ದೆಹಲಿ.ಜುಲೈ.29: ಸಾರ್ವಜನಿಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿರುವ ಕೇಂದ್ರ ಸರ್ಕಾರ, ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ 2026’ ಅನ್ನು ಬುಧವಾರ (ಜುಲೈ 29) ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಿದೆ. ಪ್ರತಿಪಕ್ಷಗಳ ತೀವ್ರ ಗದ್ದಲ ಮತ್ತು ಕೋಲಾಹಲದ ನಡುವೆಯೇ ಈ ವಿಧೇಯಕಕ್ಕೆ ಸಭೆಯ ಸಮ್ಮತಿ ದೊರೆತಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಗುಂಡಿನ ದಾಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ಇದು ಸಭೆಯಲ್ಲಿ ತೀವ್ರ ಜಟಾಪಟಿಗೆ ಕಾರಣವಾಯಿತು. ಪ್ರತಿಪಕ್ಷಗಳ ಭಾರಿ ಪ್ರತಿಭಟನೆಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವಿಧೇಯಕವನ್ನು ಮಂಡಿಸಿ ಅಂಗೀಕರಿಸಿತು.
ವಿಧೇಯಕದ ಕುರಿತು ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, “ಸಾರ್ವಜನಿಕ ಪರೀಕ್ಷೆಗಳ ಪವಿತ್ರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ತಿದ್ದುಪಡಿಗಳು ಹಳೆಯ ಅನುಭವಗಳಿಂದ ಕಲಿತು, ಅಕ್ರಮಗಳನ್ನು ತಡೆಯಲು ಕಾನೂನು ಚೌಕಟ್ಟನ್ನು ಮತ್ತಷ್ಟು ಬಲಪಡಿಸುವ ಸರ್ಕಾರದ ಇಚ್ಛಾಶಕ್ತಿಯನ್ನು ತೋರಿಸುತ್ತವೆ” ಎಂದು ಹೇಳಿದರು.
The Public Examination (Prevention of Unfair Means) Amendment Bill, 2026, passed in Lok Sabha. pic.twitter.com/rjuhibsGXy
— ANI (@ANI) July 29, 2026










