ಕೋಟೆನಾಡು ಚಿತ್ರದುರ್ಗ ಜಿಲ್ಲೆ ಐತಿಹಾಸಿಕ ದೃಷ್ಠಿಯಿಂದಲೂ ಮತ್ತು ಪೌರಾಣಿಕ ದೃಷ್ಠಿಯಿಂದಲೂ ಪ್ರಸಿದ್ದವಾದ ಸ್ಥಳ. ಚಾಲುಕ್ಯರು, ಹೊಯ್ಸಳರು, ದೇವಗಿರಿಯ ಯಾದವರು 10ರಿಂದ 14ನೇ ಶತಮಾನದ ಮಧ್ಯದವರೆಗೆ ಇಲ್ಲಿ ರಾಜ್ಯಭಾರ ಮಾಡಿದಂತೆ ಕಂಡುಬರುತ್ತದೆ.
ನಂತರ ಇದು ವಿಜಯನಗರದ ಸಂಸ್ಥಾನಕ್ಕೆ ಒಳಪಟ್ಟು ಸಾಮಂತ ರಾಜ್ಯವಾಗಿ ಪಾಳೆಯಗಾರರಿಂದ ಆಳಲ್ಪಟ್ಟಿತು. ವಿಜಯನಗರದ ರಾಜ್ಯದ ಆಡಳಿತವು ಸಡಿಲವಾಗಲು ಇತರ ರಾಜ್ಯಗಳಂತೆ ಚಿತ್ರದುರ್ಗವೂ ಸಹ ಸ್ವತಂತ್ರ ರಾಜ್ಯವಾಗಿ ಪರಿಗಣಮಿಸಿತು. ನಂತರ ಹೈದರ್ ಆಲಿ, ಟಿಪ್ಪು ಬಳಿಕ ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟು, ನಂತರ ಇಂಗ್ಲೀಷರ ಕೈವಶವಾಯಿತು.
ಈ ಪಟ್ಟಣವು ಸಮುದ್ರಮಟ್ಟಕ್ಕೆ 2383 ಅಡಿ ಎತ್ತರದಲ್ಲಿದ್ದು ಬಹಳ ಉತ್ತಮ ಮತ್ತು ಸುರಕ್ಷಿತ ಸ್ಥಳವೆಂದು ಅನ್ನಿಸಿಕೊಂಡಿದೆ.
ಇಲ್ಲಿನ ಜನರು ಸರಳರು, ಸ್ನೇಹಪರರು. ಪೌರಾಣಿಕ ದೃಷ್ಟಿಯಿಂದ ನೋಡಿದರೆ ಇದು ಬಹಳ ಪುಣ್ಯಕ್ಷೇತ್ರವೆಂದು ವೇದ್ಯವಾಗುತ್ತದೆ. ಹಿಡಂಬಾಸುರನ ವನವಾಗಿದ್ದು ಪಾಂಡವರು ಲಾಕ್ಷಗ್ರಹ ದಹನಾನಂತರ ಇಲ್ಲಿಗೆ ಬಂದ ಹಾಗೆಯೂ ನಂತರ ಭೀಮಸೇನ ದೇವರು ಹಿಡಿಂಬಾಸುರನನ್ನು ಸಂಹಾರ ಮಾಡಿದಂತೆ ಪ್ರಸಿದ್ದವಾಗಿದೆ.
ಮೇಲುದುರ್ಗದಲ್ಲಿ ಕಟ್ಟಲ್ಪಟ್ಟಿರುವ ಶ್ರೀ ವೇಣುಗೋಪಾಲಸ್ವಾಮಿಯ ದೇವಸ್ಥಾನವೂ ಮತ್ತು ಪುಷ್ಕರಣಿಯೂ ಅದ್ಯಾಪಿ ಪ್ರೇಕ್ಷಕರಿಗೆ ಯಾತ್ರಾ ಸ್ಥಳವಾಗಿದೆ.
ಹಿಡಂಬಾಸುರನ ವಧೆಯಾದ ನಂತರ ಶ್ರೀ ವೇದವ್ಯಾಸ ದೇವರು ಪಾಂಡವರಿಗೆ ದರ್ಶನವಿತ್ತು ಸಮಾಧಾನಪಡಿಸಿ ಸದುಪದೇಶ ಮಾಡಿದ ಪುಣ್ಯಸ್ಥಳವು ಆಗಿರುತ್ತದೆ. ಹಿಡಂಬಾವನವೆಂಬುದು ಮಹಾಭಾರತದಿಂದ ವೇದ್ಯವಾಗುತ್ತೆ. ಅಂದ ಮೇಲೆ ಹರಿವಾಯುಗುರುಗಳಿಗೆ ಆವಾಸ ಸ್ಥಾನವಾಗಿ, ಭಕ್ತಾದಿಗಳಿಗೆ ನೆಲೆಬೀಡಾಗಿತ್ತೆಂದರೆ ಅತಿಶಯೋಕ್ತಿಯಾಗಲಾರದು.
ಶ್ರೀ ಗೋಪಾಲಸ್ವಾಮಿ ಬೆಟ್ಟದ ಉತ್ತರ ಭಾಗ (ಈಶಾನ್ಯ ದಿಕ್ಕಿಗೆ) ಬಸವನ ಬುರುಜು ಎಂಬ ಬತೇರಿಯಿದೆ. ಇದಕ್ಕೆ ಕೆಳಭಾಗದಲ್ಲಿ ಅಂಜುಮನ್ ರಸ್ತೆಗೆ ಹೊಂದಿಕೊಂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠವಿದೆ. ಇದು ಶ್ರೀ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆಡಳಿತಕ್ಕೆ ಒಳಪಟ್ಟಿರುತ್ತದೆ. ಇಲ್ಲಿ ಪಾಂಡವರು ಪೂಜೆ ಮಾಡಿದ್ದ ಶ್ರೀರಾಮಚಂದ್ರ ದೇವರ ಮತ್ತು ಶ್ರೀಹನುಮಂತ ದೇವರ ವಿಗ್ರಹಗಳಿಗೆ ಇಂದಿಗೂ ಶ್ರೀ ರಾಯರ ಬೃಂದಾನ ಸನ್ನಿಧಿಯಲ್ಲಿ ಪೂಜಾರಾಧನೆಗಳು ನೆರವೇರುತ್ತವೆ.
ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ಜೀವಿತಾವಧಿಯಲ್ಲಿ ಇಲ್ಲಿಗೆ ಎರಡು ಬಾರಿ ಭೇಟಿ ನೀಡಿದ್ದು ವಿಶೇಷ. ಇಲ್ಲಿನ ಜನರ ಪುಣ್ಯ ಎಂದೇ ಭಾವಿಸಲಾಗಿದೆ. ಇಷ್ಟೇ ಅಲ್ಲದೆ ಶ್ರೀ ರಾಘವೇಂದ್ರ ಮಠದಲ್ಲಿ ರಾಯರೇ ಅನುಗ್ರಹಿಸಿದ ಚಲ ಬೃಂದಾವನ ಇರುವುದು ವಿಶೇಷ. ಜತೆಗೆ ಇಲ್ಲಿನ ಹನುಮಂತ ದೇವರ ಬಾಲಕ್ಕೆ ಐದು ಗಂಟೆ ಇರುವುದು ವಿಶ್ವದ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಅಂತಹ ವಿಶೇಷ ಆಂಜನೇಯ ಮೂರ್ತಿ ಇಲ್ಲಿದೆ. ಈ ಕಾರಣಕ್ಕೆ ಚಿತ್ರದುರ್ಗದ ರಾಘವೇಂದ್ರ ಸ್ವಾಮಿಗಳ ಮಠ ನಾಡಿನ ಮಟ್ಟಿಗೆ ಅತ್ಯಂತ ಶ್ರದ್ಧಾ ಭಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ.
ಶ್ರೀ ರಾಘವೇಂದ್ರ ಸ್ವಾಮಿಗಳವರು ಸಶರೀರವಾಗಿ ಬೃಂದಾವನ ಪ್ರವೇಶ ಮಾಡಿ ಇಂದಿಗೆ 351 ವರ್ಷಗಳು ಸಂದಿರುತ್ತವೆ. ಶ್ರಾವಣ ಮಾಸದಲ್ಲಿ 351ನೇ ಆರಾಧನ ಮಹೋತ್ಸವ ದೇಶ ವಿದೇಶಗಳಲ್ಲೆಡೆ ವಿಜೃಂಭಣೆಯಿಂದ ಆಚರಣೆಯಾಗುತ್ತಿದೆ. ಮಂತ್ರಾಲಯದಲ್ಲಿ ಡಾ.ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಪಾದಂಗಳವರ ನೇತೃತ್ವದಲ್ಲಿ ಏಳು ದಿನಗಳ ಸಪ್ತ ರಾತ್ರೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ಚಿತ್ರದುರ್ಗದಲ್ಲಿ ಸ್ಥಾಪನೆ ಮಾಡಿರುವ ಬೃಂದಾವನವನ್ನು ರಾಯರ ಮೃತಿಕಾ (ಮಣ್ಣು)ದಿಂದ ಸ್ಥಾಪನೆ ಮಾಡಿದ್ದಲ್ಲ. ದೇಶದ ಎಲ್ಲೂ ಇಲ್ಲದ ವಿಶೇಷತೆ ಇಲ್ಲಿದೆ. ಈ ಕಾರಣಕ್ಕೆ ಚಿತ್ರದುರ್ಗದಲ್ಲಿರುವ ಶ್ರೀ ಮಠಕ್ಕೆ ವಿಶೇಷ ಆಕರ್ಷಣೆ ಇದೆ. ಸ್ವತಃ ಶ್ರೀ ರಾಘವೇಂದ್ರ ಸ್ವಾಮಿಗಳೇ ನಿರ್ಮಾಣ ಮಾಡಿದಂತ ಬೃಂದಾವನದ ಮಾದರಿ ಇಲ್ಲಿದೆ. ಅದುವೇ ಚಲ ಬೃಂದಾವನ. ಚಿತ್ರದುರ್ಗದ ಶ್ರೀ ಮಠದಲ್ಲಿ ಈಗಲೂ ಪೂಜಿಸಲ್ಪಡುತ್ತಿದೆ. ಇದನ್ನು ರಾಯರ ನಂತರದಲ್ಲಿ ಪೀಠಕ್ಕೆ ಬಂದ ಮೂರನೇ ಯತಿಗಳಾದ ಶ್ರೀ ಸುಮತೀಂದ್ರ ತೀರ್ಥರು ಚಿತ್ರದುರ್ಗಕ್ಕೆ ಬಂದಿದ್ದ ವೇಳೆ ಅವರಿಗೆ ಸ್ವಪ್ನ ಸೂಚಕವಾಗಿ ಇಲ್ಲಿಯೇ ಕೊಟ್ಟು ಹೋಗಿರುತ್ತಾರೆ.
ಶ್ರೀ ಸುಮತೀಂದ್ರ ತೀರ್ಥರು ಶ್ರೀ ಮಠದ ಪೀಠವನ್ನು ಆಲಂಕರಿಸಿದ ಮೇಲೆ ಶ್ರೀ ರಾಯರು ಅವರಿಗೆ ಸ್ವಪ್ನದಲ್ಲಿ ಹೀಗೆ ಆಜ್ಞೆ ಮಾಡಿದರಂತೆ. ಏನೆಂದರೆ “ಚಿತ್ರದುರ್ಗವು ನಮಗೆ ಬೇಕಾದ ಸ್ಥಳ. ನಮ್ಮ ಗುರುಗಳಾದ, ಪವಮಾನರ(ಶ್ರೀ ಆಂಜನೇಯ ಸ್ವಾಮಿ) ಸನ್ನಿಧಾನವು ಅಲ್ಲಿ ಇದೆ. ನನ್ನ ಭಕ್ತನಾದ ಶ್ರೀ ವೆಂಕಣ್ಣನ ವಂಶಜರಿಗೆ ಅನುಗ್ರಹ ಮಾಡಬೇಕು. ಆದ್ದರಿಂದ ನೀವು ಅಲ್ಲಿಗೆ ತಕ್ಷಣವೇ ಹೊರಡಿ” ಎಂದು ಸೂಚನೆಯಿತ್ತರಂತೆ.ಅದರಂತೆ
ಶ್ರೀ ಸುಮತೀಂದ್ರ ತೀರ್ಥರು ಸಮಸ್ತ ಪರಿವಾರ ಸಮೇತರಾಗಿ ರಾಜ ಮರ್ಯಾದಯಗಳೊಂದಿಗೆ ದುರ್ಗಕ್ಕೆ ದುಯಮಾಡಿಸಿರು. ಪುರದ್ವಾರದಲ್ಲಿ ಭಕ್ತರಿಗೆಲ್ಲಾ ಅನುಗ್ರಹ ಮಾಡಿ ಕಾಲವಿಳಂಬ ಮಾಡದೆ ಶ್ರೀ ರಾಯರು ಸೂಚಿಸಿದ್ದ ಕ್ಷೇತ್ರ (ಜಾಗ)ಕ್ಕೆ ತೆರಳಿದರು. ಶ್ರೀಹರಿವಾಯುಗಳು ಈ ಸ್ಥಳದಲ್ಲಿ ಇರುವುದು ಎಂದು ತಿಳಿಯಿತು. ಮರುದಿವಸ ಪರಿವಾರ ಸಮೇತ ಬಂದು ತಮ್ಮ ಸ್ವಪ್ನದಲ್ಲಿ ಸೂಚಿತವಾದ ಭೂಮಿಯನ್ನು ಅಗೆಸಿದಾಗ ಮಹಾಶಬ್ಧವಾಯಿತು. ನೋಡುತ್ತಾರೆ ಒಂದು ದೊಡ್ಡ ಸರ್ಪವು ಭೂಮಿಯಿಂದ ಹೆಡೆಯನ್ನು ಅಲ್ಲಡಿಸುತ್ತಾ ಹೊರಗೆ ಬಂದು ಶ್ರೀ ಸ್ವಾಮಿಗಳಿಗೆ ಮುಖ ಕೊಟ್ಟು ನೋಡಿ ಅದೃಶ್ಯವಾಯಿತು.
ಅಲ್ಲಿ ಲೋಹಮಯ ಶ್ರೀರಾಮಚಂದ್ರದೇವರ ದಿವ್ಯವಿಗ್ರಹ ಮತ್ತು ಶಿಲಾಮಯವಾದ ಬಾಲಕ್ಕೆ ಐದು ಗಂಟೆಗಳಿರುವ ವರದಹಸ್ತದ ಹನುಮಂತ ದೇವರ ವಿಗ್ರಹ ಕಾಣಿಸಿತು. ಈ ವಿಗ್ರಹಗಳು ಪಾಂಡವರಿಂದ ಪೂಜಿಸುತ್ತಿದ್ದ ವಿಗ್ರಹಗಳೇ ಆಗಿದ್ದವು ಎಂದು ಅವರಿಗೆ ಭಾಸವಾಯಿತು.
ಶ್ರೀ ಸುಮತೀಂದ್ರತೀರ್ಥರು ಈ ವಿಗ್ರಗಳನ್ನು ಶಾಸ್ತ್ರೋಕ್ತ ವಿಧಿಯಿಂದ ಪ್ರತಿಷ್ಠಾಪನೆ ಮಾಡಿಸಿ ತಾವೇ ಪೂಜಿಸಿ ವೆಂಕಣ್ಣನ ವಂಶಜನಾದ ರಾಘಪ್ಪನಿಗೆ ಅಲ್ಲಿನ ಪೂಜಾರಾಧನೆಯನ್ನು ನಡೆಸಿಕೊಂಡು ಹೋಗುವಂತೆ ಅಪ್ಪಣೆ ಮಾಡಿದರು. ಮತ್ತು ಅದೇ ಕಾಲದಲ್ಲಿ ತಾವು ಸಂಸ್ಥಾನದಲ್ಲಿ ಪೂಜಿಸುತ್ತಿದ್ದ ಶಿಲಾಮಯ ಶ್ರೀ ರಾಘವೇಂದ್ರ ಸ್ವಾಮಿಗಳ ಚಲ ಬೃಂದಾವನವನ್ನು ಅವರಿಗೆ ಕೊಟ್ಟು ಶ್ರೀ ರಾಯರ ಬೃಂದಾವನ ಪೂಜಾರಾಧನೆಯನ್ನು ಯಥಾವತ್ತಾಗಿ ಜರುಗಿಸಿಕೊಂಡುಬರಲು ಅಜ್ಞಾ ಮಾಡಿದರು.
ಈ ಚಲಬೃಂದಾವನವು ಹಿಂದೆ ಶ್ರೀ ಗುರುರಾಜರಿಗೆ ದಿವಾನ್ ವೆಂಕಣ್ಣನು ಮಾಡಿಸಿದ (ಮಂತ್ರಾಲಯದಲ್ಲಿ ಈಗ ಇರುವ) ಬೃಂದಾವನ ಶಿಲೆಯಲ್ಲಿ ಉಳಿದ ಶಿಲೆಯಲ್ಲಿ ಮಾಡಿಸಿದ್ದು ಎಂದು ಶ್ರೀ ಮಠದ ಇತಿಹಾಸದಿಂದ ತಿಳಿದು ಬಂದಿದೆ. ಮೇಲ್ಕಂಡ ವಿಗ್ರಹಗಳ ಪೂಜಾರಾಧನಾದಿಗಳು ಸಕ್ರಮವಾಗಿ ಏರ್ಪಡಿಸಿ ಅದರ ಮೇಲ್ವಿಚಾರಣೆ ನಡೆಸಿಕೊಂಡು ಬರಲು ತಮ್ಮ ಪ್ರೀತ್ಯಾಸ್ಪದರೂ, ಶ್ರೀ ಮಠದ ಶಿಷ್ಯರೂ, ಸಂಸ್ಥಾನದ ಪಂಡಿತರೂ ಆಗಿದ್ದ ಶ್ರೀ ಹುಲಿಹನುಮಂತಾಚಾರ್ಯರ ಪೂರ್ವಜರನ್ನು ಚಿತ್ರದುರ್ಗದಲ್ಲಿಯೇ ಇರಲು ಅಪ್ಪಣೆಯಿತ್ತರು. ಮುಂದೆ ಇದೇ ಚಿತ್ರದುರ್ಗದ ನಿವಾಸಿಗಳಾದ ಶ್ರೀ ಹುಲಿಹನುಮಂತಾಚಾರ್ಯರ ಪುತ್ರರಾದ ಶ್ರೀ ಹುಲಿ ಕೃಷ್ಣಾಚಾರ್ಯರು (ಶ್ರೀ ಸುವ್ರತೀಂದ್ರ ತೀರ್ಥರು) ಶ್ರೀ ಗುರುರಾಜರ ಪವಿತ್ರಪೀಠದಲ್ಲಿ 7 ವರ್ಷಗಳ ಕಾಲ ವಿರಾಜಮಾನರಾಗಿದ್ದರು. ಅವರು ವಾಸವಾಗಿದ್ದ ಪೂರ್ವಾಶ್ರಮದ ಮನೆಯನ್ನು ಇಂದಿಗೂ ಚಿತ್ರದುರ್ಗದಲ್ಲಿ ಕಾಣಬಹುದಾಗಿದೆ.
ಬಹುದಿನಗಳಿಂದ ಇಲ್ಲಿನ ಚಲ ಬೃಂದಾವನವನ್ನು ಸ್ಥಿರ ವೃಂದಾವನ್ನಾಗಿ ಮಾರ್ಪಡಿಸಬೇಕೆಂಬ ಆಸೆ ಅನೇಕರಿಗೆ ಇದ್ದಿತು. ಇದರ ಬಗ್ಗೆ ಶ್ರೀ ಹುಲಿಮನೆತನದ ದಿವಂಗತ ‘ವೇದಾಂತರತ್ನಂ’ ಶ್ರೀ ಪಾದ ಪುತ್ರ ಡಾ. ಹುಲಿ ಕೃ. ವೇದ ವ್ಯಾಸಾಚಾರ್ಯ ಪ್ರಯತ್ನಿಸಿದ್ದರು. ಆ ಪ್ರಯತ್ನದ ಫಲವಾಗಿ ಬಹುದಿನಗಳಾದರೂ ನೆರವೇರುವಂತಾದುದು ಸಂತೋಷಕರ. ಶ್ರೀ ಗುರುರಾಯರ ಮಹಾಪೀಠದಲ್ಲಿ ವಿರಾಜಮಾನರೂ, ಪೀಠಪರಂಪರೆಯಿಂದ ಬಂದ ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಂತ್ರಸಿದ್ಧಿಯನ್ನು ಪಡೆದವರೂ ಆದ ಶ್ರೀಮತ್ಪರಮಹಂಸೇತ್ಯಾದಿ ಬಿರುದಾಂಕಿತರಾದ ಶ್ರೀ ಮತ್ಪೂಜ್ಯ ಶ್ರೀ ಸುಯಮೀಂದ್ರತೀರ್ಥ ಶ್ರೀಪಾದಂಗಳವರು ಚಿತ್ರದುರ್ಗ ನಿವಾಸಿಗಳ ವಿಶೇಷ ಪ್ರಾರ್ಥನೆಯಂತೆ ಮಠಕ್ಕೆ ಸೇರಿದ ಈ ಬೃಂದಾವನ ಸನ್ನಿಧಿಗೆ ದಯಮಾಡಿಸಿ ದಿನಾಂಕ : 08-03-1962 (ಶ್ರೀ ಪ್ಲವನಾಮ ಸಂವತ್ಸರದ ಫಾಲ್ಗುಣ ಶುದ್ದ ಬಿದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳವರ 341 ನೇ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ (ಪೀಠಾರೋಹಣ) ಮಹೋತ್ಸವ ಪರ್ವಕಾಲದಲ್ಲಿ ತಮ್ಮ ಅಮೃತ ಹಸ್ತದಿಂದ ಶ್ರೀ ಗುರುರಾಜರ ಸ್ಥಿರಬೃಂದಾವನ ಪ್ರತಿಷ್ಠಾಪನಾ ಮಹೋತ್ಸವವನ್ನು ನೆರವೇರಿಸಿ ಕೊಡುವುದರ ಮೂಲಕ ಇಲ್ಲಿ ಶ್ರೀ ಗುರುರಾಜರ ವಿಶೇಷ ಸಾನ್ನಿಧ್ಯವುಂಟಾಗಿ, ತನ್ಮೂಲಕ ಇಲ್ಲಿ ಸೇವೆ ಮಾಡುವ ಇಲ್ಲಿನ ಶಿಷ್ಯವರ್ಗ ಹಾಗೂ ಭಕ್ತ ವರ್ಗದವರ ಇಷ್ಟಾರ್ಥಗಳೂ ಕ್ಷಿಪ್ರವಾಗಿ ಪೂರ್ಣವಾಗುವಂತೆ ಮಾಡಿಕೊಟ್ಟು ಜನತೆಯಲ್ಲಿ ಮಹದುಪಕಾರ ಮಾಡಿರುವುದು ಚಿತ್ರದುರ್ಗದ ಭಾಗ್ಯೋದಯ.
ಚಿತ್ರದುರ್ಗದ ಈ ಬೃಂದಾವನ ಸನ್ನಿಧಿಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಬೇಕೆಂದು ಶ್ರೀ ಮಠದ ಅಪ್ಪಣೆಯಾದಂತೆ ದಿವಂಗತ ಶ್ರೀಮಾನ್ ಭಟ್ಟರಹಳ್ಳಿ ನಾರಾಯಣರಾಯರು ಮತ್ತು ಅವರ ಮಕ್ಕಳು ಶ್ರದ್ಧಾ ಭಕ್ತಿಯಿಂದ ಶ್ರೀ ಗುರುರಾಜರ ಪೂಜಾರಾಧನೆಗಳನ್ನು ಮಾಡಿಕೊಂಡು ಅಭಿವೃದ್ಧಿ ಸ್ಥಿತಿಗೆ ತಂದರು. ಇದೇ ಪ್ರಕಾರ ಕೆಲಕಾಲ ಶ್ರೀ ಸೊನ್ನೆ ಸುಬ್ಬಣಾಚಾರ್ಯರು ಮಠದ ಆಜ್ಞೆಯಂತೆ ಸೇವೆ ಸಲ್ಲಿಸಿ ಅಭಿವೃದ್ಧಿ ಕಾರ್ಯವನ್ನು ಮುಂದುವರಿಸಿದರು. ಅನಂತರ ಶ್ರೀ ಮಠದ ಅಜ್ಞಾನುಸಾರ ಇಲ್ಲಿನ ಬೃಂದಾವನ ಸನ್ನಿಧಿಯ ವ್ಯವಸ್ಥಾಪಕರಾಗಿದ್ದ ಶ್ರೀ ಪುರಾಣಿಕ ಶ್ರೀನಿವಾಸಮೂರ್ತಾಚಾರ್ಯರು ವಿಶೇಷ ಶ್ರದ್ದೆ ವಹಿಸಿ ಪ್ರತಿನಿತ್ಯ ಶ್ರೀ ಗುರುರಾಜರಿಗೆ ಹಸ್ತೋದಕ ಮತ್ತು ಪರಸ್ಥಳದಿಂದ ಬರುವ ಜನರಿಗೆ ಭೋಜನ ವ್ಯವಸ್ಥೆ, ಜೊತೆಗೆ ಶ್ರೀ ಮಠದ ಸರ್ವತೋಮುಖ ಅಭಿವೃದ್ಧಿ ಪಡಿಸಿದರು.
ವ್ಯವಸ್ಥಾಪಕರಾಗಿದ್ದ ಪಿ.ಎಸ್. ಶ್ರೀನಿವಾಸ್ ಮೂರ್ತಾಚಾರ್ ದೈವಾಧೀನರಾದ ಬಳಿಕ 1977 – 78 ರಲ್ಲಿ ಅಂದಿನ ಪೀಠಾಧಿಪತಿಗಳಾಗಿದ್ದ ಪೂಜ್ಯ ಶ್ರೀ ಸುಜಯೀಂದ್ರ ತೀರ್ಥ ಶ್ರೀ ಪಾದಂಗಳವರು, ಶ್ರೀ ಮಠದ ವ್ಯವಸ್ಥಾಪಕರನ್ನಾಗಿ ಪ್ರಸಿದ್ಧ ಜ್ಯೋತಿಷಿಗಳು, ಪುರೋಹಿತರು ಮತ್ತು ಶ್ರೀ ಮಠದ ಶಿಷ್ಯರೂ ಆಗಿದ್ದ ಕೂಡ್ಲಿಗಿ ಜೋಯಿಸ್ ಹನುಮಂತಾಚಾರ್ಯ ಅವರನ್ನು ನಿಯೋಜಿಸಿದ್ದರು. ಇವರು 17 ವರ್ಷಗಳ ಕಾಲ ಶ್ರೀ ಮಠದ ವ್ಯವಸ್ಥಾಪಕರಾಗಿ ಗುರುಗಳ ಅನುಗ್ರಹ ಆಶೀರ್ವಾದದಿಂದ ಶ್ರೀ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದರು. ಇವರ ಕಾಲದಲ್ಲಿ ಎಲ್ಲಾ ಸ್ಥರದ ಭಕ್ತಾದಿಗಳಿಗೆ ಮುಕ್ತ ದರ್ಶನಭಾಗ್ಯ ಹಾಗೂ ಪ್ರಸಾದ ಭಾಗ್ಯ ಮತ್ತು ಶ್ರೀ ರಾಯರ ಆರಾಧನಾ ಪಂಚರಾತ್ರೋತ್ಸವವನ್ನು ವೈಭವೀಕರಿಸಿದರು. 1985 ರಲ್ಲಿ ಶ್ರೀ ಮಠದ ನವೀಕರಣವಾದಾಗ ಶ್ರೀ ಸುಯಮೀಂದ್ರ ತೀರ್ಥರು 1962 ರಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಗುರುರಾಜರ ಬೃಂದಾವನ ಭಿನ್ನ ಆಗಿರುತ್ತದೆ. ಇದನ್ನು ತೆಗೆದು ಹೊಸ ಬೃಂದಾವನ ಮಾಡೋಣಾ ಎಂದು ಶ್ರೀ ಮಠದ ಭಕ್ತರು ಮನವಿ ಮಾಡಿದಾಗ ನವ ಮಂತ್ರಾಲಯದ ಶಿಲ್ಪಿಗಳೆಂದೇ ಪ್ರಖ್ಯಾತಿ ಹೊಂದಿದ್ದ, ಪ್ರಾತಃಸ್ಮರಣೀಯರಾದ ಪರಮ ಪೂಜ್ಯ ಶ್ರೀ ಸುಜಯೀಂದ್ರ ತೀರ್ಥರು ತಮ್ಮ ಪ್ರಿಯ ಶಿಷ್ಯರಾದ ನಡೆದಾಡುವ ರಾಯರೆಂದೇ ಖ್ಯಾತಿಯನ್ನು ಪಡೆದಿದ್ದ ಶ್ರೀ ಸುಶಮೀಂದ್ರತೀರ್ಥರಿಂದೊಡಗೂಡಿ ಶ್ರೀ
ಸುಯಮೀಂದ್ರ ತೀರ್ಥರು ಪ್ರತಿಷ್ಠಾಪಿಸಿದ್ದ ಬೃಂದಾವನವನ್ನು ಇರುವ ಜಾಗದಲ್ಲಿಯೇ ಕೆಳಗೆ ಭೂಗತ ಮಾಡಿ, ಅದರ ಮೇಲೆ ಹೊಸ ಬೃಂದಾವನ, ಅದರ ಮೇಲೆ ರಾಯರು ಕೊಟ್ಟಿದ್ದ
ಚಲ ಬೃಂದಾವನವನ್ನು ದಿನಾಂಕ 19/06/1985 ನೇ (ಶ್ರೀ ವಿಕ್ರಮ ನಾಮ ಸಂವತ್ಸರ ಆಷಾಢ ಶುದ್ಧ ಪ್ರತಿಪದ) ಬುಧವಾರ ದಂದು ಪುನಃ ಪ್ರತಿಷ್ಠಾಪನೆ ಮಹೋತ್ಸವವನ್ನು ಶ್ರೀ ಸೋಂದಾವಾದಿರಾಜರ ಮಠದ ಶ್ರೀ ವಿಶ್ವೋತ್ತಮತೀರ್ಥರು ಹಾಗೂ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಉಪಸ್ಥಿತಿಯಲ್ಲಿ ವೈಭವವಾಗಿ ನೆರವೇರಿಸುತ್ತಾರೆ. ಚಿತ್ರದುರ್ಗದ ಶ್ರೀ ಮಠದಲ್ಲಿ ಈ ಮೂರು ಬೃಂದಾವನ ಒಂದೇ ಸ್ಥಳದಲ್ಲಿ ಇರುವುದು ವಿಶೇಷ.
ನೀರಿನ ವೆಂಕಣ್ಣನಿಗೆ ಮೋಕ್ಷ ಕೊಟ್ಟ ಪವಿತ್ರ ಸ್ಥಳ :
ಈಗ ಹಾಲಿಯಿರುವ ಬೃಂದಾವನ ಆವರಣವು ಬಹಳ ಪವಿತ್ರವಾದ ಸ್ಥಳ. ಹಿಂದೆ ಶ್ರೀ ರಾಘವೇಂದ್ರಸ್ವಾಮಿಗಳ ಕಾಲದಲ್ಲಿ ಅವರ ಬಳಿ ವೆಂಕಣ್ಣನೆಂಬ ಒಬ್ಬ ಶಿಷ್ಯನಿದ್ದನು. ಅವನು ಸದಾಚಾರ ಸಂಪನ್ನನಾಗಿ ಶ್ರೀ ಹರಿವಾಯುಗುರುಗಳ ಸೇವಾ ಮಾಡಿಕೊಂಡು ಶ್ರೀ ಸ್ವಾಮಿಗಳ ಸನ್ನಿಧಾನದಲ್ಲಿ ಬಹು ವರುಷಗಳವರೆಗೆ ಸೇವಾ ಮಾಡುತ್ತಿದ್ದನು. ವೃದ್ಧಾಪ್ಯ ಪ್ರಾಪ್ತವಾಗಲು ತನ್ನ ಸ್ವಗ್ರಾಮವಾದ ಚಿತ್ರ್ರದುರ್ಗಕ್ಕೆ ಹೋಗಬೇಕೆಂಬ ಆಸೆ ಆತನಿಗೆ ಆಯಿತು. ಶ್ರೀಗಳ ಅಪ್ಪಣೆ ಬೇಡಲಾಗಿ ಅವರು ಆತನು ಕೋರುವ ಇಷ್ಟಾರ್ಥ ದಯಪಾಲಿಸುವುದಾಗಿ ಹೇಳಿದರು. ಆತನು ತನಗೆ ಮುಕ್ತಿ ಕೊಡಿಸಬೇಕಾಗಿ ಅನನ್ಯವಾಗಿ ಬೇಡಿಕೊಂಡನು. ಅದಕ್ಕೆ ಶ್ರೀ ಸ್ವಾಮಿಗಳವರು ನಾವು ಹೇಳಿದಂತೆ ನಡೆದುಕೊಂಡರೆ ಮೋಕ್ಷ ಕೊಡಿಸುವುದಾಗಿ ಹೇಳಿ ನಸುನಕ್ಕು ಆತನ ಪ್ರಯಾಣಕ್ಕೆ ಅನುಜ್ಞೆಯನ್ನಿತ್ತು ಫಲಮಂತ್ರಾಕ್ಷತಾ ಪ್ರದಾನ ಮಾಡಿದರು. ನಂತರ ಈ ಭಕ್ತನು ಶ್ರೀಗಳನ್ನು ನೆನೆಸುತ್ತಾ ತನ್ನ ಊರಿಗೆ ಬಂದು ನೆಲೆಸಿದನು. ಹೀಗೆಯೇ ಬಹುವರ್ಷಗಳ ಕಳೆದವು. ಈತನ ಭಕ್ತಿಗೆ ಮೆಚ್ಚಿದರೋ ಏನೋ ಎಂಬಂತೆ ಶ್ರೀ ರಾಘವೇಂದ್ರಸ್ವಾಮಿಗಳು ಸಂಚಾರತ್ವೇನ ಚಿತ್ರದುರ್ಗಕ್ಕೆ ಸಂಸ್ಥಾನದೊಡನೆ ಬಂದರು. ಶ್ರೀ ರಾಘವೇಂದ್ರ ಸ್ವಾಮಿಗಳವರನ್ನು ರಾಜರುಗಳು, ವಿದ್ವಾಂಸರು, ಪಾಮರರು ಎಲ್ಲರೂ ತಂಡ ತಂಡವಾಗಿ ಈ ಪುರಕ್ಕೆ ಮುಂಚಿತವಾಗಿಯೇ ಬಂದು ಪುರದ್ವಾರದಲ್ಲಿ ಶ್ರೀಗಳನ್ನು ಸಮಸ್ತ ಮರ್ಯಾದೆಗಳೊಂದಿಗೆ ಸಂದರ್ಶಿಸಿ, ಧೂಳಿ ದರ್ಶನ ಪಡೆದು ನಗರಕ್ಕೆ ಸ್ವಾಗತಿಸಿದರು. ಅವರಲ್ಲಿ ನಮ್ಮ ಭಕ್ತ ವೆಂಕಣ್ಣನೂ ಒಬ್ಬ.
ಈತನನ್ನು ನೋಡಿ ಶ್ರೀಗಳವರಿಗೆ ಬಹಳ ಸಂತೋಷವಾಯಿತು. ಕುಶಲಪ್ರಶ್ನೆ ಮಾಡಿ ಆತನನ್ನು ಜೊತೆಯಲ್ಲಿಯೇ ಕರೆದುಕೊಂಡು ಪುರ-ಪ್ರವೇಶ ಮಾಡಿದರು. ಭಕ್ತಾದಿಗಳಿಗೆಲ್ಲಾ ಫಲಮಂತ್ರಾಕ್ಷತೆ ಅನುಗ್ರಹಿಸಿ ಅಪ್ಪಣೆ ಕೊಡಲಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಶ್ರೀಗಳು ವೆಂಕಣ್ಣನನ್ನು ತಮ್ಮ ಸನ್ನಿಧಾನದಲ್ಲೇ ಇರಲು ಹೇಳಿ ಉಪದೇಶಾದಿಗಳನ್ನು ಮಾಡಿದರು. ಏಕಾಂತದಲ್ಲಿ ಆತನನ್ನು ಪ್ರಶ್ನಿಸಲಾಗಿ ಹಿಂದೆ ಕೇಳಿದಂತೆ ತನಗೆ ಮೋಕ್ಷ ಕೊಡಿಸಬೇಕಾಗಿ ಬೇಡಿಕೊಂಡನು. ಶ್ರೀರಾಯರು ತಮ್ಮ ಅಪರೋಕ್ಷಜ್ಞಾನದಿಂದ ಈಶ್ವರೇಚ್ಛೆಯವನ್ನು ತಿಳಿದವರಾಗಿ ಈತನ ಪಕ್ವದೆಶೆಯನ್ನು ಅರಿತು ವಿಧಿವತ್ತಾಗಿ ಮಾಡಿಸಬೇಕಾದ ಎಲ್ಲಾ ವೈಧಿಕರ್ಮಗಳನ್ನು ಮಾಡಿಸಿ, ಒಂದು ಶುಭಮೂಹೂರ್ತದಲ್ಲಿ, ಬಹಿರಂಗಸಭೆ ಸೇರಿಸಿ ಮಂತ್ರಪೂತವಾದ ಅಗ್ನಿ ಪ್ರತಿಷ್ಠಾಪನೆ ಮಾಡಿಸಿ (ಈಗಿರುವ ಬೃಂದಾವನದ ಆವರಣದ ಜಾಗದಲ್ಲಿ) ಅದರಲ್ಲಿ ಪ್ರವೇಶ ಮಾಡಬೇಕಾಗಿ ಭಕ್ತನಿಗೆ ಅನುಜ್ಞೆಯಿತ್ತರು. ಈ ಸುಸಮಯವನ್ನೇ ಕಾದಿದ್ದ ವೆಂಕಣ್ಣನು ಶ್ರೀ ರಾಯರ ಪಾದಗಳಿಗೆರಗಿ ಶ್ರೀ ಹರಿವಾಯುಗಳನ್ನು ಧ್ಯಾನಮಾಡುತ್ತಾ ತನ್ನ ಬಿಂಬಮೂರ್ತಿಯನ್ನು ಮನಸ್ಸಿನಲ್ಲಿ ಧ್ಯಾನಮಾಡಿ ಯೋಗಮಾರ್ಗದಿಂದ ತನ್ನ ದೇಹವನ್ನು ಹೃತಾಶನನಿಗೆ (ಅಗ್ನಿ) ಅರ್ಪಿಸಿಯೇ ಬಿಟ್ಟನು. ಆಗ ಅಲ್ಲಿ ನೆರೆದಿದ್ದ ಜನರ ಹಾಹಾಕಾರದೊಂದಿಗೆ ವಿಪರೀತವಾಗಿ ಮನಬಂದಂತೆ ಮಾತನಾಡುತ್ತಿದ್ದರು. ಯೋಗ್ಯ ಅಯೋಗ್ಯ ಮಾತುಗಳು ಹೊರಟವು. ಜನರ ಗದ್ದಲದಲ್ಲಿ ಯಾರು ಏನೆಂದರೆಂಬುದು ಹೇಳಲಿಕ್ಕೆ ಆಗಲಿಲ್ಲ. ಹೀಗಿರುವ ಸಂದರ್ಭದಲ್ಲಿ ಆಕಾಶ ಮಾರ್ಗದಲ್ಲಿ ಒಂದು ದಿವ್ಯ ಪ್ರಕಾಶವಾಯಿತು. ಏನೆಂದು ಆ ಕಡೆ ಜನರು ನಿರೀಕ್ಷಿಸಲು ಗಂಟೆ ಧ್ವನಿಯಾಯಿತು. ಅದು ನಮ್ಮ ಪುಣ್ಯಶಾಲಿಯಾದ ವೆಂಕಣ್ಣನನ್ನು ಕರೆದುಕೊಂಡು ಹೋಗುತ್ತಿದ್ದ ದೇವತಾ ವಿಮಾನ ಭಕ್ತ ವೆಂಕಣ್ಣನು ಅಲ್ಲಿಂದಲೇ ಶ್ರೀರಾಯರಿಗೆ ಕೈಮುಗಿದು ಅವರ ಅಪ್ಪಣೆ ಪಡೆದು ಕಣ್ಮರೆಯಾಗಿ ಪರಲೋಕಕ್ಕೆ ಪ್ರಯಾಣ ಮಾಡಿಯೇ ಬಿಟ್ಟನು.
ಅಲ್ಲಿನ ಅಗ್ನಿಕುಂಡ ಪುಷ್ಪಭರಿತವಾಯಿತು. ಮಾನುಷದೇಹದ ಯಾವ ಪದಾರ್ಥವೂ ಕಾಣಲಿಲ್ಲ. ಇದಲ್ಲವೇ ಗುರುಮಹಿಮೆ. ಈ ಮಹತ್ಕಾರ್ಯ ನಡೆವ ಕ್ಷೇತ್ರವಲ್ಲವೇ ಸುಕ್ಷೇತ್ರ ನಮ್ಮ ಚಿತ್ರದುರ್ಗ.
ಮಂತ್ರಾಕ್ಷತೆಯ ಮಹಿಮೆ :
ದೇಶದ ವಿವಿಧೆಡೆ ಇರುವ ರಾಘವೇಂದ್ರ ಮಠದಲ್ಲಿ ಭಕ್ತರಿಗೆ ಪ್ರಮುಖ ಪ್ರಸಾದವಾಗಿ ಅಕ್ಷತೆಯನ್ನು ನೀಡಲಾಗುತ್ತದೆ. ಇದಕ್ಕೆ ಬಹಳ ವಿಶೇಷ ಗೌರವ ಇದೆ. ಮೂರು ರೀತಿ ಮಂತ್ರಾಕ್ಷತೆ ಇದೆ. ಹಳದಿ, ಕೆಂಪು ಸಾಮಾನ್ಯವಾಗಿ ನೀಡಲಾಗುತ್ತದೆ. ಆದರೆ, ರಾಯರ ಮಠದಲ್ಲಿ ವಿಶೇಷವಾಗಿ ಶುದ್ಧ ಸುಣ್ಣ (ಚೂರ್ಣ), ಶುದ್ಧ ಅರಿಶಿನ (ಹರಿದ್ರಾ) ವನ್ನು ಅಕ್ಕಿಗೆ ಮಿಶ್ರಿಣ ಮಾಡಿ, ಅದನ್ನು ರಾಯರ ಬೃಂದಾವನದ ಮೇಲಿಟ್ಟು, ಪಾದುಕೆಗಳಿಗೆ ಸಮರ್ಪಿಸಿ, ಸ್ವಾಮಿಗಳು ಬೀಜಾಕ್ಷರ ಬರೆದು ಮಂತ್ರವನ್ನು ಸಿದ್ಧಿ ಮಾಡಿದ ಅಕ್ಷತೆಯನ್ನು ಮಂತ್ರಾಕ್ಷತೆ ಎನ್ನಲಾಗುತ್ತದೆ. ಮಂತ್ರದಿಂದ ಪೂಜಿತವಾದ ಅಕ್ಷತೆಯೇ ಮಂತ್ರಾಕ್ಷತೆ. ಇದರಲ್ಲಿ ರಾಯರ ಅನುಗೃಹ, ಸನ್ನಿಧಿ ಇರುತ್ತದೆ. ಈ ಮಂತ್ರಾಕ್ಷತೆಯನ್ನು ಸ್ವೀಕಾರ ಮಾಡಿ ತಲೆಯ ಮೇಲೆ ಧರಿಸಿಕೊಂಡರೆ ವಿಶೇಷ ಅನುಗ್ರಹ, ಪುಣ್ಯ ಪ್ರಾಪ್ತಿ ಮಯ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆಯಿದೆ.
ಶ್ರೀ ಜೋಯಿಸ್ ಹುಲಿರಾಜಾಚಾರ್ಯ
ಶ್ರೀ ಮಠದ ಶಿಷ್ಯರು, ನಿವೃತ್ತ LIC ನೌಕರರು,
ಚಿತ್ರದುರ್ಗ.
(ಗ್ರಂಥ ಕೃಪೆ : ವಿದ್ವಾನ್ ಹುಲಿ ಕೃ.ಶ್ರೀನಿವಾಸಾಚಾರ್ಯರು)