ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಡಿ.17) : ಜಿಲ್ಲಾಸ್ಪತ್ರೆಯಲ್ಲಿ ಮಧುಮೇಹ ಕಣ್ಣಿನ ಕಾಯಿಲೆಗೆ ಲೇಸರ್ ಚಿಕಿತ್ಸೆ ಶುಕ್ರವಾರ ಪುನರಾಂಭಗೊಂಡಿದೆ.
ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿಯಲ್ಲಿ ವಿಠಲ್ ಕಣ್ಣಿನ ಅಸ್ಪತ್ರೆ ಸಹಯೋಗದೊಂದಿಗೆ ಮಧುಮೇಹ ಕಣ್ಣಿನ ಕಾಯಿಲೆ ಲೇಸರ್ ಚಿಕಿತ್ಸೆಗೆ ಚಾಲನೆ ನೀಡಲಾಗಿದೆ. ಕೋವಿಡ್ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಚಿಕಿತ್ಸೆಯನ್ನು ನಿಲ್ಲಿಸಲಾಗಿತ್ತು.
ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ.ಚಂದ್ರಶೇಖರ್ ಕಾಂಬ್ಳಿಮಠ್ ಸದ್ದಿಲ್ಲದೆ ಕಣ್ಣುಗಳನ್ನು ಕದ್ದೊಯ್ಯುವ ಕಣ್ಣಿನ ಮಧುಮೇಹ ಕಣ್ಣಿನ ರೋಗದ (ಡಯಾಬಿಟಿಸ್ ರೆಟಿನೋಪತಿ) ಬಗ್ಗೆ ಎಚ್ಚರಿಕೆ ಇರಲಿ. ದೀರ್ಘಕಾಲದ ಮಧುಮೇಹ ಪ್ರಕರಣಗಳಲ್ಲಿ ಶೇ.90ರಷ್ಟು ಕಣ್ಣಿನ ಮಧುಮೇಹ ಪ್ರಕರಣಗಳು ಕಂಡು ಬರುತ್ತದೆ.
ಕಾಲ ಕಾಲಕ್ಕೆ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳಬೇಕು. ಕಣ್ಣಿನ ಅಕ್ಷಿಪಟಲದಲ್ಲಿ ರಕ್ತನಾಳಗಳ ಉಬ್ಬುವಿಕೆ ಇದನ್ನು ಸರಿದೂಗಿಸಲು ಲೇಸರ್ ಚಿಕಿತ್ಸೆ ಪ್ರಮುಖ ವಾಗಿರುತ್ತದೆ. ಸಾರ್ವಜನಿಕರು ಜಿಲ್ಲಾ ಆಸ್ಪತ್ರೆಯ 57ನೇ ವಾರ್ಡ್‍ನಲ್ಲಿ ಉಚಿತ ಪರೀಕ್ಷೆ ಮಾಡಿಸಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಒಟ್ಟು 27 ಜನರ ಅಕ್ಷಿಪಟಲ ಪರೀಕ್ಷೆ ನಡೆಸಿ, 5 ಪ್ರಕರಣಗಳಿಗೆ ಲೇಸರ್ ಚಿಕಿತ್ಸೆ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಠಲ್ ಕಣ್ಣಿನ ಆಸ್ಪತ್ರೆಯ ಕಣ್ಣಿನ ತಜ್ಞೆ ಡಾ.ಶಿಲ್ಪ, ನೇತ್ರ ಮತ್ತು ಅಕ್ಷಿಪಟಲ ತಜ್ಞೆ ಡಾ.ಭಾರ್ಗವಿ, ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ದೇವಿ , ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ನೇತ್ರಾಧಿಕಾರಿ ರಾಮು, ಹಿರಿಯ ಶುಶ್ರೂಷಧಿಕಾರಿ ರವಿ, ಬಿ.ಮೂಗಪ್ಪ, ಶ್ರೀಧರ್ ಇತರರು ಭಾಗವಹಿಸಿದ್ದರು.