ಆಚಾರ್ಯ ಚಾಣಕ್ಯರ ನೀತಿಗಳು ಇಂದಿಗೂ ಪ್ರಸ್ತುತ. ಜೀವನ, ಸಮಾಜ, ರಾಜಕೀಯ ಮತ್ತು ಸ್ನೇಹ-ಸಂಬಂಧಗಳ ಕುರಿತು ಚಾಣಕ್ಯರು ಹೇಳಿರುವ ವಿಚಾರಗಳನ್ನು ಇಂದಿನ ಯುವಜನತೆ ಬಹಳ ಆಸಕ್ತಿಯಿಂದ ಅನುಸರಿಸುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯ ಜೀವನದಲ್ಲಿ ಶತ್ರುಗಳಿಗಿಂತಲೂ ಅಪಾಯಕಾರಿಯಾದ ಕೆಲ ಸ್ನೇಹಿತರಿರುತ್ತಾರೆ. ಅಂಥವರನ್ನು ಎಂದಿಗೂ ಕುರುಡಾಗಿ ನಂಬಬಾರದು ಎಂದು ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಾದರೆ ಜೀವನದಲ್ಲಿ ಎಂತಹ ಸ್ನೇಹಿತರಿಂದ ದೂರವಿರಬೇಕು? ಇಲ್ಲಿದೆ ಮಾಹಿತಿ:
ರಹಸ್ಯಗಳನ್ನು ತಿಳಿದು ದ್ರೋಹ ಬಗೆಯುವವರು:
ಕೆಲ ಸ್ನೇಹಿತರು ನಿಮ್ಮ ಎಲ್ಲ ರಹಸ್ಯಗಳನ್ನು ತಿಳಿದುಕೊಳ್ಳುತ್ತಾರೆ. ಆದರೆ, ತಮಗೆ ಅನುಕೂಲವಾದಾಗ ಅಥವಾ ಸಂದರ್ಭ ಬಂದಾಗ ಅದೇ ರಹಸ್ಯಗಳನ್ನು ನಿಮ್ಮ ವಿರುದ್ಧವೇ ಅಸ್ತ್ರವಾಗಿ ಬಳಸಿ ದೊಡ್ಡ ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ಇಂತಹ ಕೆಟ್ಟ ಸ್ನೇಹಿತರ ಬಗ್ಗೆ ಎಚ್ಚರಿಕೆ ಅಗತ್ಯ.
ಮುಖಸ್ತುತಿ ಮಾಡುವ ಬೆನ್ನಹಿಂದಿನ ದ್ರೋಹಿಗಳು:
ನಿಮ್ಮ ಮುಖದ ಮುಂದೆ ಸಿಹಿಯಾಗಿ, ಒಳ್ಳೆಯವರಂತೆ ಮಾತನಾಡಿ, ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನರನ್ನು ಎಂದಿಗೂ ನಂಬಬೇಡಿ. ಇಂಥವರಿಂದ ತಕ್ಷಣವೇ ದೂರವಿರುವುದು ಒಳಿತು.
ನಿಮ್ಮ ಯಶಸ್ಸನ್ನು ಕಂಡು ಅಸೂಯೆ ಪಡುವವರು:
ನಿಮ್ಮ ಯಶಸ್ಸು, ಬೆಳವಣಿಗೆಯನ್ನು ಕಂಡು ಮನಸ್ಸಿನೊಳಗೆ ಸಂತೋಷಪಡದೆ ಅಸೂಯೆ ಅಥವಾ ಹೊಟ್ಟೆಯುರಿ ಪಡುವವರ ಸ್ನೇಹ ಅಪಾಯಕಾರಿ. ಇಂಥವರು ಯಾವ ಕ್ಷಣದಲ್ಲಾದರೂ ನಿಮಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ.
ಕಷ್ಟಕಾಲದಲ್ಲಿ ಕೈಬಿಡುವವರು:
ನೀವು ಕಷ್ಟದಲ್ಲಿರುವಾಗ, ಆಪತ್ತಿನ ಸಮಯದಲ್ಲಿ ನಿಮ್ಮ ನೆರವಿಗೆ ಬಾರದವರು ಎಂದಿಗೂ ನಿಜವಾದ ಸ್ನೇಹಿತರಾಗಲು ಸಾಧ್ಯವಿಲ್ಲ. ಅಂತಹ ಸ್ವಾರ್ಥಿ ಸ್ನೇಹಿತರಿಗಾಗಿ ನೀವೂ ಯಾವುದೇ ತ್ಯಾಗ ಮಾಡಲು ಹೋಗಬೇಡಿ.
ನಿಮ್ಮ ದೌರ್ಬಲ್ಯಗಳನ್ನು ಬಯಲು ಮಾಡಿ ಅವಮಾನಿಸುವವರು:
ನಿಮ್ಮ ದೌರ್ಬಲ್ಯ ಅಥವಾ ಬಲಹೀನತೆಗಳನ್ನು ತಿಳಿದುಕೊಂಡು, ನಾಲ್ಕು ಜನರ ಮುಂದೆ ನಿಮ್ಮನ್ನು ಕೀಳಾಗಿ ಕಂಡು ಅವಮಾನಿಸುವವರಿಂದ ಸದಾ ಜಾಗರೂಕರಾಗಿರಿ. ಇಂತಹ ಸ್ನೇಹಿತರು ನಿಮ್ಮ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತಾರೆ.












