ಬಿಜೆಪಿ ಎಲ್ಲಾ ಕರ್ಮಕಾಂಡಗಳಲ್ಲಿ ಬೊಮ್ಮಾಯಿಯವರ ಪಾಲುದಾರಿಕೆ ಇದೆ: ಸಿದ್ದರಾಮಯ್ಯ

suddionenews
2 Min Read

ಹಾನಗಲ್: ಕೊವಿಡ್ ಸಂದರ್ಭದಲ್ಲಿ ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಶ್ರೀನಿವಾಸ್ ಮಾನೆ ಮಾಡಿದ್ದಾರೆ. ಕಷ್ಟಕಾಲದಲ್ಲಿ ತಮ್ಮ ನೆರವಿಗೆ ಧಾವಿಸಿದ್ದರಿಂದ ಜನರೇ ಅವರನ್ನು ಆಪದ್ಬಾಂಧವ ಎಂದು ಕರೆಯುತ್ತಿದ್ದಾರೆ. ಈ ಬಾರಿ ಅವರನ್ನು ಗೆಲ್ಲಿಸಲೇ ಬೇಕು ಎಂದು ನಿರ್ಧಾರ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇನ್ನೂ ಮೆಕ್ಕೆಜೋಳಕ್ಕೆ 1850 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ, ಆದರೆ ಖರೀದಿ ಮಾಡ್ತಿಲ್ಲ. ಖರೀದಿ ಮಾಡದೆ ಬೆಂಬಲ ಬೆಲೆ ಘೋಷಿಸಿ ಏನು ಉಪಯೋಗ? ಬಿಜೆಪಿ ಸರ್ಕಾರದ ಎಲ್ಲಾ ಕರ್ಮಕಾಂಡಗಳಲ್ಲಿ ಬಸವರಾಜ ಬೊಮ್ಮಾಯಿಯವರ ಪಾಲುದಾರಿಕೆ ಇದೆ. ಯಡಿಯೂರಪ್ಪ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರ ಒಂದಾ ಎರಡಾ? ಬೊಮ್ಮಾಯಿ ಈಗ ಮುಖ್ಯಮಂತ್ರಿ ಆದ ಕೂಡಲೆ ಹಿಂದೆ ಮಾಡಿದ್ದ ಕರ್ಮಗಳೆಲ್ಲಾ ಹೋಗುತ್ತಾ? ಯಡಿಯೂರಪ್ಪನ್ನ ಜೈಲಿಗೆ ಹಾಕ್ತೀವಿ ಅಂತ ಹೆದರಿಸಿ ಮುಖ್ಯಮಂತ್ರಿ ಹುದ್ದೆ ಇಂದ ಕೆಳಗಿಳಿಸಿದ್ರು, ಪಾಪ ಕಣ್ಣೀರು ಹಾಕ್ತಾ ರಾಜೀನಾಮೆ ಕೊಟ್ಟರು. ಯಡಿಯೂರಪ್ಪ ಕೆಳಗಿಳಿಯೋದನ್ನೇ ಕಾಯ್ತಾ ಇದ್ರು ಬೊಮ್ಮಾಯಿ ಎಂದರು.

ನಿನ್ನೆ ಸಂಗೂರು ಸಕ್ಕರೆ ಕಾರ್ಖಾನೆ ಬಗ್ಗೆ ಮಾತಾಡಿದ್ದೆ. ಈ ಕಾರ್ಖಾನೆಯ ಆಡಳಿತ ಮಂಡಳಿಗೆ ಉದಾಸಿ ಅವರು ಅಧ್ಯಕ್ಷ ಮತ್ತು ಸಜ್ಜನರ್ ಉಪಾಧ್ಯಕ್ಷ ಆಗಿದ್ದರು. ಕಾರ್ಖಾನೆ ದಿವಾಳಿಯಾಗಿದ್ದು ನಮ್ಮಿಂದಲೋ? ಸಜ್ಜನರ್ ಮತ್ತು ಉದಾಸಿ ಇಂದಲೋ? ಇಂಥವರು ಸಜ್ಜನರಲ್ಲ ದುರ್ಜನರು. ಭ್ರಷ್ಟಾಚಾರದ ಆರೋಪ ಇರುವ ವ್ಯಕ್ತಿಯನ್ನು ಶಾಸಕರಾಗಿ ಆಯ್ಕೆ ಮಾಡ್ತೀರಾ? ಸಜ್ಜನರ್ ಮೇಲೆ ನನಗೆ ವೈಯಕ್ತಿಕ ದ್ವೇಷ ಇಲ್ಲ. ಆದರೆ ಸತ್ಯ ಜನರಿಗೆ ಗೊತ್ತಾಗಬೇಕಲ್ವಾ? ಇವತ್ತು ಸಕ್ಕರೆ ಕಾರ್ಖಾನೆಯನ್ನು ಸಿದ್ದೇಶ್ವರ ಅವರಿಗೆ ಕೊಟ್ಟಿರೋದು ಯಾರು?

ರಾಜ್ಯದಲ್ಲಿ ಬಿಜೆಪಿ ಬಂದು ಎರಡೂ ಕಾಲು ವರ್ಷ ಆಯ್ತು? ಈ ಸರ್ಕಾರ ಜನರಿಗಾಗಿ ಏನಾದ್ರೂ ಮಾಡಿದೆಯಾ? ನಾನು ಏಳು ಕೆ.ಜಿ ಅಕ್ಕಿ ಉಚಿತವಾಗಿ ಕೊಡ್ತಿದ್ದೆ. ಈಗಿನ ಬಿಜೆಪಿ ಸರ್ಕಾರ ಅದನ್ನು ಐದು ಕೆ.ಜಿ ಗೆ ಇಳಿಸಿದೆ. ಅದಕ್ಕೆ ನಾನು ಕೊರೊನಾ ಇದೆ, ಲಾಕ್ ಡೌನ್ ಇದೆ, ಜನರಿಗೆ ದುಡಿಮೆ ಇಲ್ಲ ಹತ್ತು ಕೆ.ಜಿ ಅಕ್ಕಿ ಕೊಡಿ, ಪ್ರತಿ ಬಿಪಿಎಲ್ ಕುಟುಂಬಕ್ಕೆ ಹತ್ತು ಸಾವಿರ ಧನಸಹಾಯ ಮಾಡಿ ಎಂದು ಸದನದಲ್ಲಿ ಹೇಳಿದೆ, ನನ್ನ ಮಾತನ್ನು ಕಿವಿಗೆ ಹಾಕೊಂಡಿಲ್ಲ. ಜನರ ತೆರಿಗೆ ಹಣವನ್ನು ಜನರಿಗೆ ಖರ್ಚು ಮಾಡಲು ಏನು ರೋಗ ಸರ್ಕಾರಕ್ಕೆ? ಮುಂದಿನ ಚುನಾವಣೆಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಆಗ ಬಡವರಿಗೆ ಹತ್ತು ಕೆ.ಜಿ ಉಚಿತ ಅಕ್ಕಿ ಕೊಡುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *