in

ಗಣೇಶ ಪರಿಕಲ್ಪನೆ ಹಾಗೂ ಉತ್ಸವ : ಚಿತ್ರದುರ್ಗದಲ್ಲಿ ಗಣೇಶೋತ್ಸವ, ವಿಶೇಷ ಲೇಖನ ಜಿ.ಎಸ್.ಉಜ್ಜನಪ್ಪ

suddione whatsapp group join

ಸುದ್ದಿಒನ್, ಚಿತ್ರದುರ್ಗ :  ಈ ದೇಶದ ವೈದಿಕ ಸಂಪ್ರದಾಯದಲ್ಲಿ ಗಣೇಶ ಒಬ್ಬ ಜನಪ್ರಿಯ ದೇವತೆ. ಮಹಾರಾಷ್ಟ್ರದಲ್ಲಿ ಗಣೇಶನಿಗೆ ವಿಶೇಷ ಮನ್ನಣೆ ಇದೆ. ವಿನಾಯಕ ಚತುರ್ಥಿ ಭಾರತದಲ್ಲಿ ವೈಭವದಿಂದ ಆಚರಿಸುವ ಒಂದು ಹಬ್ಬ.

ಗಣೇಶ ವೇದ ಕಾಲದ ದೇವರಲ್ಲ. ಮಹಾಭಾರತದ ಆದಿಪರ್ವದಲ್ಲಿ ಗಣೇಶನ ಪ್ರಸ್ತಾಪವಿದೆ. ಅಲ್ಲಿ ಅವನು ವ್ಯಾಸ ಮುನಿಯ ಲಿಪಿಕಾರ. ಕ್ರಿ.ಶ. ಆರನೇ ಶತಮಾನಕ್ಕೆ ಮುಂಚೆ ಹಿಂದೂಗಳಲ್ಲಿ ಗಣೇಶ ಪೂಜೆ ಇರಲಿಲ್ಲವೆಂದು ಡಾ.ಬಿ.ಸಿ.ಮಜುಂದಾರರ ಅಭಿಪ್ರಾಯವಾಗಿದೆ. ( A History of Indian Literature Vol.1).

ಇದೇನೆ ಇದ್ದರೂ ಗಣೇಶ ವಿಘ್ನ ನಿವಾರಕ ಸಿದ್ಧಿದಾಯಕನೆಂದು ಅವನಿಗೆ ಅಗ್ರಪೂಜೆ ಸಲ್ಲುತ್ತದೆ. ಕೃಷಿಕಾರರು ಒಂದಿಷ್ಟು ಹಸಿ ಸಗಣಿಯನ್ನು ಲಿಂಗದಾಕಾರ ಮಾಡಿ ಹಸಿರು ಗರಿಕೆಯನ್ನು ಅದಕ್ಕೆ ಸಿಕ್ಕಿಸಿ ಗಣೇಶನೆಂದು ಪೂಜಿಸುತ್ತಾರೆ. ರೈತರ ಎಲ್ಲಾ ಕಾರ್ಯಗಳಲ್ಲಿ ಈ ಗಣೇಶನನ್ನು ಪೂಜಿಸುವುದು ತಲೆತಲಾಂತರದಿಂದ ಆಚರಿಸಿಕೊಂಡು ಬಂದಿರುವ ಪದ್ಧತಿಯಾಗಿದೆ.

ಸಾರ್ವಜನಿಕವಾಗಿ ಗಣೇಶಪೂಜೆ ಮತ್ತು ಉತ್ಸವವನ್ನು ಆಚರಣೆಗೆ ತಂದವರು ಮಹಾನ್ ದೇಶಪ್ರೇಮಿ ಮತ್ತು ನಿರ್ಭೀತ ಹೋರಾಟಗಾರರಾಗಿದ್ದ ಬಾಲಗಂಗಾಧರ ಇವರು ಸ್ವಾತಂತ್ರ್ಯಾಂದೋಲನಕ್ಕೆ ಜನಜಾಗೃತಿ ಮೂಡಿಸುವ ಸಲುವಾಗಿ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಜನೆ, ಸಂಗೀತ ಮತ್ತು ಉಪನ್ಯಾಸಗಳ ಮೂಲಕ ಜನಾಕರ್ಷಣೆ ಮಾಡಿ ಸ್ವಾತಂತ್ರ್ಯ ಪ್ರೇಮವನ್ನು ಜನರಲ್ಲಿ ಬಿತ್ತಿದರು. ಇದು ಅತ್ಯಂತ ಆಕರ್ಷಕವಾಗಿ ಜನರ ಮನ್ನಣೆ ಮತ್ತು ಪ್ರಚಾರವನ್ನು ಪಡೆಯಿತು.

ಕೆಲವೇ ವರ್ಷಗಳಲ್ಲಿ ಮಹಾರಾಷ್ಟ್ರವನ್ನು ದಾಟಿ ಇತರೆ ರಾಜ್ಯಗಳಲ್ಲಿ ಇದು ಆಚರಣೆಗೆ ಬಂದಿತು. ಆರಂಭದಲ್ಲಿ ನಗರದ/ ಊರಿನ ಒಂದು ಪ್ರಮುಖ ವೃತ್ತ, ಚೌಕ ಅಥವಾ ದೇವಾಲಯದ ಆವರಣದಲ್ಲಿ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಗೀತ ಗೋಷ್ಠಿಯನ್ನು ಏರ್ಪಡಿಸುತ್ತಿದ್ದರು. ಇದರಿಂದ ನಾಡಿನ ಶ್ರೇಷ್ಠ ಗಾಯಕರು, ಉಪನ್ಯಾಸಕಾರರು ಹೆಚ್ಚು ಹೆಚ್ಚು ಪರಿಚಿತರಾದರು.

ಚಿತ್ರದುರ್ಗದಲ್ಲಿ ಗಣೇಶೋತ್ಸವ; ನಾನು ಚಿತ್ರದುರ್ಗಕ್ಕೆ ಆಗಮಿಸಿದ್ದು 1968ರ ಜುಲೈನಲ್ಲಿ ನನ್ನ ಸ್ನೇಹಿತರಾಗಿದ್ದ ಎಚ್.ವಿ.ನಾಗೇಂದ್ರಪ್ಪ ಜೆಜೆ ಟ್ಯುಟೋರಿಯಲ್ಸ್ ಸ್ಥಾಪಿಸಿಕೊಂಡು ಹೈಸ್ಕೂಲ್‍ನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಪಾಠ ಮಾಡುತ್ತಾ ಜನಪ್ರಿಯರಾಗಿದ್ದರು. ಒಂದು ಸಂಜೆ ಗಣೇಶೋತ್ಸವದ ಮೀಟಿಂಗ್ ಇದೆ ಅದರಲ್ಲಿ ಭಾಗವಹಿಸಿ ಬರುತ್ತೇನೆಂದು ಹೋಗಿದ್ದರು. ನಾನು ವಿದ್ಯಾಭ್ಯಾಸ ಮಾಡಿದ್ದ ತುಮಕೂರಿನಲ್ಲಿ ಅದ್ದೂರಿ ಗಣೇಶೋತ್ಸವ ಮಾಡಿದ್ದು ನೆನಪಿಲ್ಲ.

ಕೆಲವೇ ತಿಂಗಳಲ್ಲಿ ಆನೇಬಾಗಿಲ ಸಮೀಪ ಒಂದು ಮಂಟಪವನ್ನು ನಿರ್ಮಿಸಿ ಅಲ್ಲಿ ಕೆಲವು ಕ್ವಿಂಟಾಲ್ ಭಾರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಜೆಯಲ್ಲಿ ಸಂಗೀತಗೋಷ್ಠಿಗಳನ್ನ ಏರ್ಪಡಿಸುತ್ತಿದ್ದರು. ಅಣ್ಣಪ್ಪ ಶೆಟ್ಟರು, ಕೆ.ಎಚ್.ಸತ್ಯನಾರಾಯಣರಾವ್ ಮುಂತಾದವರು ‘ಪ್ರಸನ್ನ ಗಣಪತಿ ಮಹೋತ್ಸವ ಸಮಿತಿ ಹೆಸರಿನಲ್ಲಿ ಈ ಉತ್ಸವವನ್ನು ಏರ್ಪಡಿಸುತ್ತಿದ್ದರು. ಶ್ರೇಷ್ಠ ಗಾಯಕರಾದ ಎಂ.ಬಾಲಮುರಳಿಕೃಷ್ಣ ಅನೇಕ ವಾದ್ತ ಪರಿಣತರು ಮತ್ತು ಸಂಗೀತಗಾರರು ಗಣೇಶ ಸನ್ನಿಧಿಯಲ್ಲಿ ತಮ್ಮ ಸಂಗೀತ ಸುಧೆಯನ್ನು ಕೇಳಿಸುತ್ತಿದ್ದರು. ಉತ್ಸವದ ಕೊನೇ ರಾತ್ರಿ ಗಣೇಶ ಮೂರ್ತಿಯನ್ನು ಮೆರವಣಿಗೆ. ಇದರಲ್ಲಿ ಹೆಚ್ಚಾಗಿ ತಮಿಳುನಾಡಿನ ವಾದ್ಯಕಾರರು, ನರ್ತಕಿಯರು ಕೀಲು ಕುದುರೆ ಇತ್ಯಾದಿ ಪ್ರದರ್ಶಕರು ನೋಡುಗರನ್ನು ರಂಜಿಸುತ್ತಿದ್ದರು. ರಾತ್ರಿಯೆಲ್ಲಾ ಮೆರವಣಿಗೆ ಮಾಡಿ ಗಣೇಶ ಮೂರ್ತಿಯನ್ನು ಸಂತೆ ಹೊಂಡದ ಬಳಿಗೊಯ್ದು ಅಲ್ಲಿ ರಥವನ್ನು ನಿಲ್ಲಿಸುತ್ತಿದ್ದರು.

ಮರುದಿನ ರಾತ್ರಿ ಸಂತೆಹೊಂಡದಲ್ಲಿ ತೆಪ್ಪವನ್ನು ಮಾಡಿ ಗಣೇಶಮೂರ್ತಿಯನ್ನು ಅದರಲ್ಲಿ ಪ್ರತಿಷ್ಠಾಪಿಸಿ, ತೆಪ್ಪದಲ್ಲಿ ಸಂಗೀತ ಗೋಷ್ಠಿಯ ಏರ್ಪಡಿಸಲಾಗುತ್ತಿತ್ತು. ಇದರಲ್ಲಿ ಕೆಲವು ಗೀತೆಗಳನ್ನು ಹಾಡಿದ ನೆನಪು ಇದೆ. ಹೊಂಡದಲ್ಲಿ ತೆಪ್ಪ ಒಂದು ಸುತ್ತು ಬರಲು ಒಂದು ಗಂಟೆಯಾಗುತ್ತಿತ್ತು. ಇದನ್ನು ನೋಡಿ ಕಣ್ತುಂಬಿಕೊಳ್ಳಲು ದುರ್ಗದ ಬಹುತೇಕ ನಾಗರಿಕರು ಆಗಮಿಸುತ್ತಿದ್ದುದೇ ವಿಶೇಷ. ಬೆಳಗಿನಲ್ಲಿ ಹತ್ತಾರು ಈಜುಗಾರರು ಹೊಂಡದಲ್ಲಿಳಿದು ಗಣೇಶಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿ ಕೃತಾರ್ಥರಾದೆವೆಂದು ಭಾವಿಸುತ್ತಿದ್ದರು. ಆದರೆ ಇವರ ಭಕ್ತಿ ಸಂಭ್ರಮಗಳಲ್ಲಿ ಹೊಂಡದಲ್ಲಿ ಟನ್‍ಗಟ್ಟಲೆ ಮಣ್ಣು ತುಂಬಿಸುತ್ತೇವೆ ಎಂಬ ವಿವೇಕ ಮೂಡಿರಲಿಲ್ಲ. ಆಗಿನ ಜಿಲ್ಲಾಡಳಿತವೂ ಇದರಲ್ಲಿ ಸಂಭ್ರಮಿಸುತ್ತಿತ್ತು.

ಮದಕರಿ ಗಣಪತಿ; ಪ್ರಸನ್ನ ಗಣಪತಿ ಪ್ರತಿಷ್ಠಾಪನೆಯಿಂದ ಉತ್ತೇಜಕರಾದ ದೊಡ್ಡಪೇಟೆಯ ಉತ್ಸಾಹಿಗಳು ‘ಮದಕರಿ ಗಣೇಶ’ ಹೆಸರಿನಲ್ಲಿ ರಂಗಯ್ಯನ ಬಾಗಿಲ ಬಲಭಾಗದಲ್ಲಿ ಮಂಟಪ ನಿರ್ಮಿಸಿ ಕ್ವಿಂಟಾಲ್‍ಗಟ್ಲೆ ಭಾರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕೆಲವು ವರ್ಷ ಸಂಗೀತಗಾರರನ್ನು ಕರೆಸಿ ಗೋಷ್ಠಿ ಏರ್ಪಡಿಸುತ್ತಿದ್ದರು.

ಇಲ್ಲಿನ ಸಭಾಮಂಟಪದಲ್ಲಿ ವಾರ್ತಾ ಇಲಾಖೆ ಅಧಿಕಾರಿಯಾಗಿದ್ದ ಎಂ.ಕೆ.ಮಲ್ಲಿಕಾರ್ಜುನ ಅವರು ಹೆಗ್ಗೋಡಿನ ‘ನೀನಾಸಂ’ ಕಲಾವಿದರಿಂದ ಜನಪ್ರಿಯ ಜಾನಪದ ನಾಟಕ ‘ಸಂಗ್ಯಾಬಾಳ್ಯಾ’ವನ್ನು ಏರ್ಪಡಿಸಿದ್ದರು. ಅದು ಬಿಟ್ಟರೆ ವಾದ್ಯಗೋಷ್ಠಿಗಳನ್ನು ಆಹ್ವಾನಿಸಿ ಅಬ್ಬರದ ಚಿತ್ರಗೀತೆಗಳ ಹಾಡುವಿಕೆಯನ್ನು ಏರ್ಪಡಿಸಲಾಗುತ್ತಿತ್ತು.
ಇದರಿಂದ ಉತ್ತೇಜನ ಪಡೆದ ಯುವಕರು ಬೀದಿಗಳಲ್ಲಿ ಉಪ ನಗರಗಳಲ್ಲಿ ಗಣೇಶೋತ್ಸವ ಏರ್ಪಡಿಸುವುದು ಆಚರಣೆಗೆ ಬಂದಿತ್ತು. ಇತ್ತೀಚೆಗೆ ಹಿಂದೂ ಮಹಾಗಣಪತಿ ಆಚರಣೆ ಆರಂಭಗೊಂಡಿದೆ.

ಕಸಗುಡಿಸಿದ ಜಿಲ್ಲಾಧಿಕಾರಿ; ಚಿತ್ರದುರ್ಗದಲ್ಲಿ ಯಾವುದಾದರೂ ಅಂಗಡಿ ಆರಂಭಗೊಂಡರೆ ಅಂಗಡಿ ಮುಂದೆ ಹೊಸ ಕೆಂಪು ಮಣ್ಣು (ಖeಜ ಅoಡಿಠಿeಣ)  ಹರಡುವುದು ರೂಢಿ. ಕಾಲ ಕ್ರಮೇಣ ಈ ಮಣ್ಣು ಮಳೆಗಾಳಿಗಳಿಂದ ರಸ್ತೆಗೆ ಜರುಗಿ ರಸ್ತೆಯ ಇಕ್ಕೆಲಗಳಲ್ಲಿ ಧೂಳನ್ನು ಉಂಟು ಮಾಡುತ್ತದೆ. ಈ ಧೂಳಿನಿಂದ ಊರಿನ ನಾಗರೀಕರು ಅಲರ್ಜಿ ಸಂಬಂಧಿತ ಸೋಂಕುಗಳಿಂದ ನರಳುತ್ತಿದ್ದಾರೆ.

ಚಿತ್ರದುರ್ಗಕ್ಕೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ಕೆ.ಅಮರನಾರಾಯಣರು ಅಧಿಕಾರವಹಿಸಿಕೊಂಡ ತಮ್ಮ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಬರಡು ಗುಡ್ಡಗಳ ಹಸರೀಕರಣ ಮತ್ತು ನಗರ ಸ್ವಚ್ಚತೆ ಬಗ್ಗೆ ಹೇಳಿಕೊಂಡಿದ್ದರು. ಅದಕ್ಕೆ ಪತ್ರಕರ್ತರಾರೂ ಅಷ್ಟೊಂದು ಮಹತ್ವ ನೀಡಿರಲಿಲ್ಲ. ಮುಂದೆ ಕೆಲವೇ ತಿಂಗಳುಗಳಲ್ಲಿ ಅವರು ನಗರದ ರಸ್ತೆಯ ಮಣ್ಣು ತೆಗೆಸುವುದು, ಗುಡ್ಡಗಳಲ್ಲಿ ಸಸಿ ನೆಡಿಸುವ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಅಚ್ಚರಿ ಮೂಡಿಸಿತ್ತು. ಅವರ ಪ್ರೇರಣೆಯಿಂದ ಕೋಟೆಯೊಳಗಿನ ಮತ್ತು ಹೊರಗಿನ (ಸಂತೆಹೊಂಡವು ಸೇರಿ) ಹೊಂಡಗಳು ಸ್ವಚ್ಚಗೊಂಡವು. ಜೋಗಿ ಮರಡಿ ಗಿರಿಧಾಮ ಮತ್ತು ಆಡುಮಲ್ಲೇಶ್ವರದ ಪರಿಸರ ಮತ್ತು ಚಂದ್ರವಳ್ಳಿ, ಧವಳಪ್ಪನ ಗುಡ್ಡ ಪ್ರದೇಶ ಸ್ವಚ್ಚಗೊಂಡವು. ಚಂದ್ರವಳ್ಳಿ ಕೆರೆಯಲ್ಲಿ ಟನ್‍ಗಟ್ಟಲೆ ಮಣ್ಣಿನ ಗಣೇಶ ವಿಸರ್ಜನೆ ನಿಂತಿಲ್ಲ. ನಮ್ಮ ನಿಸರ್ಗಧಾಮಗಳನ್ನು ನಾವೇ ಹಾಳುಗೆಡವಿದರೆ ಅವನ್ನು ಸುಸ್ಥಿತಿಗೆ ತರಲು ಯಾರು ಪ್ರಯತ್ನಿಸುವುದಿಲ್ಲ.

 

– ಜಿ.ಎಸ್.ಉಜ್ಜನಪ್ಪ, ಹಿರಿಯ ಪತ್ರಕರ್ತರು,
ಚಿತ್ರದುರ್ಗ

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಕೋಟೆನಾಡಿನ ಹೆಗ್ಗಳಿಕೆ ‘ಹಿಂದೂ ಮಹಾಗಣಪತಿ’

ಉಡುಪಿಯಲ್ಲೂ ರದ್ದಾಯ್ತು ವೀಕೆಂಡ್ ಕರ್ಫ್ಯೂ