Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಇವ ನಮ್ಮವ ಇವನಮ್ಮವನೆಂದೆನ್ನುತ್ತಿಲ್ಲ ಯಾಕೆ….? ಬಸವ ಜಯಂತಿ ಪ್ರಯುಕ್ತ ಡಾ. ಜಿ. ಎನ್‌. ಮಲ್ಲಿಕಾರ್ಜುನಪ್ಪ ಅವರ ವಿಶೇಷ ಲೇಖನ

Facebook
Twitter
Telegram
WhatsApp

ಬಸವಣ್ಣನವರ “ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ.  ಇವ ನಮ್ಮವ ಇವ ನಮ್ಮವ ಇವನಮ್ಮವನೆಂದಿನಿಸಯ್ಯಾ.  ಕೂಡಲ ಸಂಗಮದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ.” ಎನ್ನುವ ವಚನವನ್ನು ಸಾಮೂಹಿಕ ಬದುಕಿನ ಮಹತ್ವವನ್ನು ಒತ್ತಿ ಹೇಳುವ ಯಾವುದೇ ಪ್ರತಿಷ್ಠಿತ ಸಮಾರಂಭಗಳಲ್ಲಿ, ಅದರಲ್ಲೂ ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯ ಕುರಿತ ಕಾರ್ಯಕ್ರಮಗಳಲ್ಲಿ ಉದಾಹರಿಸುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.

ರಾಜಕೀಯ ಪೋಷಿತ ಅಸಹಿಷ್ಣುತೆ ಮತ್ತು ಕೋಮು ಸಂಘರ್ಷಗಳ ಇವತ್ತಿನ ಸಂದರ್ಭದಲ್ಲಿ ಈ ವಚನದ ಸಾಲುಗಳು ಅದೆಷ್ಟು ಕ್ಲೀಷೆಯಾಗಿವೆ ಎಂದರೆ ಆ ವಚನವನ್ನು ಯಾರೂ ಗಂಭೀರವಾಗಿ ಪರಿಗಣಿಸತ್ತಿಲ್ಲ.  ಅಷ್ಟೇ ಏಕೆ, ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಗಳು ಕೂಡ ಬರೀ ಓದಿನ ಮಾತಾಗಿ, ವೇದಿಕೆಗಳ ಮೇಲಿನ ಭಾಷಣಗಳ ಸರಕಾಗಿಯಷ್ಟೇ ಉಳಿದಿವೆ.  ನಿತ್ಯ ಬದುಕಿನ ವಾಸ್ತವ ವರ್ತನೆಯಾಗಿಲ್ಲ.  ಈ ವಚನಗಳನ್ನು ಉದಾಹರಿಸುವ ಜನರಾದರೂ “ಇವ ನಮ್ಮವ ಇವ ನಮ್ಮವ ಎಂದೆನಿಸಿದೆಯಯ್ಯಾ, ಅದಕ್ಕಾಗಿ ಬಸವಣ್ಣಾ ನಾವು ನಿನಗೆ ಕೃತಜ್ಞ” ಎಂದು ಹೇಳುವ ಸ್ಥಿತಿಯನ್ನು ಇವತ್ತಿಗೂ ತಂದುಕೊಂಡಿಲ್ಲ.

ಇದು ಕೇವಲ ಸಾಮಾನ್ಯ ಭಾಷಣಕಾರರ ಮನಃಸ್ಥಿತಿಯಷ್ಟೇ ಅಲ್ಲ, ಬಸವಣ್ಣ ಮತ್ತು ಶರಣ ಸಂಸ್ಕೃತಿಗಳ ವಾರಸುದಾರರೆನ್ನುವ ಬಹುತೇಕ ಜನರ ಮತ್ತು ಸಂಘ-ಸಂಸ್ಥೆಗಳ ಕತೆಯೂ ಆಗಿದೆ.  ಸಮಾಜ ಒಂದು ಕೂಡು ಕುಟುಂಬ, ಇಲ್ಲಿ ಅದೆಷ್ಟು ವೈವಿದ್ಯತೆಗಳಿದ್ದರೂ ಸದಸ್ಯರುಗಳ ಸ್ಥಾನಮಾಗಳು ಒಂದೇ ಎಂದು ಹೇಳುವ ಸ್ಥಿತಿ ನಿರ್ಮಾಣವಾಗುವ ನಂಬಿಕೆ ಕೂಡ ಹೊರಟು ಹೋಗುತ್ತಿದೆ.  “ಎನಿಸು ಕಾಲ ಕಲ್ಲು ನೀರೊಳಗಿದ್ದರೇನು, ನೆನೆದು ಮೃದುವಾಗಬಲ್ಲದೆ?” ಎನ್ನುವಂತೆ, ಹೇಳುವ ಕೇಳುವ ಮತ್ತು ಬರೆಯುವ ಬಹುತೇಕ ಜನರ ಮನಸ್ಸುಗಳೂ ಸಹ ನೀರೊಳಗಿನ ಕಲ್ಲಾಗಿವೆಯೇ ಹೊರತು, ಎಲ್ಲರೂ ನಮ್ಮವರೆನ್ನುವ ಭಾವನೆ ಸಾಕಾರಗೊಳ್ಳುತ್ತಿಲ್ಲ.

ಅವರು ಅವರೇ, ಇವರು ಇವರೇ, ನಮ್ಮವರು ನಮ್ಮವರೇ ಎನ್ನುವುದು ಅದೆಷ್ಟು ಗಟ್ಟಿಯಾಗುತ್ತಿದೆ ಎನ್ನುವುದಕ್ಕೆ ಇವತ್ತಿನ ಜಾತಿ ಮತ್ತು ಧರ್ಮಗಳ ದ್ರುವೀಕರಣ ಸಾಕ್ಷಿಯಾಗುತ್ತಿದೆ.  ಶ್ರೇಷ್ಠತೆ, ಅಸ್ಮಿತೆ ಮತ್ತು ಹಿಂದುಳಿಯುವಿಕೆಯ ಕಾರಣಗಳನ್ನು ಮುಂದಿಟ್ಟುಕೊಂಡು ಜಾತಿ-ಧರ್ಮಗಳನ್ನು ಸಂಘಟಿಸುವ, ವಿಘಟಿಸುವ ಮತ್ತು ಅದನ್ನೇ ಮತಬ್ಯಾಕುಗಳನ್ನಗಿಸಿಕೊಂಡು ಅಧಿಕಾರ ರಾಜಕಾರಣ ಮಾಡುವ ಕೆಲಸ ಎಡಬಿಡದೆ ನಡೆಯುತ್ತಿದೆ.
“ಕಾಗೆಯೊಂದಗುಳ ಕಂಡರೆ ಕರೆಯದೇ ತನ್ನ ಬಳಗವನ್ನು?  ಕೋಳಿಯೊಂದು ಕುಟುಕ ಕಂಡರೆ ಕೂಗಿ ಕರೆಯದೆ ತನ್ನ ಕುಲವೆಲ್ಲವನ್ನು” ಎನ್ನುವ ನಿಸರ್ಗ ಪ್ರಮಾಣಿತ ಸತ್ಯದ ನೆಲೆಯಿಂದ ನಿಸರ್ಗದ ಭಾಗವಾದ ಮನುಷ್ಯನೇ ಏಕೆ ಮೈ ಮನಸ್ಸುಗಳಲ್ಲಿ ದೂರವಾಗತೊಡಗಿದ?  ಕುಟುಂಬ, ಸಂಸ್ಥೆ, ಸಮುದಾಯಗಳಲ್ಲಿ ಆಸ್ತಿ, ಅಧಿಕಾರ, ಅಂತಸ್ತುಗಳನ್ನು ಹಂಚಿ ಅನುಭೋಗಿಸುವ ಬದಲು, ಕಲವೇ ಕೆಲವು ಜನರು ಮಾತ್ರ ಅದಕ್ಕೆ ಭಾಗಿದಾರರಾಗಿ ಇನ್ನುಳಿದವರಿಗೆ ನಿರಾಕರಣೆಯೇ ಅವಕಾಶವಾಗುವ ಸ್ಥಿತಿ ಸಂದರ್ಭಗಳೇಕೆ ನಿರ್ಮಾಣವಾದವು?  ಗೌತಮ ಬುದ್ಧ, ಬಸವಾದಿ ಶರಣರು ತೋರಿದ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಬಂಧುತ್ವಗಳೇ ಪ್ರಜಾಪ್ರಭತ್ವ ವ್ಯವಸ್ಥೆಯ ಸಂವಿಧಾನ ಮೌಲ್ಯಗಳಾಗಿದ್ದರೂ, ಮತ್ತು ಅದಕ್ಕೆ ತಕ್ಕ ಹಾಗೆ ಕಾನೂನುಗಳು ರಚನೆಯಾಗಿ ಜಾರಿಯಾಗುತ್ತಿದ್ದರೂ ಸಹ ವರ್ತಮಾನದ ಬದುಕೇಕೆ ಈ ಆಶಯಗಳ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದೆ?  ಬಹುಸಂಖ್ಯಾತರಿಗೆ ಹಂಚಿಕೆಯಾಗದ ಸಂಪತ್ತು ಸಂಪನ್ನೂಲಗಳು ಕೆಲವೇ ಕೆಲವರಲ್ಲಿ ಕ್ರೋಢೀಕೃತವಾಗುವುದನ್ನೇ ಇಡೀ ದೇಶದ ಅಭಿವೃದ್ಧಿ ಶ್ರೇಷ್ಠತೆ ಎಂದೇಕೆ ಬಿಂಬಿಸಲಾಗುತ್ತಿದೆ?  ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದ ಬಸವಣ್ನನನ್ನೇ ಸ್ಥಾವರ ಶ್ರೇಷ್ಠನನ್ನಾಗಿಸುವಲ್ಲಿ ಪೈಪೋಟಿಯೇಕೆ ಅವನ ಸಾಂಸ್ಕೃತಿಕ ವಾರಸುದಾರರೆನ್ನುವವರಲ್ಲೇ ಹೆಚ್ಚುತ್ತಿದೆ?  “ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ, ನಿಮ್ಮಾಣೆ! ನಿಮ್ಮ ಪುರಾತನರಾಣೆ! ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವಾ” ಎಂದು ಬಸವಣ್ಣನವರ ವಚನವನ್ನು ಲಯಬದ್ದವಾಗಿ ಹೇಳುವ ಜನರೇ ಹೊನ್ನು, ಮಣ್ಣು, ಹೆಣ್ಣು ಎಲ್ಲೆಲ್ಲಿ ಹೇಗೇಗೆ ಸಿಗುತ್ತದೆಯೋ ಹಾಗಾಗೇ ಇರಿಯುವ ಎಳೆಯುವ ಕೆಲಸಗಳಲ್ಲಿ, ಅವರವರದೇ ಆದ ಸಾಮರ್ಥ್ಯದಲ್ಲಿ ನಿರತರಾಗಿದ್ದಾರೆ?  ಈ ಇರಿಯುವ, ಎಳೆಯುವ, ಕೀಳುವ, ಕೆಡಹುವ ಕೆಲಸಗಳ ಪೈಪೋಟಿಯಲ್ಲಿ ಕೆಲವರು ಯಶಸ್ವಿಯಾಗುತ್ತಿದ್ದರೆ, ಮತ್ತೆ ಕೆಲವರು ಸಿಗಬಹುದಾದ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ.  ಇರುವುದರಲ್ಲಿಯೇ ಆದಷ್ಟು ಸುಖಪಟ್ಟುಕೊಂಡು ಇನ್ನೊಬ್ಬರ ತಟ್ಟೆಗೆ ಬಟ್ಟೆಗೆ ಕೈಹಾಬಾರದೆನ್ನುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.  ಜೀವನ ನಶ್ವರ, ಸಾವು ಯಾರಿಗಾದರೂ ಯಾವಾಗಬೇಕಾದರೂ ಬರಬಹುದೆನ್ನುವುದು ಎಲ್ಲರಿಗೂ ತಿಳಿದಿದ್ದರೂ, ತಾನು ಅಮರ ಎನ್ನುವ ರೀತಿಯಲ್ಲಿ ಆಸ್ತಿ ಅಧಿಕಾರಗಳನ್ನು ಕೇಂದ್ರೀಕರಿಸಿಕೊಳ್ಳಲು ಮಾಡುವ ಪ್ರಯತ್ನಗಳು ನಿಲ್ಲುತ್ತಿಲ್ಲ.  ಯಾವ ಅಗ್ರಹಾರ ಸಂಸ್ಕೃತಿಯ ವಿರುದ್ಧ ಬಸವಾದಿ ಶರಣರು ಶರಣ ಸಂಸ್ಕೃತಿ ಎನ್ನುವ ಪರ್ಯಾಯ ಸಂಸ್ಕೃತಿಯನ್ನು ಅನ್ವೇಷಿಸಿ ಅನುಷ್ಠಾನಗೊಳಸಿ ಮಾದರಿಯಾದರೋ, ಆ ಪರಂಪರೆಯ ಆರಾಧಕರುಗಳೇ ಇವತ್ತು ಪುರೋಹಿತ್ಯ, ಜಾತಿಭೇದ, ಲಿಂಗಭೇದ ಮತ್ತು ಸರ್ವತಮ ಅಸಮಾನತೆಗಳಿಗೆ ಬಾಗಿಲು ತೆರೆದಿದ್ದಾರೆ.

ಕಾಯಕವೇ ಕೈಲಾಸ ಎನ್ನುವ ಶರಣರ ಮಾತನ್ನು ನಿರಂತರ ಪಠಿಸುತ್ತಲೇ ಸಲ್ಲದ ಕೆಲಸಗಳನ್ನು ಮಾಡುತ್ತಾ ಅದನ್ನೇ ಕೈಲಾಸವೆಂದು ನಂಬಿದ್ದಾರೆ.  “ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲದಯ್ಯಾ” ಎನ್ನುವ ವಚನವನ್ನು ಹೇಳುವವರೇ, ಎಂಥ ಪಾಪಕರ್ಮದಿಂದ ಬಂದ ಹಣವಾದರೂ ಸರಿ, ಮೊದಲು ಕೊಡು ಎಂದು ಪಡೆದು ಸನ್ಮಾನಿಸಿ ಕಳುಹಿಸುವುದೇ ಹೆಚ್ಚಾಗಿದೆ.  ಹಿಂದೊಮ್ಮೆ ಭ್ರಷ್ಟಾಚಾರದ ಕಳಂಕ ಹೊತ್ತ ಭಕ್ತರ ಮನೆಗಳ ಕಾರ್ಯಕ್ರಮಗಳಿಗೆ ಹೋಗುವುದಿಲ್ಲವೆಂದು ಸಾರ್ವಜನಿಕವಾಗಿ ಹೇಳಿದ ಸ್ವಾಮಿಗಳೊಬ್ಬರು ಅದೇ ಭಕ್ತರಿಂದಷ್ಟೇ ಅಲ್ಲ, ಅವರ ಪರಂಪರೆಯ ಹಿರಿಯರಿಂದಲೂ ವಿರೋಧಕ್ಕೆ ಒಳಗಾಗಬೇಕಾಯಿತು.  ಬಂಡವಾಳಶಾಹಿಗಳು ಮತ್ತು ಅಧಿಕಾರಸ್ಥ ರಾಜಕಾರಿಣಿಗಳು ಕೊಡುವ ಹಣ ಆಸ್ತಿಗಳಿಗೆ ಜೋಲುವ ಜನ, ಓಲೈಸುವ ಜನ ಆ ಹಣದ ಮೂಲಗಳನ್ನು ಪ್ರಜ್ಞಾಪೂರಕವಾಗಿ ನಿರ್ಲಕ್ಷಿಸುತ್ತಾರೆ.  ಹಣ, ಸಂಪತ್ತು ಮತ್ತು ಅಧಿಕಾರಗಳ ಅನೈತಿಕ ಮೂಲವನ್ನು ಪ್ರಶ್ನಿಸುವುದೆಂದರೆ ನದಿ ಮೂಲ, ಋಷಿಮೂಲಗಳನ್ನು ಹುಡುಕಿದಂತೆ ಎಂದು ಯಾರೋ ಯಾವಾಗಲೋ ಯಾಕೋ ಹೇಳಿದ ಮಾತಿನ ನೆರಳಿನಲ್ಲಿ ಆಶ್ರಯ ಹುಡುಕುತ್ತಾರೆ.  ರಾಜಕಾರಣವೇ ಆಗಲೀ ಸಾಂಸ್ಥಿಕ ವ್ಯವಸ್ಥೆಯೇ ಆಗಲಿ, ಅಧಿಕಾರವನ್ನು ಹಿಡಿಯುವ ಮೂಲಗಳು, ಮಾರ್ಗಗಳು ಭ್ರಷ್ಟವಾದಂತೆಲ್ಲಾ ಅಲ್ಲಿನ ಆಡಳಿತ ಕ್ರಮ ಮತ್ತು ನ್ಯಾಯ ನೀಡಿಕೆ ವಿಧಾನ ಕೂಡ ಭ್ರಷ್ಟವಾಗುತ್ತದೆ ಎನ್ನುವ ಸತ್ಯ ಗೊತ್ತಿದ್ದರೂ, ಅದನ್ನೇ ರಾಜಮಾರ್ಗವಾಗಿ ಅನುಸರಿಸಲಾಗುತ್ತಿದೆ.  ಜೊತೆಗೆ, ಅದೇ ಜನ ಸಾರ್ವಜನಿಕ ವೇದಿಕೆಗಳಲ್ಲಿ ದಾರ್ಶನಿಕರ, ಶರಣರ, ದಾಸರ ಮಾತುಗಳನ್ನು ಉದಾಹರಿಸುವುದನ್ನು ಬಿಟ್ಟಿಲ್ಲ.  ಅಂತರಂಗ ಬಹಿರಂಗ ಶುದ್ಧಿಗಳಲ್ಲಿ ಸಾಮ್ಯವಿರಬೇಕೆಂದು ಹೇಳಿ, ಹಾಗೆಯೇ ನಡೆದುಕೊಂಡ ಬಸವಣ್ಣ ಮತ್ತು ಆತನ ಜೊತೆಗಿದ್ದ ಶರಣರ ಆರಾಧಕರು, ಅನುಯಾಯಿಗಳೆನ್ನವವರೂ ಸಹ ಅವರ ಅಂತರಂಗ ಮತ್ತು ಬಹಿರಂಗ ವರ್ತನೆಗಳ ನಡುವೆ ದೊಡ್ಡ ಕಂದಕಗಳನ್ನ ನಿರ್ಮಿಸಿಕೊಳ್ಳುತ್ತಿದ್ದಾರೆ.

ಇಂತಹ ವಿಪರ್ಯಾಸಗಳಿಗೆ, ಎಡಬಿಡಂಗಿತನಗಳಿಗೆ, ಆಷಾಢಭೂತಿ ವರ್ತನೆಗೆ ಕಾರಣ ಹುಡುಕಲು ಯಾವ ಸಂಶೋಧನೆಯನ್ನು ಕೈಗೊಳ್ಳುವ ಅಗತ್ಯವಿಲ್ಲ.  ಎಲ್ಲರಿಗೂ ತಿಳಿದ ಮತ್ತು ಎಲ್ಲರೂ ಒಪ್ಪುವ ವಿಷಯ ಮತ್ತು ಕಾರಣಗಳೇ ಇವಾಗಿವೆ.  ಇದಕ್ಕೆ ಪರಿಹಾರಗಳು ಗೊತ್ತಿದ್ದರೂ ಯಾಕೆ ಅವುಗಳನ್ನು ಅನುಸರಿಸಲು ಸಂಬಂಧಪಟ್ಟವರು ಮುಂದಾಗುತ್ತಿಲ್ಲ ಎನ್ನುವುದನ್ನ ಎಷ್ಟು ಬಾರಿ ಹೇಳಿದರೂ, ಅವು ಅದೇ ಮಾತುಗಳಾಗುತ್ತಿವೆಯೇ ಹೊರತು ಸತ್ಯ ಆಚರಣೆಯಾಗುತ್ತಿಲ್ಲ.  ಪರಿಹಾರದ ಮಾತುಗಳನ್ನು ನಿಜಾಚರಣೆಗೊಳ್ಳುವಂತೆ ಮಾಡಬೇಕಾದ ಹೊಣೆಗಾರಿಕೆ ಹೊತ್ತವರ ನಡೆ ನುಡಿ ವೈರುಧ್ಯಗಳೇ ಇದಕ್ಕೆ ಕಾರಣವಾಗಿರುವುದರಿಂದ, ಬದಲಾವಣೆಗಳನ್ನು ಕೂಡ ಅದೇ ನೆಲೆ ಮೂಲಗಳಿಂದ ನಿರೀಕ್ಷಿಸಬೇಕಿದೆ ಮತ್ತು ಆಗುಮಾಡಬೇಕಿದೆ.  ಹೇಳಬೇಕೆಂದರೆ, ಶರಣರ ಮತ್ತು ಯಾವುದೇ ದಾರ್ಶನಿಕರನ್ನು ಸ್ಮರಿಸದಿದ್ದರೂ ಸರಿ ಅವರ ಹೆಸರಿಗೆ ಕೆಸರೆರಚುವ ವರ್ತನೆಗಳನ್ನು ವಿರೋಧಿಸದೆ ಸಹಿಸುವ ಮನಃಸ್ಥಿತಿ ಬೇಡವಾಗಿದೆ.  ದೊಡ್ಡವರ ಎಂತಹ ಸಣ್ಣತನಗಳನ್ನಾಗಲೀ, ಕರಾಳ ಕೃತ್ಯಗಳನ್ನಾಗಲೀ ಜನ ಸಹಿಸುತ್ತಾರೆನ್ನುವ ಅಥವಾ ಸಹಿಸುವ ದುಃಸ್ಥಿತಿಯಲ್ಲಿದ್ದಾರೆನ್ನುವ ಸತ್ಯವನ್ನರಿತವರು ಮಾತ್ರ ಅವರ ನಡೆ ನುಡಿಗಳ ವೈರುಧ್ಯದ ಬಗ್ಗೆ ಜಾಣ ಕುರುಡರಾಗಿರುತ್ತಾರೆ.  ಸಹಿಸುವವರ ಅಸಹಾಯಕತೆ ಮತ್ತು ಅನೈಕ್ಯತೆಗಳೇ ದೊಡ್ಡವರ ದುಂಡಾವರ್ತನೆಗೆ ಮತ್ತು ವಿರೋಧಾಭಾಸಗಳಿಗೆ ಕಾರಣವಾಗಿರುವುದರಿಂದ ಕೆಡುಕುತನಗಳ ವಿರುದ್ಧದ ಅಸಹನೆಯನ್ನು ವ್ಯಕ್ತಿ ಅಥವಾ ಸಮೂಹದ ಯಾವ ನೆಲೆಯಿಂದಲಾದರೂ ಸರಿ, ಚುರುಕುಗೊಳಿಸಬೇಕಿದೆ.

ಅಸಹಾಯಕತೆ ಎನ್ನುವ ರೋಗದಿಂದ ಎದ್ದುಬರಬೇಕಲ್ಲದೆ ಅದನ್ನೇ ದೂರುತ್ತಾ ಕುಳಿತುಕೊಳ್ಳಬಾರದು.  ಈ ನಿಟ್ಟಿನಲ್ಲಿ ಸ್ವಪ್ರೇರಣೆಯಿಂದ ಜನ ಎಚ್ಚೆತ್ತು ಮುಂದಾಗಬೇಕೆಂದು ಬಯಸುವುದು ಎಷ್ಟು ಸರಿಯೋ, ಹಾಗೆಯೇ ಪ್ರಭುತ್ವಗಳೂ ಕೂಡ ತಮ್ಮ ನೆಲೆಯಲ್ಲಿ ಸಾಮುದಾಯಿಕ ಹೊಣೇಗಾರಿಕೆಯನ್ನು ನೀಭಾಯಿಸಬೇಕಿದೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವಗಳು ಮೈಮರೆತಾಗ ಅವುಗಳನ್ನು ಸರಿದಾರಿಗೆ ತರುವ ಅಧಿಕಾರ ಜನಸಾಮಾನ್ಯರಿಗಿರುವುದರಿಂದ ಉತ್ತಮ ಆಡಳಿತವನ್ನು ಪ್ರೋತ್ಸಾಹಿಸುವ ಮತ್ತು ಕೆಟ್ಟ ಆಡಳಿತದ ವಿರುದ್ಧ ತಿರುಗಿ ಬೀಳುವ ಕೆಲಸವನ್ನು ಮತದಾರರು ವ್ಯಕ್ತಿಗತವಾಗಿಯೇ ಮಾಡಬೇಕಿದೆ.  ಸಾಮೂಹಿಕ ಭ್ರಷ್ಟಾಚಾರದ ವಿರುದ್ಧದ ಕ್ರಮಗಳು ಮತದಾರರ ವೈಯುಕ್ತಿಕ ನೆಲೆಯಿಂದ ಸಾಧ್ಯವಾಗಿಸುವ ಸುಂದರ ಅವಕಾಶವನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ.

ಇವತ್ತಿನ ಸ್ಥಿತಿ ಏನಾಗಿದೆ ಎಂದರೆ, ಬಸವಣ್ಣನವರ ಮಾತಿನಲ್ಲೇ ಹೇಳುವುದಾದರೆ “ಊಡದ ಆವಿಂಗೆ ಉಣ್ಣದಾ ಕರುವ ಬಿಟ್ಟಂತೆ”.  ಹಾಲನ್ನು ಕುಡಿಯುವ ಹಸಿವು ಕರುವಿಗಿಲ್ಲವಾದರೆ; ಹಾಲನ್ನು ಕುಡಿಸುವ ಒಲವು ಅಥವಾ ಕೆಚ್ಚಲು ಬಿಗಿಯುವ ತುರ್ತು ಆಕಳಿಗಿಲ್ಲವಾದರೆ ವ್ಯಕ್ತಿ ಮತ್ತು ಸಮುದಾಯಗಳ ನಡುವೆ ಕರು ಆಕಳು ನಡುವಿನ ಸಂಬಂಧವೇ ಕಾಣೆಯಾಗುವುದು ನಿಜ.  ಆಗ ಹಾಲಿಲ್ಲದೆ ಮೊದಲು ಬಳಲುವುದು ಕರುವೇ ಆಗಿರುವುದರಿಂದ ದುರ್ಜನರ ವಿರುದ್ಧದ ಧ್ವನಿ ವ್ಯಕ್ತಿಯ ಎದೆಯಿಂದಲೇ ಮೂಡಿ ಸಾಮೂಹಿಕ ಸ್ವರೂಪಪಡೆದುಕೊಳ್ಳಬೇಕಾಗಿದೆ.  ವ್ಯಕ್ತಿಯ ಒಳಗಡೆ ಆಗುವ ಸಂಚಲನಗಳು ಹೊರಗಿನ ಚಳವಳಿಯಾಗಿ ರೂಪುಗೊಳ್ಳಲು ಬಹುಕಾಲ ಬೇಕಿಲ್ಲ.  ಇದನ್ನು ಅರಿತೇ ಶರಣರು ಅವರವರ ನೆಲೆಯಲ್ಲಿ ಬದಲಾಗುತ್ತಲೇ ಒಬ್ಬರಿಗೊಬ್ಬರು ಆದರ್ಶವಾದರು, ಸಾಮೂಹಿಕ ಗೌರವಕ್ಕೆ ಪಾತ್ರರಾದರು.  ಹೊರಗಿನ ಹಳವಂಡಗಳ ಬಗ್ಗೆ ಒಳಗೆ ಅಸಹನೆಯ ಕಿಡಿ ಹೊತ್ತಿದರೆ ಹೊರಗೆ ಧಗ್ಗೆಂದು ಉರಿಯಲು ಸಣ್ಣದೊಂದು ಕ್ರಿಯಾಶೀಲತೆ ಬಿಟ್ಟು ಬೇರೇನೂ ಬೇಕಿಲ್ಲ.  ಕಿಡಿಗೇಡಿಗಳ ಕೆಡುಕುತನಕ್ಕೆ ಕಿಚ್ಚು ಇಡುವುದು ಭಾರೀ ಕಷ್ಟದ ಸಂಗತಿಯಲ್ಲ ಎನ್ನುವುದನ್ನು ಇತಿಹಾಸ ತೋರಿಸಿಕೊಟ್ಟಿದೆ.  ಇದನ್ನು ಅರಿತು ಅನುಭಾವಿಸಿಯೇ ಬಸವಣ್ಣ “ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ” ಎಂದದ್ದು.

ನಮ್ಮಂತರಂಗವೇ ಕಿಚ್ಚೆದ್ದು ಸುಡುವಾಗ ನೆರಮನೆಯ ಬೆಂಕಿಗೆ ನೀರು ಹೊಯ್ದು ನಂದಿಸುವುದು ಸಾಧ್ಯವಿಲ್ಲ.  ದಾರ್ಶನಿಕರ ಜನ್ಮ ದಿನಾಚರಣೆಯ ನೆಪದಲ್ಲಾದರೂ ನಮ್ಮ ನಮ್ಮ ನೆಲೆಯಲ್ಲಿ ಅಂತರಾವಲೋಕನ ಮಾಡಿಕೊಳ್ಳುತ್ತಲೇ, ಅವರ ತಾತ್ವಿಕ ನೆಲೆಗಟ್ಟಿನ ಬೆಳಕಿನಲ್ಲಿ ಬದಲಾಗುವ ಸಂಕಲ್ಪದ ಮೂಲಕ ಸಾಮೂಹಿಕ ಬದಲಾವಣೆಗೆ ಕಾರಣವಾಗುವ ಸುಕ್ಷಣ ಇದಾಗಿದೆ.  ಇಲ್ಲವಾದಲ್ಲಿ ಇನ್ನೆಷ್ಟು ಶತಮಾನಗಳು ಕಳೆದರೂ ಕೂಡ “ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ” ಎನ್ನುವ ತೋರಿಕೆಯ ಕೋರಿಕೆ ವೇದಿಕೆ ಬಿಟ್ಟು ಇಳಿಯುವುದಿಲ್ಲ.
ಲೇಖಕರು :
ಡಾ. ಜಿ. ಎನ್‌. ಮಲ್ಲಿಕಾರ್ಜುನಪ್ಪ, ವಿಶ್ರಾಂತ ಪ್ರಾಂಶುಪಾಲರು ಮತ್ತು ಆರ್ಥಿಕ-ಸಾಮಾಜಿಕ ಚಿಂತಕರು,  ಸ್ನೇಹ, 2ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ವಿದ್ಯಾನಗರ, ಚಹಿತ್ರದುರ್ಗ – 577502,
ಮೊ. 94490 77003

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!