ಚರ್ಚ್‍ನೊಳಗೆ ಕ್ರೈಸ್ತ ವಿರೋಧಿ ಸಂಘಟನೆಗಳ ಅಕ್ರಮ ಪ್ರವೇಶ ತಡೆಯುವಂತೆ ಕ್ರೈಸ್ತ ಧರ್ಮಗುರುಗಳ ಒತ್ತಾಯ

suddionenews
2 Min Read

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಸುದ್ದಿಒನ್, ಚಿತ್ರದುರ್ಗ, (ನ.17): ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಏಸುಕ್ರಿಸ್ತನ ಹಿಂಬಾಲಕರುಗಳು ನಾವು ಯಾರನ್ನು ಬಲವಂತವಾಗಿ ಮತಾಂತರ ಮಾಡುವುದಿಲ್ಲ ಎಂದು ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಜಿಲ್ಲಾಧ್ಯಕ್ಷ ರೆವೆರೆಂಡ್ ಫಾದರ್ ಸಜಿ ಜಾರ್ಜ್ ಹೇಳಿದರು.

ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಯಾವುದೇ ಜಾತಿ, ಧರ್ಮದ ತಾರತಮ್ಯವಿಲ್ಲದೆ ಎಲ್ಲರನ್ನು ಸಮಾನವಾಗಿ ನೋಡುವುದೇ ನಮ್ಮ ಧ್ಯೇಯ. ಪ್ರೀತಿ, ಕರುಣೆ, ಶಾಂತಿ ನಮ್ಮ ಮೂಲ ಮಂತ್ರ. ಎಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತದೋ ಅಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಕ್ರೈಸ್ತ ಸಮುದಾಯದ ಅನೇಕ ಶಾಲಾ-ಕಾಲೇಜು, ಆಸ್ಪತ್ರೆಗಳಿವೆ. ಅಲ್ಲಿ ಹಿಂದುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಯಾರಿಗಾದರೂ ಬಲವಂತವಾಗಿ ಮತಾಂತರ ಮಾಡಿರುವ ಒಂದು ಪ್ರಕರಣವಾದರೂ ಇದ್ದರೆ ದಾಖಲೆ ಸಮೇತ ತೋರಿಸಿ ಎಂದು ಸವಾಲು ಹಾಕಿದರು.

ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯವಿದೆ. ಶಿಕ್ಷಣದ ಜೊತೆ ಮಾನವೀಯ ಮೌಲ್ಯ ಹೇಳಿಕೊಡುತ್ತೇವೆಯೇ ವಿನಃ ಯಾರನ್ನು ನಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ್ದೇವೆ. ಉಚಿತವಾಗಿ ಅಂಬ್ಯಲೆನ್ಸ್ ಸೇವೆಯನ್ನು ಒದಗಿಸಿದ್ದೆವು ಅಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿಯೇ ನಮ್ಮ ಧರ್ಮಕ್ಕೆ ಬಲವಂತವಾಗಿ ಬೇರೆಯವರನ್ನು ಮತಾಂತರ ಮಾಡಿಕೊಳ್ಳುವ ಕೆಲಸಕ್ಕೆ ಕೈಹಾಕಲಿಲ್ಲ ಎಂದರು.

ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ರಾಜಶೇಖರ್ ಮಾತನಾಡುತ್ತ ಕ್ರೈಸ್ತ ಧರ್ಮದಲ್ಲಿ ಅನೇಕ ಪಂಗಡ, ಸಂಘ, ಸಂಸ್ಥೆಗಳಿವೆ. ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಕ್ರೈಸ್ತ ಮಿಷನರಿಗಳು ರಾಜ್ಯದಲ್ಲಿ ವ್ಯಾಪಕವಾಗಿ ಬಲವಂತದ ಮತಾಂತರ ಮಾಡುತ್ತಿದ್ದಾರೆಂದು ಕಳೆದ ಸೆಪ್ಟಂಬರ್‍ನಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಮತಾಂತರ ತಡೆಯಲು ಹೋದವರ ಮೇಲೆ ಜಾತಿ ನಿಂದನೆ, ಅತ್ಯಾಚಾರದ ದೂರು ದಾಖಲಿಸುತ್ತಾರೆಂದು ಆಪಾದಿಸಿರುವುದರಲ್ಲಿ ಸತ್ಯಾಂಶವಿಲ್ಲ. ಕ್ರಿಶ್ಚಿಯನ್ನರನ್ನು ಅವಹೇಳನವಾಗಿ ಮಾತನಾಡಿದ್ದಾರೆ.

ಮತಾಂತರ ಮಸೂದೆ ನಿಷೇಧ ಕಾಯಿದೆ ತರಲು ಹೊರಟಿರುವ ಸರ್ಕಾರ ಧರ್ಮ ಧರ್ಮಗಳ ನಡುವೆ ಅಡ್ಡಗೋಡೆ ಕಟ್ಟಲು ಹೊರಟಂತಿದೆ. ಕೆಲವರು ಅಕ್ರಮವಾಗಿ ಚರ್ಚ್‍ಗೆ ನುಗ್ಗಿ ಹಲ್ಲೆ ನಡೆಸುತ್ತಿದ್ದಾರೆ. ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸಿದ್ದೇವೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕ್ರೈಸ್ತ ಜನಾಂಗಕ್ಕೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಪ್ರಶಾಂತ್ ಮಾತನಾಡಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಕ್ರೈಸ್ತರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಬಲವಂತವಾಗಿ ಮತಾಂತರವಾಗಿದೆ ಎನ್ನುವುದಕ್ಕೆ ದಾಖಲೆಯಿಲ್ಲ. ಯಾವುದಾದರೂ ಒಂದು ಕಾನೂನು ಕಾಯಿದೆ ಜಾರಿಗೆ ತರಬೇಕಾದರೆ ಏನಾದರೂ ಅನಾಹುತ, ಘಟನೆಗಳು ನಡೆದಿರಬೇಕು. ಏನು ಇಲ್ಲದೆ ಸದನದಲ್ಲಿ ಮತಾಂತರ ನಿಷೇದ ಮಸೂದೆ ಕಾನೂನು ಜಾರಿಗೆ ಮಂಡಿಸಿರುವುದರಲ್ಲಿ ಅರ್ಥವಿಲ್ಲ. ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಹೋಗುವುದು ಅವರವರ ಸ್ವಂತ ವಿಚಾರ. ಎಲ್ಲರಿಗೂ ಹಕ್ಕಿದೆ. ಬಲವಂತ ಮತಾಂತರ ಮಾಡುತ್ತಿದ್ದೇವೆನ್ನುವುದು ತಪ್ಪು. ಆಳುವ ಸರ್ಕಾರಗಳು ಮೊದಲು ಸತ್ಯಾಂಶವನ್ನು ತಿಳಿಯಲಿ. ಆಧಾರ ರಹಿತವಾದ ಸಂಗತಿಗಳನ್ನು ಬಿಟ್ಟು ರಾಜ್ಯದ ಅಭಿವೃದ್ದಿ ಕಡೆ ಚುನಾಯಿತ ಪ್ರತಿನಿಧಿಗಳು ಗಮನ ಕೊಡಲಿ ಎಂದು ಎಚ್ಚರಿಸಿದರು.

ಚಿತ್ರದುರ್ಗ ಜಿಲ್ಲಾ ಪಾಸ್ಟರ್ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷ ರೆ.ಅಲೆಕ್ಸಾಂಡರ್, ಗೌರವಾಧ್ಯಕ್ಷ ರೆ.ಸೋಲೋಮನ್‍ರಾಜ್, ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಕಾರ್ಯದರ್ಶಿ ರೆ.ಫಾದರ್ ಎಂ.ಎಸ್.ರಾಜು, ಚಿತ್ರದುರ್ಗ ಜಿಲ್ಲಾ ಪಾಸ್ಟರ್ ಅಸೋಸಿಯೇಷನ್ ಅಧ್ಯಕ್ಷ ರೆ.ಅಬ್ರಹಾಮ್, ಶುಭ ಸಂದೇಶ ಪ್ರಾರ್ಥನಾ ಮಂದಿರದ ಅಧ್ಯಕ್ಷ ಡಾ.ರೆ.ಅಮರ್, ಭಾರತೀಯ ಕ್ರೈಸ್ತ ಮಾನವ ಹಕ್ಕುಗಳ ಒಕ್ಕೂಟ ಹಾಗೂ ಚಿತ್ರದುರ್ಗ ಕ್ರೈಸ್ತರ ಮಾನವ ಹಕ್ಕುಗಳ ಐಕ್ಯತಾ ವೇದಿಕೆಯವರು ಪತ್ರಿಕಾಗೋಷ್ಟಿಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *