ಚಿತ್ರದುರ್ಗ ನಗರಸಭೆ ಸದಸ್ಯರ ಅವಧಿ ಮುಕ್ತಾಯ ಹಂತದಲ್ಲಿ ಪ್ರವಾಸ : ಕೆಆರ್‌ಎಸ್‌ ಪಕ್ಷ ವಿರೋಧ

1 Min Read

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 23 : ನಗರಸಭೆಯ ಸದಸ್ಯರು ಮತ್ತು ಕೆಲವು ನೌಕರರು ಸೇರಿ, ಒಟ್ಟು 32 ಜನರ ತಂಡವು ಅಹಮದಬಾದ್ ಮತ್ತು ಚಂಡೀಗಡ ನಗರಗಳಿಗೆ ಪ್ರವಾಸ ಹೊರಟಿರುವುದನ್ನು ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಹೇಶ್ ಸಿ ನಗರಂಗೆರೆ ಅವರು ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಇವರೆಲ್ಲರೂ ಸ್ವಚ್ಚ ಭಾರತ ಮಿಷನ್ 2.0 ಯೋಜನೆಯ ಅಡಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಬಗ್ಗೆ ಅಧ್ಯಯನ ಪ್ರವಾಸ ಮಾಡುತ್ತಿದ್ದಾರೆ. ಈ ತಂಡವು ಇಂದು ಈಗಾಗಲೇ ಚಿತ್ರದುರ್ಗದಿಂದ ಪ್ರಯಾಣ ಆರಂಭಿಸಿದ್ದು, ರಾತ್ರಿ ಬೆಂಗಳೂರಿನಿಂದ ವಿಮಾನದ ಮೂಲಕ ಈ ನಗರಗಳಿಗೆ ಪ್ರಯಾಣಿಸಲಿದ್ದಾರೆ. ಈ ಪ್ರವಾಸಕ್ಕೆ 27 ಲಕ್ಷಕ್ಕೂ ಹೆಚ್ಚು ಸಾರ್ವಜನಿಕ ಹಣ ಖರ್ಚಾಗುತ್ತಿದೆ.

ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಈ ಸದಸ್ಯರುಗಳು ಪ್ರವಾಸ ಮುಗಿಸಿ ಬಂದ ಒಂದೆರಡು ದಿನಗಳಲ್ಲಿ, ಅವರ ಅವಧಿಯು ಮುಕ್ತಾಯವಾಗಲಿದೆ. ಪ್ರಸ್ತುತ ನಗರಸಭೆಯ ಅವಧಿಯು ಇದೇ ಅಕ್ಟೋಬರ್ 31, 2025 ಕ್ಕೆ ಮುಕ್ತಾಯವಾಗಲಿದೆ. ಇಂತಹ ಸಂದರ್ಭದಲ್ಲಿ, ಈ ಅಧ್ಯಯನ ಪ್ರವಾಸದಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಮತ್ತು ಈ ಪ್ರವಾಸದ ಸಂಪೂರ್ಣ ಹಣ ಮತ್ತು ಸಮಯ ವ್ಯರ್ಥವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದು ನಗರಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವನ್ನು ಬಗೆಹರಿಸಲು ಹಣಕಾಸಿನ ತೊಂದರೆ ಇರುತ್ತದೆ ಹಾಗು ಅವಧಿ ಮುಕ್ತಾಯವಾಗುವ ಹಂತದಲ್ಲಿ ಈ ಪ್ರವಾಸ ಮಾಡುತ್ತಿರುವುದು ಅಕ್ರಮ ಮತ್ತು ಮೋಜು ಮಸ್ತಿಗಾಗಿ.

ಇಂತಹ ಪ್ರವಾಸಕ್ಕೆ ಅನುಮತಿ ನೀಡಿರುವುದೇ ಅಕ್ರಮವಾಗಿರುತ್ತದೆ ಆದ್ದರಿಂದ, ಚಿತ್ರದುರ್ಗ ನಗರ ಸಭೆ  ಪೌರಾಯುಕ್ತರು ಈ ತಕ್ಷಣವೇ ಈ ಅಧ್ಯಯನ ಪ್ರವಾಸವನ್ನು ತಡೆಯಬೇಕು ಮತ್ತು ಪ್ರವಾಸದ ಬಾಲ್ತಿನಲ್ಲಿ ಇಲ್ಲಿಯವರೆಗೆ ಆಗಿರುವ ಎಲ್ಲಾ ಖರ್ಚುವೆಚ್ಚಗಳನ್ನು ಅನುಮತಿಸಿದ ಅಧಿಕಾರಿಗಳು ಮತ್ತು ಪ್ರವಾಸದಲ್ಲಿರುವವರಿಂದ ವಸೂಲಿ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

Share This Article