ಬಿಜೆಪಿ ಹಿಂದುತ್ವವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ : ಸುದರ್ಶನ್ ನಾಚಿಯಪ್ಪನ್

3 Min Read

ಚಿತ್ರದುರ್ಗ: ಕಾಂಗ್ರೆಸ್ ಸದಸ್ಯತ್ವ ನೊಂದಣಿಯಿಂದ ಪಕ್ಷ ಸಂಘಟನೆ ಹಾಗೂ ಒಟ್‌ಬ್ಯಾಂಕ್ ರಾಜಕಾರಣಕ್ಕೆ ಅನುಕೂಲವಾಗಲಿದೆ ಎಂದು ಸದಸ್ಯತ್ವ ನೊಂದಣಿ ಅಭಿಯಾನದ ಪಿ.ಆರ್.ಓ.ಸುದರ್ಶನ್ ನಾಚಿಯಪ್ಪನ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಡಿಜಿಟಲ್ ಸದಸ್ಯತ್ವ ನೊಂದಣಿ ಅಭಿಯಾನ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದರು.

ಬಹುಸಂಸ್ಕೃತಿಯುಳ್ಳ ಜಾತ್ಯತೀತ ದೇಶ ಭಾರತದಲ್ಲಿ ಹಿಂದುತ್ವವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಬಿಜೆಪಿ. ಜಾತಿ ಧರ್ಮಗಳ ವಿರುದ್ದ ಕೋಮುಬೀಜ ಬಿತ್ತುತ್ತಿದೆ. ಅದೇ ಕಾಂಗ್ರೆಸ್ ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಕಾಣುತ್ತಿದೆ. ಇದೆ ಬಿಜೆಪಿ.ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಇರುವ ವ್ಯತ್ಯಾಸ ಎನ್ನುವುದನ್ನು ನೀವುಗಳು ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಮನೆ ಮನೆಗೆ ಹೋಗಿ ಜನತೆಗೆ ತಿಳಿಸಬೇಕು ಎಂದು ಕಾರ್ಯಕರ್ತರು ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರುಗಳಿಗೆ ತಿಳಿಸಿದರು.

ಸದಸ್ಯತ್ವ ನೊಂದಣಿಗೆ ಜನರ ಮನೆ ಬಾಗಿಲಿಗೆ ಹೋದಾಗ ನಿಮ್ಮ ಬಳಿ ಅನೇಕ ಪ್ರಶ್ನೆಗಳನ್ನು ಕೇಳಬಹುದು. ಆಗ ನೀವುಗಳು ಉತ್ತರ ನೀಡಲು ಸಿದ್ದರಾಗಿರಬೇಕು. ಒಂದು ಕಾಲದಲ್ಲಿ ಶ್ರೀಮಂತರಿಗಷ್ಟೆ ಮೀಸಲಾಗಿದ್ದ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿ ಕಡುಬಡವನು ಬ್ಯಾಂಕ್‌ಗಳಲ್ಲಿ ವ್ಯವಹರಿಸುವಂತೆ ಮಾಡಿದ್ದು, ಇಂದಿರಾಗಾಂಧಿ, ಡ್ಯಾಂಗಳನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ. ವಿಜ್ಞಾನ ತಂತ್ರಜ್ಞಾನಕ್ಕೆ ಒತ್ತು ನೀಡಿದ್ದು, ನಮ್ಮ ಪಕ್ಷ.

ಆದರೆ ಕೇವಲ ಏಳು ವರ್ಷಗಳಲ್ಲಿ ಪ್ರಧಾನಿ ಮೋದಿ ಎಲ್ಲವನ್ನು ಖಾಸಗಿಕರಣಗೊಳಿಸಲು ಹೊರಟಿದ್ದಾರೆ. ಇದರ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.

ವಿಧಾನಸಭೆ ಚುನಾವಣೆಗೆ ಇನ್ನು ಎಂಟು ತಿಂಗಳ ಕಾಲಾವಕಾಶವಿದೆ. ಜನ ಕಾಯುತ್ತಿದ್ದಾರೆ. ಈಗಿನಿಂದಲೆ ಪಕ್ಷದ ತತ್ವ ಸಿದ್ದಾಂತಗಳನ್ನು ಮನೆ ಮನೆಗೆ ತಲುಪಿಸಿ ಪಕ್ಷವನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಎಂ.ಆರ್.ಸೀತಾರಾಮ್ ಮಾತನಾಡಿ ನಿಮ್ಮ ನಿಮ್ಮ ತಾಲ್ಲೂಕುಗಳಲ್ಲಿ ವೇಗವಾಗಿ ಸದಸ್ಯತ್ವ ನೊಂದಣಿ ಮಾಡಿ. ಯಾವುದೇ ಕಾರಣಕ್ಕೂ ಬಿಜೆಪಿ.ಕುತಂತ್ರ ಫಲಿಸಲು ಬಿಡಬೇಡಿ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ ಅನೇಕ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ನೀಡಿದ್ದಾರೆ.

ರಾಜ್ಯದಲ್ಲಿ ಯಾರು ಹಸಿವಿನಿಂದ ಬಳಲಬಾರದೆಂದು ಉಚಿತ ಅಕ್ಕಿ ನೀಡಿದ್ದನ್ನು ಜನ ಮರೆತು ಕಾಂಗ್ರೆಸ್ ಪಕ್ಷವನ್ನು ಸೋಲಿಸಿದರು. ಜಿಲ್ಲೆಯಲ್ಲಿ ಒಂದುವರೆಯಿಂದ ಎರಡು ಲಕ್ಷ ಸದಸ್ಯತ್ವ ನೊಂದಣಿ ಮಾಡಿ ಪಕ್ಷಕ್ಕೆ ಶಕ್ತಿ ತುಂಬಿ ಎಂದು ಕಾರ್ಯಕರ್ತರು, ಮುಖಂಡರು, ಮುಂಚೂಣಿ ಘಟಕಗಳ ಅಧ್ಯಕ್ಷರುಗಳಲ್ಲಿ ವಿನಂತಿಸಿದರು.

ಆರ್.ವಿ.ವೆಂಕಟೇಶ್ ಮಾತನಾಡುತ್ತ ಕಳೆದ ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮೊದಲು ಒಂದು ಲಕ್ಷ ಪುಸ್ತಕಗಳನ್ನು ಮುದ್ರಿಸಲಾಯಿತು. ಆದರೆ ಡಿಜಿಟಲ್ ಮೂಲಕ ಸದಸ್ಯತ್ವ ನೊಂದಣಿಯಾಗಬೇಕೆಂದು ಎ.ಐ.ಸಿ.ಸಿ.ಸೂಚಿಸಿದ್ದರಿಂದ ರಾಜ್ಯದ 37 ಜಿಲ್ಲೆಗಳಲ್ಲಿ ನೊಂದಣಿಯಾಗುತ್ತಿದೆ.

ಒಂದು ಬೂತ್‌ನಲ್ಲಿ ಕನಿಷ್ಟ ನೂರು ಸದಸ್ಯರ ನೊಂದಣಿಯಾಗಬೇಕು. ಚಿತ್ರದುರ್ಗ ಜಿಲ್ಲೆ ಸದಸ್ಯತ್ವ ನೊಂದಣಿಯಲ್ಲಿ ಹಿಂದಿದೆ. ಇದೇ ತಿಂಗಳ 31 ರೊಳಗೆ ನೊಂದಣಿ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿರುವುದರಿಂದ ಚುರುಕಿನಿಂದ ಡಿಜಿಟಲ್ ಸದಸ್ಯತ್ವ ನೊಂದಣಿಯಾಗಬೇಕೆಂದು ತಾಕೀತು ಮಾಡಿದರು.

ಸದಸ್ಯತ್ವ ನೊಂದಣಿಯಲ್ಲಿ ಮುಂಚೂಣಿ ಘಟಕಗಳ ಅಧ್ಯಕ್ಷರುಗಳ ಪಾತ್ರ ಬಹಳ ಮುಖ್ಯ. ಅಲ್ಪ ಸಮಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಸದಸ್ಯತ್ವ ನೊಂದಣಿ ಪೂರೈಸಿ. ಚುನಾವಣೆ ಸಮೀಪಿಸುತ್ತಿರುವುದರಿಂದ ಜನರ ಬಳಿ ಹೋದಷ್ಟು ನಿಮಗೆ ಲಾಭ. ಲಘುವಾಗಿ ತೆಗೆದುಕೊಳ್ಳಬೇಡಿ.

ಮುಖಂಡರುಗಳು ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತವರು ಡಿಜಿಟಲ್ ಸದಸ್ಯತ್ವವನ್ನು ಪ್ರತಿಷ್ಟೆಯನ್ನಾಗಿ ತೆಗೆದುಕೊಳ್ಳಿ. ಜನರ ಒಲವು ಕಾಂಗ್ರೆಸ್ ಪರವಾಗಿದೆ. ಸಂಘಟನೆ ಕೊರತೆಯನ್ನು ಸರಿಪಡಿಸಿಕೊಂಡು ಪೈಪೋಟಿಯಿಂದ ಸದಸ್ಯತ್ವ ನೊಂದಾಯಿಸಿ ಎಂದು ಹೇಳಿದರು.
ಜಾನ್ಸನ್ ಅಬ್ರಾಹಂ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಹನುಮಲಿ ಷಣ್ಮುಖಪ್ಪ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ಜಿ.ಎಸ್.ಮಂಜುನಾಥ್, ಫಾತ್ಯರಾಜನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತನಂದಿನಿಗೌಡ, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಜಿ.ಎಸ್.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಸಂಪತ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಯೋಗೇಶ್‌ಬಾಬು, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು. ಲಕ್ಷಿಕಾಂತ, ಕುಮಾರ್‌ಗೌಡ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *