ದೆಹಲಿ.ಜುಲೈ.29: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದ ಸುಮಾರು ಎರಡು ವರ್ಷಗಳ ನಂತರ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ ಅವರ ವಿರುದ್ಧದ ಕಾನೂನು ಕ್ರಮಗಳನ್ನು ಸುಪ್ರೀಂ ಕೋರ್ಟ್ ಬುಧವಾರ ಮುಕ್ತಾಯಗೊಳಿಸಿದೆ. ಕೇಂದ್ರ ತನಿಖಾ ದಳದ (ಸಿಬಿಐ) ಮುಕ್ತಾಯ ವರದಿಗಳನ್ನು ಸಹ ನ್ಯಾಯಾಲಯ ಸ್ವೀಕರಿಸಿದೆ ಮತ್ತು ಅವರನ್ನು ಆರೋಪಿಯಾಗಿ ಸಮನ್ಸ್ ಜಾರಿ ಮಾಡಿದ್ದ 2015 ರ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, ಡಾ. ಮನ್ಮೋಹನ್ ಸಿಂಗ್ ಅವರ ಅಗಲಿಕೆಯ ನಂತರ ಈ ಪ್ರಕರಣವು ಕಾನೂನಾತ್ಮಕವಾಗಿ ನಿರರ್ಥಕಗೊಂಡಿದ್ದರೂ, ಪ್ರಕರಣದ ಗುಣಾವಗುಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅಂತಿಮ ನಿರ್ಧಾರಕ್ಕೆ ಬಂದಿದೆ. ಒಡಿಶಾದ ‘ತಾಳಬೀರಾ-2’ ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಕ್ಲೋಸರ್ ರಿಪೋರ್ಟ್ಗಳನ್ನು ತಿರಸ್ಕರಿಸಲು ಯಾವುದೇ ‘ಸಮರ್ಥನೀಯ ಮತ್ತು ಬಲವಾದ ಕಾರಣಗಳು’ ಕಂಡುಬಂದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
1993 ಮತ್ತು 2010 ರ ನಡುವೆ ನಡೆದ ಕಲ್ಲಿದ್ದಲು ಬ್ಲಾಕ್ ಹಂಚಿಕೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ದೇಶಾದ್ಯಂತ ದೊಡ್ಡ ರಾಜಕೀಯ ಬಿರುಗಾಳಿ ಎದ್ದಿತ್ತು. ಈ ಹಿನ್ನೆಲೆಯಲ್ಲಿ 2014 ರಲ್ಲಿ ಸುಪ್ರೀಂ ಕೋರ್ಟ್ ಹಲವು ಕಲ್ಲಿದ್ದಲು ಬ್ಲಾಕ್ ಹಂಚಿಕೆಗಳನ್ನು ರದ್ದುಗೊಳಿಸಿತ್ತು. ಆದರೆ, ಮನ್ಮೋಹನ್ ಸಿಂಗ್ ಅವರ ವಿರುದ್ಧ ತನಿಖೆ ನಡೆಸಿದ್ದ ಸಿಬಿಐ, ಅವರ ವಿರುದ್ಧ ಯಾವುದೇ ಪೂರಕ ಸಾಕ್ಷ್ಯಾಧಾರಗಳಿಲ್ಲವೆಂದು ತಿಳಿಸಿ ಕ್ಲೋಸರ್ ರಿಪೋರ್ಟ್ ಸಲ್ಲಿಸಿತ್ತು. ಆದಾಗ್ಯೂ, 2015 ರಲ್ಲಿ ವಿಶೇಷ ಸಿಬಿಐ ಕೋರ್ಟ್ ಆ ವರದಿಯನ್ನು ತಳ್ಳಿಹಾಕಿ ಸಿಂಗ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

ಸಿಂಗ್ ಅವರ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಪೂರ್ಣವಾಗಿ ರದ್ದುಗೊಳಿಸುವುದರೊಂದಿಗೆ, ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಅವರ ಮೇಲಿದ್ದ ಸುದೀರ್ಘ ಆರೋಪಗಳಿಗೆ ತೆರೆಬಿದ್ದಿದ್ದು, ಮರಣೋತ್ತರವಾಗಿ ಅವರಿಗೆ ಸಂಪೂರ್ಣ ನಿರ್ದೋಷಿ ಎಂಬ ಗೌರವ ಸಿಕ್ಕಂತಾಗಿದೆ.









