ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

suddionenews
1 Min Read

 

ಬಳ್ಳಾರಿ : ಮುಂಬರುವ ವಿಧಾನಸಭಾ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಹಾನಗಲ್ ಹಾಗೂ ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಂದು ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಇಂದು ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಈ ಕ್ಷೇತ್ರದಿಂದ ತರಿಸಿಕೊಂಡ ವರದಿಯ ಕುರಿತು ಚರ್ಚಿಸಿ, ಪಕ್ಷದ ಸಂಸದೀಯ ಮಂಡಳಿಗೆ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗುವುದು. ಶೀಘ್ರವೇ ಅಭ್ಯರ್ಥಿಯ ಹೆಸರು ಪ್ರಕಟವಾಗಲಿದೆ. ಪಕ್ಷವು ಬೂತ್ ಮಟ್ಟದಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ವರೆಗೆ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಿ, ಪಕ್ಷದ ಗೆಲುವಿಗಾಗಿ ಶ್ರಮಿಸುವುದಾಗಿ ತಿಳಿಸಿದರು.

ಕಳೆದ 10-12 ವರ್ಷಗಳ ಅವಧಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಉನ್ನತ ಮಟ್ಟದ ಸಮಿತಿಗಳಲ್ಲಿ ಅನುಮೋದನೆ ಪಡೆದುಕೊಂಡು, ಭೂಮಿ, ನೀರು ಹಂಚಿಕೆ ಮಾಡಿಸಿಕೊಂಡರೂ ಕೈಗಾರಿಕೆಗಳು ಸ್ಥಾಪನೆಯಾಗದೆ ಇರುವ ಹಲವು ಪ್ರಕರಣಗಳು ತಮ್ಮ ಗಮನದಲ್ಲಿದೆ. ಇದರಿಂದಾಗಿ ಬಹುದೊಡ್ಡ ಪ್ರಮಾಣದ ಭೂಮಿ ಬಳಕೆಯಾಗದೆ ಇರುವುದು ಸಹ ಅರಿವಿದೆ. ಈ ಹಿನ್ನೆಲೆಯಲ್ಲಿ ಇಂತಹ ಯೋಜನೆಗಳ ಪುನರ್ ಪರಿಶೀಲನೆ ನಡೆಸಲಾಗುವುದು. ಈ ಕಂಪೆನಿಗಳು ಕೈಗಾರಿಕೆ ಸ್ಥಾಪಿಸದೆ ಇದ್ದರೆ, ಅವರ ಹಂಚಿಕೆಯನ್ನು ರದ್ದುಪಡಿಸಿ, ಉದ್ಯೋಗ ಸೃಷ್ಟಿಗೆ ಪೂರಕವಾದ ಕೈಗಾರಿಕೆ ಸ್ಥಾಪನೆಗೆ ಮುಂದೆ ಬರುವವರಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ತುಂಗಭದ್ರಾ ಅಣೆಕಟ್ಟೆಯಲ್ಲಿ ಹೂಳು ತೆಗೆಯಲು ಯಾವುದೇ ಕಂಪೆನಿ ಮುಂದೆ ಬಾರದ ಹಿನ್ನೆಲೆಯಲ್ಲಿ ಸಮಾನಾಂತರವಾಗಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಹಿಂದಿನ ಅವಧಿಯಲ್ಲಿ ನಮ್ಮ ಸರ್ಕಾರ ನಿರ್ಧರಿಸಿತ್ತು. ಅದರಂತೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ  ಈ ಯೋಜನೆಯ ಡಿ.ಪಿ.ಆರ್. ಸಿದ್ಧಗೊಳಿಸಲು 20 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಡಿ.ಪಿ.ಆರ್. ಸಿದ್ಧವಾದ ನಂತರ ಸಂಬಂಧ ಪಟ್ಟ ರಾಜ್ಯಗಳೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಿ, ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು

Share This Article
Leave a Comment

Leave a Reply

Your email address will not be published. Required fields are marked *