್ಯಕ್ತವಾಗಿದೆ. ಆಡಳಿತ ಪಕ್ಷವಾದ ಟಿಆರ್ಎಸ್ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಅಂತ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ. ಉಳಿದಂತೆ ಆರ್ಜೆಡಿ, ಟಿಆರ್ಎಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು, ಸೆಂಟ್ರಲ್ ಟ್ರೆಡ್ ಯೂನಿಯನ್ ಬೆಂಬಲ ನೀಡಿವೆ. ಜೊತೆಗೆ ರಾಹುಲ್ ಗಾಂಧಿ ರೈತರಿಗೆ ಬೆಂಬಲ ನೀಡಿದ್ದು, ಅವರ ಬೇಡಿಕೆಗಳು ಈಡೇರಲಿ ಎಂದು ಹೇಳಿದ್ದಾರೆ.
ಈ ಮಧ್ಯೆ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಈ ಬಗ್ಗೆ ಮಾತನಾಡಿದ್ದು, ಬೆಂಗಳೂರನ್ನ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಡಿಸೆಂಬರ್ 8ರಂದು ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ. ಡಿಸೆಂಬರ್ 9ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತೀವಿ. ಇದಕ್ಕೆ ಎಲ್ಲಾ ಸಂಘಟನೆಗಳು ಬೆಂಬಲ ಕೊಡಬೇಕು ಅಂತ ಮನವಿ ಮಾಡಿದ್ದಾರೆ.
