ಸುದ್ದಿಒನ್,ಚಿತ್ರದುರ್ಗ, (ಅ.03) : ಬಿರುಗಾಳಿ ಜೊತೆಗೆ ಸುರಿದ ಮಳೆಗೆ ಬಾಳೆ ತೋಟ ಹಾಗೂ ತೆಂಗಿನ ಗಿಡಗಳು ಹಿರಿಯೂರು ತಾಲೂಕಿನ ದಿಂಡಾವರ ಗ್ರಾಮದಲ್ಲಿ ನೆರಕ್ಕುಳಿವೆ.
ಸುಮಾರು ಹತ್ತು ಹದಿನೈದು ನಿಮಿಷಗಳ ಕಾಲ ದಿಂಡಾವರ ಗ್ರಾಮದಲ್ಲಿ ಬೀಸಿದ ಗಾಳಿಗೆ ಫಸಲಿಗೆ ಬಂದಂತಹ ಬಾಳೆ ಗಿಡಗಳು ನೆಲಕ್ಕುರುಳಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಇದರಿಂದ ರೈತರು ಕಂಗಲಾಗಿದ್ದಾರೆ.
ಗ್ರಾಮದ ರೈತ ಸಿ.ಟಿ.ಹನುಮಂತಣ್ಣ ಗಿರೀಶ್ 1500, ಕೃಷ್ಣ 500, ಪ್ರಕಾಶ್ 1000, ಸುಬ್ಬಣ್ಣ 2000, ರುದ್ರಮುನಿ 100 ಬಾಳೆಗಿಡಗಳು ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಬಾಳೆತೋಟಗಳು ಫಸಲಿಗೆ ಬಂದಿದ್ದವು. ಇದೀಗ ಬಾಳೆ ಗೊನೆಗಳು ಕಡಿಯುವ ಹಂತಕ್ಕೆ ಬಂದಿದ್ದು ಗಾಳಿಮಳೆಗೆ ನೆಲಕ್ಕೆ ಬಿದ್ದು ನಾಶವಾಗಿವೆ.
ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡು ಬೆಳೆ ಬೆಳೆದ ರೈತರು ಬೀಸಿದ ಗಾಳಿಗೆ ಫಸಲಿಗೆ ಬಂದಿರುವ ಬಾಳೆಗೊನೆಗಳು ಬಿದ್ದು, ನಾಶವಾಗಿರುವುದು ನೋಡಿದರೆ ಕಣ್ಣೀರು ಬರುತ್ತಿದೆ. ಹೀಗಾದರೆ ಬದುಕುವುದು ಹೇಗೇ ಎಂಬ ಚಿಂತೆ ಉಂಟಾಗಿದೆ ಎಂದು ರೈತರು ಕಣ್ಣಿರಿಟ್ಟಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರದ ಭರವಸೆ ನೀಡಿದ್ದಾರೆ.