ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ; ಆ.22 ರವರೆಗೂ ವೈವಿಧ್ಯಮಯ ವಸ್ತು ಪ್ರದರ್ಶನ

2 Min Read

ಚಿತ್ರದುರ್ಗ, (ಆಗಸ್ಟ್ 20) : ಮಾಜಿ ಮುಖ್ಯಮಂತ್ರಿ ದಿ: ಡಿ.ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆ ಅಂಗವಾಗಿ ನಗರದ ತ.ರಾ.ಸು ರಂಗಮಂದಿರದ ಆವರಣದಲ್ಲಿ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳಿಂದ ಆ. 20 ರಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ವೈವಿಧ್ಯಮಯ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ ನೋಡುಗರ ಗಮನ ಸೆಳೆಯುತ್ತಿದೆ.

ಡಿ.ದೇವರಾಜ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕಂಬಳಿ ಮಾರಾಟ ಮಳಿಗೆ, ಮೀನುಗಾರಿಕೆ ಇಲಾಖೆಯಿಂದ ಮೀನುಗಾರಿಕೆ ವಸ್ತು ಪ್ರದರ್ಶನ ಮಳಿಗೆ, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪಶುಗಳ ಆಹಾರಕ್ಕೆ ಸಂಬಂಧಿಸಿದಂತೆ ವಿವಿಧ ಬಗೆಯ ಪೌಷ್ಠಿಕ ಹಿಂಡಿಗಳನ್ನು ಇಡಲಾಗಿತ್ತು, ಸಾಮಾಜಿಕ ಅರಣ್ಯ ವಿಭಾಗದಿಂದ ವಿವಿಧ ಜಾತಿಯ ಸಸಿಗಳನ್ನು, ಕೃಷಿ ಇಲಾಖೆಯ ವಸ್ತು ಪ್ರದರ್ಶನದಲ್ಲಿ ಕೃಷಿ ವೈಜ್ಞಾನಿಕ ಬೇಸಾಯ ಪದ್ಧತಿಗಳು ಕೃಷಿಯ ಬಗ್ಗೆ ಮಾಹಿತಿ ಹಾಗೂ ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಪ್ರದರ್ಶನದಲ್ಲಿ  ಇಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಭೀಮಸಮುದ್ರ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ರಾಗಿ ಹಾಗೂ ಟೊಮಾಟೊದಿಂದ ಮಾಡಿದ ಹಪ್ಪಳ, ವಿನಾಯಕ ಮಹಿಳಾ ಸ್ವ ಸಹಾಯ ಸಂಘ ಮದಕರಿಪುರ ಮಳಿಗೆಯಲ್ಲಿ ಗೊಂಬೆಗಳು, ಉಪ್ಪಿನಕಾಯಿ ಖಾರದ ಪುಡಿ ಹಾಗೂ ದೇಶಿಯವಾಗಿ ತಯಾರಿಸಿದ ವಿವಿಧ ಬಗೆಯ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ  ಡೆಂಗಿ ನಿಯಂತ್ರಣ, ರೇಬಿಸ್ ಚುಚ್ಚುಮದ್ದು, ಮಗುವಿನ ಪೋಷಣೆ ಮತ್ತು ಆರೈಕೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.

ಲೋಕೋಪಯೋಗಿ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ, ವತಿಯಿಂದ ಜಿಲ್ಲೆಯಲ್ಲಿ ನಡೆದ ವಸತಿ ಶಾಲೆಗಳ ಛಾಯಾ ಚಿತ್ರ ಪ್ರದರ್ಶನ, ಗೋಪಾಲಪುರ ಶ್ರೀಲಕ್ಷ್ಮೀ ಶ್ರೀ ಶಕ್ತಿ ಮಹಿಳಾ ಸ್ವಸಾಯ ಸಂಘ ವತಿಯಿಂದ ಕೈಯಿಂದ ತಯಾರಿಸಿದ ವಸ್ತುಗಳು,  ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಂಯುಕ್ತಾಶ್ರಯದಲ್ಲಿ ಚಿತ್ರಕಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ವಸತಿ ಶಾಲೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಮೊಳಕಾಲ್ಮೂರು ತಾಲೂಕಿನ ಶ್ರೀ ರಾಘವೇಂದ್ರ ಸ್ವಾಮಿ ರೇಷ್ಮೆ ಕೈಮಗ್ಗ ನೇಕಾರರ ಸಹಕಾರ ಸಂಘದಿಂದ ವಿವಿಧ ಬಗೆಯ ರೇಷ್ಮೆ ಸೀರೆಗಳು ಹಾಗೂ ಕಾಟನ್ ಸೀರೆಗಳನ್ನು ಮಾರಾಟಕ್ಕೆ ಇಡಲಾಗಿದ್ದು, ನಾರಿಯರ ಗಮನ ಸೆಳೆಯುತ್ತಿದೆ.

ವಸ್ತುಪ್ರದರ್ಶನ ಆ. 22 ರವರೆಗೂ ಮುಂದುವರೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಿಸಿ, ಆಸಕ್ತರು ಖರೀದಿಯನ್ನೂ ನಡೆಸಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *