ಆಚಾರ್ಯ ಚಾಣಕ್ಯರು ಭಾರತದ ಶ್ರೇಷ್ಠ ವಿದ್ವಾಂಸರು ಮತ್ತು ತಂತ್ರಜ್ಞರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು ಹೇಳಿದ ಮಾರ್ಗದರ್ಶನಗಳು ಹಾಗೂ ಸಿದ್ಧಾಂತಗಳು ಇಂದಿನ ಆಧುನಿಕ ಜೀವನಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಸಾಮಾನ್ಯವಾಗಿ ಇತರರಿಗೆ ಸಹಾಯ ಮಾಡುವುದು ಅತ್ಯುತ್ತಮ ಗುಣ. ಆದರೆ, ಆಲೋಚನೆ ಮಾಡದೆ ಪ್ರತಿಯೊಬ್ಬರಿಗೂ ಸಹಾಯ ಮಾಡಲು ಹೋದರೆ, ಅದು ನಮಗೆ ಮಾರಕವಾಗಿ ಪರಿಣಮಿಸಬಹುದು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.
ಚಾಣಕ್ಯರ ಪ್ರಕಾರ, ಮೂರು ರೀತಿಯ ಜನರಿಗೆ ಸಹಾಯ ಮಾಡುವುದರಿಂದ ಮನುಷ್ಯನು ತಾನೇ ಸ್ವತಃ ಸಂಕಷ್ಟಕ್ಕೆ ಸಿಲುಕುತ್ತಾನೆ. ಅಂತಹ ಜನರಿಗೆ ಸಹಾಯ ಮಾಡಲು ಹೋದರೆ, ನಿಮ್ಮ ದಯೆಯ ಗುಣವೇ ನಿಮ್ಮನ್ನು ಬಡತನ ಮತ್ತು ವಿನಾಶದತ್ತ ತಳ್ಳಬಹುದು. ಆ ಮೂರು ರೀತಿಯ ಜನರು ಯಾರು ಎಂಬ ವಿವರ ಇಲ್ಲಿದೆ.
ಕೆಟ್ಟ ಸ್ವಭಾವದ ದುಷ್ಟ ವ್ಯಕ್ತಿಗಳು:

ಚಾಣಕ್ಯ ನೀತಿಯ ಪ್ರಕಾರ, ದುಷ್ಟ ಅಥವಾ ಕೆಟ್ಟ ಆಲೋಚನೆ ಹೊಂದಿರುವ ವ್ಯಕ್ತಿಗಳಿಂದ ಯಾವಾಗಲೂ ಅಂತರ ಕಾಯ್ದುಕೊಳ್ಳಬೇಕು. ಇಂತಹ ಜನರಿಗೆ ಸಹಾಯ ಮಾಡುವುದು ಎಂದರೆ ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಂಡಂತೆ. ದುಷ್ಟ ಜನರಿಗೆ ಯಾವುದೇ ಸಂಬಂಧಗಳು ಮುಖ್ಯವೆನಿಸುವುದಿಲ್ಲ. ನೀವು ಅವರಿಗೆ ಎಷ್ಟೇ ಒಳ್ಳೆಯದನ್ನು ಮಾಡಿದರೂ, ಸರಿಯಾದ ಸಮಯ ಸಿಕ್ಕಾಗ ನಿಮ್ಮ ವಿರುದ್ಧವೇ ತಿರುಗಿಬೀಳಲು ಅವರು ಹಿಂಜರಿಯುವುದಿಲ್ಲ. ಇಂತವರ ಸಹವಾಸ ಅಥವಾ ಸಹಾಯ ನಿಮ್ಮ ಸಾಮಾಜಿಕ ಗೌರವ ಮತ್ತು ವರ್ಚಸ್ಸನ್ನು ಹಾಳುಮಾಡುತ್ತದೆ.
ಸದಾ ಸಕಾರಣವಿಲ್ಲದೇ ಗೋಳಾಡುವ/ಅಸಂತುಷ್ಟ ಜನರು:
ಜಗತ್ತಿನಲ್ಲಿ ಕೆಲವರು ಯಾವುದೇ ಬಲವಾದ ಕಾರಣವಿಲ್ಲದಿದ್ದರೂ ಸದಾ ದುಃಖಿಸುತ್ತಾ, ತಮ್ಮ ವಿಧಿಯನ್ನು ಮತ್ತು ಪರಿಸ್ಥಿತಿಯನ್ನು ನಿಂದಿಸುತ್ತಿರುತ್ತಾರೆ. ಪ್ರತಿಯೊಂದೂ ಇದ್ದರೂ ಇವರು ಅಸಂತುಷ್ಟರಾಗಿರುತ್ತಾರೆ. ಇಂತಹ ನಕಾರಾತ್ಮಕ ಆಲೋಚನೆ ಇರುವ ಜನರಿಗೆ ಸಹಾಯ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ, ಇವರಲ್ಲಿರುವ ನಕಾರಾತ್ಮಕ ಶಕ್ತಿಯು ನಿಮ್ಮ ಜೀವನದ ಮೇಲೆಯೂ ಕೆಟ್ಟ ಪ್ರಭಾವ ಬೀರುತ್ತದೆ. ಇದರಿಂದ ನಿಮ್ಮ ಮನಃಶಾಂತಿ ಕೆಟ್ಟು, ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ.
ಮೂರ್ಖ ವ್ಯಕ್ತಿಗೆ ಉಪದೇಶ ನೀಡುವುದು ಅಥವಾ ಸಹಾಯ ಮಾಡುವುದು:
ಒಳ್ಳೆಯದು ಮತ್ತು ಕೆಟ್ಟದ್ದರ ವ್ಯತ್ಯಾಸ ತಿಳಿಯದ ಮೂರ್ಖ ವ್ಯಕ್ತಿಗೆ ಬುದ್ಧಿ ಹೇಳುವುದು ಅಥವಾ ಸಹಾಯ ಮಾಡುವುದು ಅತ್ಯಂತ ದಡ್ಡತನದ ಕೆಲಸ. ಇಂತಹ ಜನರಿಗೆ ಸರಿಯಾದ ದಾರಿ ತೋರಿಸಲು ಪ್ರಯತ್ನಿಸಿದಾಗ, ಅವರು ನಿಮ್ಮ ಮಾತನ್ನೇ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ ಮತ್ತು ಸಹಾಯ ಮಾಡಿದವರನ್ನೇ ತಮ್ಮ ಶತ್ರು ಎಂದು ಭಾವಿಸುತ್ತಾರೆ. ಇಂತಹವರೊಂದಿಗೆ ವಾದ ಮಾಡುವುದಾಗಲಿ ಅಥವಾ ಅವರಿಗೆ ಸಹಾಯ ಮಾಡುವುದಾಗಲಿ ನಿಮ್ಮ ಶಾಂತಿಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ.
ಯಾರಿಗಾದರೂ ಸಹಾಯ ಮಾಡುವ ಮುನ್ನ ಅವರ ಉದ್ದೇಶ ಮತ್ತು ನಡವಳಿಕೆಯನ್ನು ಸರಿಯಾಗಿ ಮೌಲ್ಯಮಾಪನ ಮಾಡುವುದು ಅಗತ್ಯ. ಅರ್ಹ, ಪ್ರಾಮಾಣಿಕ ಮತ್ತು ಕಷ್ಟದಲ್ಲಿರುವ ವ್ಯಕ್ತಿಗೆ ಮಾಡುವ ಸಹಾಯ ಮಾತ್ರ ನಿಮಗೆ ಮನಃಶಾಂತಿ ಮತ್ತು ಸಮಾಜದಲ್ಲಿ ಗೌರವವನ್ನು ತಂದುಕೊಡುತ್ತದೆ.











