ಆಚಾರ್ಯ ಚಾಣಕ್ಯರು ಪ್ರಾಚೀನ ಭಾರತದ ಶ್ರೇಷ್ಠ ವಿದ್ವಾಂಸ ಮತ್ತು ಅರ್ಥಶಾಸ್ತ್ರಜ್ಞ. ಅವರು ತಮ್ಮ ‘ಚಾಣಕ್ಯ ನೀತಿ’ಯಲ್ಲಿ ಬಾಂಧವ್ಯಗಳು, ಜೀವನ ತತ್ವಗಳ ಜೊತೆಗೆ ಆರ್ಥಿಕ ಶಿಸ್ತು ಹಾಗೂ ಹಣಕಾಸು ನಿರ್ವಹಣೆಯ ಕುರಿತು ಪ್ರಮುಖ ಮಾರ್ಗದರ್ಶನ ನೀಡಿದ್ದಾರೆ.
ಇಂದಿನ ಕಾಲದಲ್ಲಿ ಅನೇಕರು “ಎಷ್ಟೇ ದುಡಿದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ, ಸಾಲದ ಹೊರೆ ಹೆಚ್ಚಾಗುತ್ತಿದೆ” ಎಂದು ಚಿಂತಿಸುತ್ತಾರೆ. ಅಂತಹವರಿಗೆ ಆರ್ಥಿಕ ಸಮಸ್ಯೆಯಿಂದ ಹೊರಬರಲು ಮತ್ತು ಸಾಲಮುಕ್ತ ಜೀವನ ನಡೆಸಲು ಚಾಣಕ್ಯರು ತಿಳಿಸಿರುವ ಪ್ರಮುಖ ಸೂತ್ರಗಳು ಇಲ್ಲಿವೆ.
ಮುಂಜಾನೆಯ ಕಿರಿಕಿರಿ ಮತ್ತು ಸೋಮಾರಿತನ ಬಿಡಿ

ಚಾಣಕ್ಯರ ಪ್ರಕಾರ, ಮುಂಜಾನೆ ಎದ್ದ ತಕ್ಷಣ ಜಗಳವಾಡುವುದು, ಕೋಪ-ಚಿರಿಚಿರಿ ತೋರುವುದು ಮತ್ತು ತಡವಾಗಿ ನಿದ್ದೆಯಿಂದ ಏಳುವುದು ಮನೆಗೆ ಒಳ್ಳೆಯದಲ್ಲ. ಇದರಿಂದ ದಿನವಿಡೀ ಒತ್ತಡ ಮತ್ತು ಅಸಹನೆ ಮುಂದುವರಿಯುತ್ತದೆ. ಸೋಮಾರಿತನ ಇರುವವರ ಮನೆಯಲ್ಲಿ ಎಂದಿಗೂ ಹಣ ನಿಲ್ಲುವುದಿಲ್ಲ ಹಾಗೂ ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ.
ಹಣವನ್ನು ಗೌರವಿಸಿ
ಕೆಲವರು ಹಣವನ್ನು ಅಥವಾ ಸಣ್ಣ ಮೊತ್ತವನ್ನು ಕೀಳಾಗಿ ಕಾಣುತ್ತಾರೆ. ಆದರೆ ಹಣದ ಮಹತ್ವವನ್ನು ಅರ್ಥಮಾಡಿಕೊಳ್ಳದೆ ಅದನ್ನು ನಿರ್ಲಕ್ಷಿಸುವವರ ಬಳಿ ಲಕ್ಷ್ಮೀದೇವಿ ನೆಲೆಸುವುದಿಲ್ಲ. ಹಣಕ್ಕೆ ಸೂಕ್ತ ಗೌರವ ನೀಡಿ, ಉಳಿತಾಯ ಮನೋಭಾವ ಬೆಳೆಸಿಕೊಂಡರೆ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ.
ಅನ್ನಕ್ಕೆ ಅವಮಾನ ಮಾಡಬೇಡಿ
ಆಹಾರ ಮತ್ತು ಧಾನ್ಯವನ್ನು ಅವಮಾನಿಸುವುದು ಅಥವಾ ಆಹಾರವನ್ನು ವ್ಯರ್ಥವಾಗಿ ಚೆಲ್ಲುವುದು ದೇವಿಯ ಕೋಪಕ್ಕೆ ಕಾರಣವಾಗುತ್ತದೆ. ಅನ್ನಪೂರ್ಣೇಶ್ವರಿ ಮತ್ತು ಲಕ್ಷ್ಮೀದೇವಿಯ ಕೃಪೆ ಇರಬೇಕಾದರೆ ಆಹಾರವನ್ನು ಗೌರವಿಸಬೇಕು. ಅನ್ನಕ್ಕೆ ಅಗೌರವ ತೋರುವ ಮನೆಗಳಲ್ಲಿ ದಾರಿದ್ರ್ಯ ಹಾಗೂ ಆರ್ಥಿಕ ಸಂಕಷ್ಟಗಳು ಕಾಡುತ್ತವೆ.
ಖರ್ಚಿನ ಮೇಲೆ ನಿಯಂತ್ರಣವಿರಲಿ
ಸಾಲದಿಂದ ಮುಕ್ತರಾಗಬೇಕಾದರೆ ದಿನನಿತ್ಯದ ಖರ್ಚುಗಳ ಮೇಲೆ ಕಟ್ಟುನಿಟ್ಟಾದ ನಿಯಂತ್ರಣ ಇರಬೇಕು. ನಿತ್ಯ ಎಷ್ಟು ಆದಾಯ ಬರುತ್ತದೆ ಮತ್ತು ಎಷ್ಟು ವೆಚ್ಚ ಮಾಡಬೇಕು ಎಂಬ ಯೋಜನೆಯನ್ನು ರೂಪಿಸಿಕೊಳ್ಳಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ನಿಗದಿತ ಬಜೆಟ್ ಪ್ರಕಾರ ಬದುಕಿದರೆ ನಿಧಾನವಾಗಿ ಸಾಲದ ಹೊರೆ ತಗ್ಗಿ ಆರ್ಥಿಕ ಸ್ಥಿರತೆ ಲಭಿಸುತ್ತದೆ ಎಂದು ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ.












