ಬಿಜೆಪಿ,ಜೆಡಿಎಸ್ ಒಕ್ಕಲಿಗರು ಹಾಗೂ ಲಿಂಗಾಯತರನ್ನು ಹೊರತುಪಡಿಸಿ ಬೇರೆ ಸಮುದಾಯದವರಿಗೆ ಅಧಿಕಾರ ನೀಡಿಲ್ಲ :ಡಿ ಕೆ ಶಿವಕುಮಾರ್

suddionenews
1 Min Read

 

ಬೆಂಗಳೂರು:  ನಾನು ಕುಮಾರಣ್ಣನಿಗೆ ಒಂದು ಮನವಿ ಮಾಡಿಕೊಳ್ಳುತ್ತೇನೆ. ಈ ರಾಜ್ಯದ ಚರಿತ್ರೆಯನ್ನೇ ತೆಗೆದುಕೊಂಡರೆ ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್, ಗುಂಡೂರಾಯರು, ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಸಮಾಜಕ್ಕೆ ಯಾವುದಾದರೂ ಪಕ್ಷ ಅಧಿಕಾರ ಕೊಟ್ಟಿದೆ ಎಂದರೆ ಅದು ಕಾಂಗ್ರೆಸ್ ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಎಲ್ಲ ವರ್ಗದ ಪರ ಕಾರ್ಯಕ್ರಮ ರೂಪಿಸುತ್ತದೆ. ಬಿಜೆಪಿಯಲ್ಲಾಗಲಿ ಜನತಾದಳದಲ್ಲಾಗಲಿ ಒಕ್ಕಲಿಗರು ಹಾಗೂ ಲಿಂಗಾಯತರನ್ನು ಹೊರತುಪಡಿಸಿ ಬೇರೆ ಸಮುದಾಯದವರಿಗೆ ಅಧಿಕಾರ ನೀಡಿರುವ ಒಂದು ಉದಾಹರಣೆ ನೀಡಲಿ. ಅವರಿಗೆ ಆ ಇತಿಹಾಸವೇ ಇಲ್ಲ. ನಮ್ಮ ಪಕ್ಷ ಕಾಲಕಾಲಕ್ಕೆ ಆಯಾ ಸಮುದಾಯಕ್ಕೆ ನಾಯಕತ್ವ, ರಾಜಕೀಯ ಪಾಲುದಾರಿಕೆ, ಮೀಸಲಾತಿ ಕಲ್ಪಿಸಿದೆ.

ಸಾಂಪ್ರದಾಯಿಕ ವೃತ್ತಿ ಅವಲಂಬಿತರಿಗೆ  ಕೋವಿಡ್ ಸಮಯದಲ್ಲಿ ಪರಿಹಾರ ನೀಡಬೇಕು ಎಂದು ಹೋರಾಟ ಮಾಡಿದ್ದೇವೆ. ನಾನು ಯಾರಿಗೂ ಭಯಪಡುವ ಅಗತ್ಯವಿಲ್ಲ. ನನಗೆ ನಡುಕ ಬರುತ್ತದೆಯೋ ಇಲ್ಲವೋ ಎಂಬುದು ಕುಮಾರಣ್ಣನಿಗೆ ಚೆನ್ನಾಗಿ ಗೊತ್ತಿದೆ. ರಾಜಕಾರಣ ಮಾತನಾಡುತ್ತಾರೆ, ಮಾತನಾಡಲಿ ಎಂದರು.

ನಾನು ವಿವಿಧ ಸಮಾಜದವರನ್ನು ಭೇಟಿ ಮಾಡಿಕೊಂಡು ಅವರ ನೋವು ತಿಳಿದು, ಅವರ ಏಳ್ಗೆ ಬಗ್ಗೆ ಚರ್ಚಿಸುತ್ತಿದ್ದೇವೆ. ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ಬದ್ಧತೆ ಎಂದರು.

ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಈಶ್ವರಪ್ಪ ಅವರು ಆದಷ್ಟು ಬೇಗ ಆಸ್ಪತ್ರೆಯಲ್ಲಿ ಬೆಡ್ ಸಿದ್ಧಪಡಿಸಿದರೆ ನಾನು ದಾಖಲಾಗುತ್ತೇನೆ. ಯಾರೋ ಒಬ್ಬರು ಮಂತ್ರಿಯಾಗಿದ್ದವರು 24 ಗಂಟೆಗಳಲ್ಲಿ ಕಾಂಗ್ರೆಸ್ ನ 5 ದೊಡ್ಡ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ ಎಂದಿದ್ದರು. ಕಟೀಲ್ ಅವರು 20 ಜನ ಶಾಸಕರು ಕ್ಯೂ ನಿಂತಿದ್ದಾರೆ ಎಂದಿದ್ದಾರೆ. ನಾವು ಯಾರಾದರೂ ಒಬ್ಬ ಶಾಸಕರು ನಮ್ಮ ಪಕ್ಷ ಸೇರುತ್ತಾರೆ ಎಂದು ಹೆಸರು ಹೇಳಿದ್ದೇವಾ? ನಮ್ಮ ರಾಜಕಾರಣ ನಾವು ಮಾಡುತ್ತಿದ್ದೇವೆ, ಇವರಿಗೆ ಭಯ ಯಾಕೆ? ನನ್ನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಲು ಅವರು ಬಯಸಿದ್ದು, ಹಾಸಿಗೆ ವ್ಯವಸ್ಥೆ ಕಲ್ಪಿಸಿದರೆ ನಾನು ಹೋಗಿ ದಾಖಲಾಗುತ್ತೇನೆ’ ಎಂದರು.

Share This Article
Leave a Comment

Leave a Reply

Your email address will not be published. Required fields are marked *