ವಿಶೇಷ ಲೇಖನ: ಡಾ. ಹೆಚ್.ಎನ್.ತಿಪ್ಪೇರುದ್ರಸ್ವಾಮಿ
ಚಿತ್ರದುರ್ಗ ನಗರ ಪೊಲೀಸ್ ಠಾಣೆ ಆವರಣದಲ್ಲಿ ಶ್ರೀ ಕಣಿವೆ ಮಾರಮ್ಮ ದೇವಿ ಆಸೀನಳಾಗಿ ಬಹು ವಿಜೃಂಭಣೆಯಿಂದ ರಾರಾಜಿಸುತ್ತಿದ್ದಾಳೆ, ತಾಯಿ. ಅಸಂಖ್ಯಾತ ಭಕ್ತಜನ ದಿನದಿನವೂ ಅರ್ಚನೆ, ಹರಕೆಗಳಿಂದ ಇದೀಗ ತಾಯಿ ಸಂತೃಪ್ರಿಯಿಂದ ಶರಣಾಧ ಭಕ್ತ ಜನರನ್ನು ಹರಸುತ್ತಾ ತಾನು ಸಹ ಸಂತಸ ಸಂಭ್ರಮಗಳಿಂದ ಕಂಗೊಳಿಸುತ್ತಿದ್ದಾಳೆ ಮಹಾತಾಯಿ. ಈ ಕಣಿವೆ ಮಾರಮ್ಮ ತಾಯಿ ಕುಂಚಿಗನಾಳು ಕಣಿವೆ ಬೆಟ್ಟ ಬಿಟ್ಟು ಇಳಿದು ಬಂದ ಕಥೆ ರೋಚಕವಾಗಿದೆ.
ಹಿಂದೆ ಚಿತ್ರದುರ್ಗದಿಂದ ಹಿರಿಯೂರು-ಸಿರಾ-ತುಮಕೂರು ಬೆಂಗಳೂರಿಗೆ ಹೋಗುವ ಮಾರ್ಗ ಈ ಕುಂಚಿಗನಾಳು ಕಣಿವೆ ಮೇಲಿಂದ ಸಾಗಿಹೋಗುತ್ತಿತ್ತು. ಗುಡ್ಡ ಹತ್ತಿ-ಅತ್ತ ಇಳಿದು ಮುಂದೆ ಸಾಗಬೇಕಾದಾಗ ಬಹುಪ್ರಯಾಸದ ಹಾದಿ. ಎತ್ತಿನ ಬಂಡಿಗಳು, ಬೆಟ್ಟ ಹತ್ತುವುದು ಬಹು ಶ್ರಮದ ಹಾದಿ ಬೆಟ್ಟ ಹತ್ತಿದ ಬಳಿಕ ಸ್ವಲ್ಪ ಸಮತಟ್ಟಾದ ಜಾಗ, ಅಲ್ಲಿ ನಿಂತು ಸುಧಾರಿಸಿಕೊಂಡು ಮತ್ತೆ ಪ್ರಯಾಣ ಆರಂಭಿಸುತ್ತಿದ್ದರು.
ಮೊದಲಿಗೆ ಆ ಜಾಗದಲ್ಲಿದ್ದ ಒಂದು ಕೋಡುಗಲ್ಲನ್ನು ಮಾರಮ್ಮ ದೇವಿ ಎಂದು ಪೂಜಿಸಲಾರಂಭಿಸಿದರು. ನಂತರದಲ್ಲಿ ಚಿತ್ರದುರ್ಗ ಪಾಳೆಯಗಾರರು ಪೂರ್ವ ದಿಕ್ಕಿನ ರಕ್ಷಣೆಯನ್ನು ಈ ಮಹಾತಾಯಿಗೆ ವಹಿಸಿ ಒಂದು ದೇವಾಲಯ ನಿರ್ಮಿಸಿ ದೇವಿಯ ವಿಗ್ರಹ ಪ್ರತಿಷ್ಠಾಫಿಸಿ, ಕುಂಚಿಗನಾಳು ಗ್ರಾಮದ ಒಂದು ಕುಟುಂಬವನ್ನು ಪೂಜೆಗಾಗಿ ನೇಮಿಸಿದರು. ವರ್ಷಕ್ಕೊಮ್ಮೆ ದೇವಿಯ ಜಾತ್ರೆ ಆರಂಭವಾಯಿತು. ಸುತ್ತಲ ಗ್ರಾಮಸ್ಥರು, ದುರ್ಗದ ಭಕ್ತರು ಸೇರಿ ಪೂಜೆ-ಜಾತ್ರೆ ವೈಭವ ಕಳೆಗಟ್ಟಿತು.
ಒಂದು ಕುಟುಂಬ “ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು” ಎಂಬ ಗಾದೆ ಮಾತಿನಂತೆ ಪೂಜಾರರ ಕುಟುಂಬ ಬೆಳೆದು ದಾಯಾದಿಗಳಾಗಿ ಪೂಜಾರಿಕೆಗೆ ಇಂತಿಷ್ಟು ತಿಂಗಳು ಸಮಯಾವಕಾಶ ಎಂದೇ ನಿಗಧಿಯಾಯಿತು.
ಹಿಂದೆ ಚಾರ್ಕೋಲ್ ಇಂಜಿನ್‍ಗಳು, ಗುಡ್ಡಹತ್ತಿ ಹೋಗುವಾಗ ಕನಿಷ್ಟ ಮೂರು ಬಾರಿ ನಿಂತು ಕಂಡಕ್ಟರ್, ಇದ್ದಲಿನಿನ ಬೆಂಕಿಗೆ ಗಾಳಿ ಹೊಡೆದು ಬಸ್ಸು ಗುಡ್ಡ ಹತ್ತಿ ಹೋಗುತ್ತಿತ್ತು. ಬಸ್ಸಿನ ಚಾಲಕರು, ಕಂಡಕ್ಟರ್ ಕಣಿವೆ ಮಾರಮ್ಮನವರಿಗೆ ಪೂಜೆ ಸಲ್ಲಿಸಿ ಮುಂದೆ ಸಾಗುವ ಸಂಪ್ರದಾಯ ಶುರುವಾಗಿ ಬಸ್ಸಿನಲ್ಲಿನ ಭಕ್ತರೂ ದೇವಿಯ ದರ್ಶನ ಕಾಣಿಕೆ ಹೆಚ್ಚಾಯಿತು.
ಕುರುಡು ಕಾಂಚಾಣ ಹೆಚ್ಚಾದಂತೆ ಅರ್ಚಕರಲ್ಲಿ ನಾನು- ನೀನು ಎಂಬ ಪೈಪೋಟಿ ಆರಂಭ, ಹೊಟ್ಟೆ ಕಿಚ್ಚು, ರೋಷ – ದ್ವೇಷಕ್ಕೆ ಕಾರಣವಾಗಿ ಹೋಯಿತು.
ನೋಡವಳಂದಾವ, ಮೊಗ್ಗಿನ ಮಾಲೆ ಚಂದವಾ, ಬೆಟ್ಟಿ ಬಿಟ್ಟಿಳಿಯೇ ಸಡಗಾರ” ಎಂಬ ಒಂದು ಜಾನಪದ ಹಾಡು ಇದೆ. ಆದರೆ ಇಲ್ಲಿ ಕಣಿವೆ ಮಾರಮ್ಮ ಕುಂಚಿಗನಾಳು ಕಣಿವೆ ಬೆಟ್ಟವನ್ನು ಸಡಗರದಿಂದ ಇಳಿದು ಬರಲಿಲ್ಲ, ಕೋಪ-ತಾಪ, ದುಃಖದಿಂದ ಚಿತ್ರದುರ್ಗ ಗ್ರಾಮಾಂತರ ಪೊಲೀಸರ ಕಾವಲಿನಲ್ಲಿ ಕುಂಚಿಗನಾಳು ಕಣಿವೆ ಇಳಿದು ನಗರಠಾಣೆ ಪಕ್ಕದಲ್ಲೇ ಇದ್ದ ಗ್ರಾಮಾಂತರ ಠಾಣೆ ಚಿಕ್ಕ ಕಟ್ಟಡದ ಬಾಗಿಲ ಮುಂದೆ ಬಯಲಿನಲ್ಲಿ ನ್ಯಾಯಾಲಯದ ಸಾಕ್ಷಿಯಾಗಿ ಬಂದು ಬಹು ದುಃಖದಿಂದ ಕುಳಿತಳು.
ಇದಕ್ಕೆ ಕಾರಣ ಪೂಜಾರಿಕೆಯ ಜಗಳ, ಆದಾಯದ ಹಣದ ಮೇಲಿನ ಆಸೆ, ಪೂಜಾರಿಕೆ ಜಗಳ ಆರಂಭವಾಗಿ ನಾನು-ನೀನು ಎಂದು ಕಿತ್ತಾಡಿದ ಅರ್ಚಕರಲ್ಲಿ ಒಬ್ಬ ಮೂರೂ ಬಿಟ್ಟವನು ಭಯಭಕ್ತಿ ಇಲ್ಲದವನೂ, ಹಣದ ಆಸೆಗೆ ಬಲಿಯಾದವನು, ದೇವಿವಿಗ್ರಹವನ್ನು ಸುತ್ತಿಗೆಯಿಂದ ಬಡಿದು ಭಿನ್ನಗೊಳಿಸಿ “ ಅದು ಹೇಗೆ ಪೂಜೆ ಮಾಡುತ್ತೀಯಾ?” ಎಂದು ಸವಾಲು ಹಾಕಿಬಿಟ್ಟ
ಪೂಜಾರಿಗಳ ಜಗಳ ದೇವಿ ವಿಗ್ರಹ ಭಿನ್ನವಾಗುವವರೆಗೂ ನಡೆದು ಗ್ರಾಮಾಂತರ ಪೊಲೀಸು ಠಾಣೆ ಮಟ್ಟಿಲೇರಿ, ಕಣಿವೆ ಮಾರಮ್ಮ ತನಗೆ ನ್ಯಾಯ ಬೇಕೆಂದು ಕೋರ್ಟ್ ಪವೇಶಿಸುವಂತಾಗಿ ಹೋಯಿತು.
ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಭಿನ್ನವಾಗಿದ್ದ ಕಣಿವೆ ಮಾರಮ್ಮ ದೇವಿ ವಿಗ್ರಹ ತಂದು, ಈಗ ಇರುವ ಜಾಗದಲ್ಲಿ ಠಾಣೆ ಬಾಗಿಲ ಬಲಭಾಗದಲ್ಲಿಟ್ಟರು. ಅಲ್ಲಿಂದು ಶುರುವಾಯಿತು, ಠಾಣೆಗೆ ಬರುವ ಜನ ಭಿನ್ನವಾಗಿದ್ದ ದೇವಿಗೆ ಅಡ್ಡ ಬಿದ್ದು, ತಮ್ಮ ಕಷ್ಟ ಹೇಳಿಕೊಂಡು ಬೇಡಿಕೆ ಸಲ್ಲಿಸಲಾರಂಭಿಸಿದರು.
ಯಾರೋ ಅರಿಸಿನ ಕುಂಕುಮ ಹಚ್ಚಿದರು, ಯಾರೋ ಹೂವು ಹಣ್ಣು ತಂದಿಟ್ಟರು. ವಿಗ್ರಹ ಭಿನ್ನವಾಗಿದ್ದುದು ಇಲ್ಲಿ ಗೌಣವಾಗಿ ಹೋಯಿತು. “ಕಣಿವೆ ಮಾರಮ್ಮ ತಾಯಿ ತಮಗಾಗಿ ಬಂದು ಇಲ್ಲಿ ಕುಳಿತಿದ್ದಾಳೆ” ಎಂಬ ಭಾವನೆ ಭಕ್ತರಲ್ಲಿ ಶುರುವಾಗಿಬಿಟ್ಟಿತು. ಭಕ್ತಿ ಭಾವದಿಂದ ಜನ ಪೂಜೆ ಮಾಡುತ್ತಿದ್ದುದನ್ನು ಕಂಡ ಪೊಲೀಸರು ದೇವಿ ವಿಗ್ರಹಕ್ಕೆ ಒಂದು ಚಿಕ್ಕ ನೆರಳು ಕಟ್ಟಿ ತಾವೂ ಪೂಜೆ ಆರಂಭಿಸಿದರು.
ಹೀಗೆ ಶುರುವಾಯಿತು ಚಿತ್ರದುರ್ಗ ನಗರಠಾಣೆ ಬಳಿ ರಾರಾಜಿಸುತ್ತಿರುವ ಕಣಿವೆ ಮಾರಮ್ಮ ದೇವಿ ದರ್ಬಾರ್. ಭಕ್ತ ಜನ ವಿಧ-ವಿಧ ಪೂಜಾ ವಿಶೇಶಗಳು ಆರಂಭವಾಗಿ ಬಿಟ್ಟವು. ಚಿಕ್ಕ ನೆರಳು ಹೋಗಿ ಅಮ್ಮನವರಿಗೆ ಒಂದು ಪಟ್ಟು ಗುಡಿಯಾಯಿತು. ಅಲ್ಲಿಗೆ ಒಬ್ಬ ಜೋಗತಿ ಬಂದು ಪೂಜೆ ಮಾಡಲಾರಂಭಿಸಿದಳು. ಪೊಲೀಸರು ಭಿನ್ನವಾದ ವಿಗ್ರಹದ ಬದಲಿಗೆ ಬೇರೆ ಸುಂದರ ವಿಗ್ರಹ ಮಾಡಿಸಿದರು.
ಸೀರೆ-ಕಾಣಿಕೆ ಚಿಕ್ಕ-ಚಿಕ್ಕ ವಡವೆ ಭಕ್ತರಿಂದ ಬರಲು ಆರಂಭವಾಗಿ ಪೂಜೆ ಮಾಡುತ್ತಿದ್ದ ಜೋಗಿತಿ ದನಿ ಜೋರಾಯಿತು. ಈ ಪೂಜೆಗಿಷ್ಟು, ಆ ಪೂಜೆಗಿಷ್ಟು, ಎಡೆ ಮಾಡಿಸಲು ಇಷ್ಟು ಹಣ ನಿಗಧಿ ಮಾಡಿದ ಜೋಗಿತಿ ತಾನೇ ಬಲಿತು ಹಣವಂತಳಾಗಿಬಿಟ್ಟಳು.
ಇದನ್ನೆಲ್ಲಾ ಕಂಡ ಪೊಲೀಸರು ಜೋಗಿತಿಯನ್ನು ದೂರಸರಿಸಿ ಅರ್ಚಕರನ್ನು ನೇಮಿಸಿದರು.
ಆ ವೇಳೆಗೆ ಗ್ರಾಮಾಂತರ ಠಾಣೆ ಊರ ಹೊರವಲಯಕ್ಕೆ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿ ಹೋಯಿತು. ದೇವಿ ಉಸ್ತುವಾರಿ ನಗರಠಾಣೆ ಹೊಣೆಯಾಯಿತು.
ಶಿಥಿಲವಾಗಿದ್ದ ನಗರಠಾಣೆ ಕಟ್ಟಡ ಬದಲಿ ಹೊಸ ಕಟ್ಟಡ ನಿರ್ಮಾಣ ಆರಂಭವಾಯಿತು, ಭಕ್ತರು, ಪೊಲೀಸರ ಮುಂದಾಳತ್ವದಲ್ಲಿ ಚಿತ್ರದುರ್ಗ ನಗರದ ಮಧ್ಯಭಾಗದಲ್ಲಿ ನಗರ ಪೊಲೀಸ್ ಠಾಣೆ ಪಕ್ಕ ಶ್ರೀ ಕಣಿವೆ ಮಾರಮ್ಮ ದೇವಿಯ ನೂತನ ದೇವಾಲಯ ನಿರ್ಮಾಣಗೊಂಡು ಈಗ ಸಕಲ ವೈಭೋಗದಿಂದ ದೇವಿರಾರಾಜಿಸುತ್ತಿದ್ದಾಳೆ.
ಪ್ರತಿದಿನ ಪೂಜೆ-ಪ್ರಸಾದ ಮಂಗಳವಾರ, ಶುಕ್ರವಾರ ವಿಶೇಷ ಪೂಜೆಗಳು, ವರ್ಷಕ್ಕೊಮ್ಮೆ ಜಿಲ್ಲಾ ಕಛೇರಿ ದಾರಿ ಬಂಧ್ ಮಾಡಿ ಭಕ್ತರಿಗೆ ಭಾರಿ ಅನ್ನಸಂತರ್ಪಣೆ, ಹೀಗೆ ಕುಂಚಿಗನಾಳು ಕಣಿವೆ ಮಾರಮ್ಮ ದೇವಿ ಬೆಟ್ಟ ಬಿಟ್ಟು ಇಳಿದು ಬರುವಾಗ ದುಃಖ, ಕೋಪ, ದ್ವೇಷ-ರೋಷದಿಂದ ನಗರಕ್ಕೆ ಆಗಮಿಸಿದ್ದ ದೇವಿ ಈಗ ಬಹು ವೈಭವ, ಸಂತಸ, ಸಡಗರಗಳಿಂದ ನೆಲೆಸಿ ಬಂದ ಭಕ್ತ ಜನರನ್ನು ಅನುಗ್ರಹಿಸುತ್ತಿದ್ದಾಳೆ ಎನ್ನುವಲ್ಲಿಗೆ ದೇವಿ ಬೆಟ್ಟ ಬಿಟ್ಟಿಳಿದ ಕಥೆ ಮುಗಿಯಿತು, ಎಲ್ಲರಿಗೂ ಮಂಗಳವಾಗಲಿ.
–ಡಾ. ಹೆಚ್.ಎನ್.ತಿಪ್ಪೇರುದ್ರಸ್ವಾಮಿ
ಮಾಧ್ಯಮ ಅಕಾಡೆಮಿ ಪುರಸ್ಕøತರು, ವೈದ್ಯರು ಮತ್ತು ವಿ. ಸಂಪಾದಕರು, ಚಂದ್ರವಳ್ಳಿ ದಿನಪತ್ರಿಕೆ
ಚಿತ್ರದುರ್ಗ
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…