ಉನ್ನತ ಗುಣಮಟ್ಟದ ಕೃಷಿ ಗಣತಿ ಕಾರ್ಯಕೈಗೊಳ್ಳಿ : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ

2 Min Read

ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಡಿಸೆಂಬರ್01):  ಇದೇ ಮೊದಲ ಬಾರಿಗೆ 2021-22ನೇ ಸಾಲಿನ ಕೃಷಿ ಗಣತಿಯನ್ನು ಮೊಬೈಲ್ ಆ್ಯಪ್ ಮೂಲಕ ನಡೆಸಲಾಗುತ್ತಿದ್ದು, ಜಿಲ್ಲೆಯಲ್ಲಿ ಉನ್ನತ ಗುಣಮಟ್ಟದ ಕೃಷಿ ಗಣತಿ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾದ 2021-22ನೇ ಸಾಲಿನ ಕೃಷಿ ಗಣತಿ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮ ಲೆಕ್ಕಿಗರ ಬಳಿ ಸಂಪೂರ್ಣ ಮಾಹಿತಿ ಇರುವುದರಿಂದ ಕೃಷಿ ಗಣತಿ ಕಾರ್ಯವನ್ನು ಕಂದಾಯ ಇಲಾಖೆ ವಹಿಸಲಾಗಿದೆ. 2021-22ನೇ ಸಾಲಿನ ಕೃಷಿ ಗಣತಿಯ ಮೊದಲ ಹಂತದ ಕಾರ್ಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ನಿಗದಿತ ಸಮಯದೊಳಗೆ ಗುರಿ ಸಾಧಿಸಬೇಕು. ಉತ್ತಮ ತರಬೇತಿ ಪಡೆದು, ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಗಣತಿ ಕಾರ್ಯದ ಮೇಲುಸ್ತುವಾರಿಯನ್ನು ಕಂದಾಯ ನಿರೀಕ್ಷಕರು, ತಹಶೀಲ್ದಾರ್‍ಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು  ಎಂದರು.

ಗಣತಿ ಕಾರ್ಯದ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಉಂಟಾದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಳ್ಳಬೇಕು. ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಗಣತಿ ಮಾಡುವುದರಿಂದ ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ.  ಗೊಂದಲಕ್ಕೆ ಒಳಗಾಗದೆ, ಕಾಲಕಾಲಕ್ಕೆ ಎದುರಾಗುವ ಸಮಸ್ಯೆ ಬಗೆಹರಿಸಿಕೊಂಡು ಎಲ್ಲರೂ ಒಟ್ಟಾಗಿ ಸೇರಿ ಜಿಲ್ಲೆಯಲ್ಲಿ ಕೃಷಿ ಗಣತಿಯನ್ನು ಉನ್ನತ ಗುಣಮಟ್ಟದೊಂದಿಗೆ ಹಾಗೂ ನಿಗಧಿತ ಸಮಯಕ್ಕೆ ಪೂರ್ಣಗೊಳಿಸಬೇಕು ಎಂದು ಹೇಳಿದ ಅವರು, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಅವರು ಸಮನ್ವಯದಿಂದ ಕಾರ್ಯನಿರ್ವಹಿಸಿ ಗಣತಿ ಕಾರ್ಯ ಯಶಸ್ವಿಗೊಳಿಸಬೇಕು ಎಂದರು.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ಎಂ.ರಾಜಣ್ಣ ಮಾತನಾಡಿ, ಪ್ರತಿ ಐದು ವರ್ಷಕೊಮ್ಮೆ ಕೃಷಿ ಗಣತಿ ಕಾರ್ಯ ನಡೆಸಲಾಗುತ್ತಿದ್ದು, ಪ್ರಸ್ತುತ 11ನೇ ಕೃಷಿ ಗಣತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೃಷಿ ಗಣತಿ ಕಾರ್ಯವನ್ನು ಒಟ್ಟು ಮೂರು ಹಂತಗಳಲ್ಲಿ ಗಣತಿ ಕಾರ್ಯ ಕೈಗೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ ಹಿಡುವಳಿದಾರರ ಪಟ್ಟಿಯೊಂದಿಗೆ ಅವರು ಹೊಂದಿರುವ ಕ್ಷೇತ್ರ ಮತ್ತು ಸಾಮಾಜಿಕ ಗುಂಪು ಮತ್ತು ಲಿಂಗ ಇವುಗಳಿಗೆ ಸಂಬಂಧಿದಾಗಿರುತ್ತದೆ. ಎರಡನೇ ಹಂತದಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿನ ಪ್ರತಿಯೊಬ್ಬ ನಿವಾಸಿ ಹಿಡುವಳಿದಾರನಿಗೆ ಸಂಬಂಧಿಸಿದ ಕೃಷಿ ಚಟುವಟಿಕೆಯ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಮೂರನೇ  ಹಂತದಲ್ಲಿ ಕೃಷಿ ಇನ್‍ಪುಟ್ ಮಾದರಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಆಯ್ದ ಗ್ರಾಮಗಳ ಹಿಡುವಳಿದಾರರಿಂದ ಮಾಹಿತಿ ಸಂಗ್ರಹಿಸಲಾಗುವುದು. ಇದೇ ಮೊದಲ ಬಾರಿಗೆ ಗಣತಿ ಕಾರ್ಯವನ್ನು ಮೊಬೈಲ್ ಆಪ್ ಮೂಲಕ ಮಾಡಲಾಗುತ್ತಿದೆ.  ಕೃಷಿ ಗಣತಿಯು ವ್ಯಾಪಕವಾದ ಸಂಘಟಿತ ರಾಷ್ಟ್ರೀಯ ಕೃಷಿ ಅಂಕಿ ಅಂಶಗಳ ಪದ್ಧತಿಯನ್ನು ಅಭಿವೃದ್ಧಿಗೊಳಿಸಲು ಆಧಾರವಾಗಲಿದೆ ಎಂದರು.

ಕಾರ್ಯಾಗಾರದಲ್ಲಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ರಮೇಶ್‍ಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹನುಮಾ ನಾಯಕ್, ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿ ಅಶ್ವತ್ಥಾಮ, ಭೂದಾಖಲೆಗಳ ಉಪನಿರ್ದೇಶಕ ಬಿ.ರಾಮಾಂಜನೇಯ, ಎನ್‍ಐಸಿ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಆರು ತಾಲ್ಲೂಕುಗಳ ತಹಶೀಲ್ದಾರ್‍ಗಳು, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *