ದೆಹಲಿ.ಸೆಪ್ಟೆಂಬರ್. 12 : ಇಂದಿನ ದಿನಗಳಲ್ಲಿ ಬಹುತೇಕ ಪ್ರತಿಯೊಬ್ಬರೂ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದುವುದು ಸಾಮಾನ್ಯವಾಗಿದೆ.
ನೌಕರಿಯಲ್ಲಿರುವವರಿಗೆ ವೇತನ ಪಡೆಯಲು ಸ್ಯಾಲರಿ ಖಾತೆಯ ಜೊತೆಗೆ ಉಳಿತಾಯ ಖಾತೆ ಇರುತ್ತದೆ. ಇನ್ನು ವ್ಯಾಪಾರಸ್ಥರು ತಮ್ಮ ವ್ಯವಹಾರಕ್ಕಾಗಿ ಕರೆಂಟ್ ಖಾತೆಯೊಂದಿಗೆ ಪ್ರತ್ಯೇಕ ಉಳಿತಾಯ ಖಾತೆಗಳನ್ನು ನಿರ್ವಹಿಸುತ್ತಾರೆ. ಉಳಿದವರು ಹಣವನ್ನು ಉಳಿತಾಯ ಮಾಡಲು ಒಂದು ಖಾತೆ, ದಿನನಿತ್ಯದ ವೆಚ್ಚಗಳಿಗಾಗಿ ಮತ್ತೊಂದು ಖಾತೆ ಹಾಗೂ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್ಗಳ ಹೂಡಿಕೆಗಾಗಿ ಪ್ರತ್ಯೇಕ ಖಾತೆಯನ್ನು ಬಳಸುತ್ತಾರೆ. ಹೀಗೆ ಹಣಕಾಸಿನ ಯೋಜನೆಗೆ ಪ್ರತ್ಯೇಕ ಖಾತೆ ಇರುವುದು ಒಳ್ಳೆಯದೇ ಆದರೂ, ಒಬ್ಬ ವ್ಯಕ್ತಿಗೆ ವಾಸ್ತವವಾಗಿ ಎಷ್ಟು ಬ್ಯಾಂಕ್ ಖಾತೆಗಳಿರಬೇಕು ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ.
ಹಣಕಾಸು ತಜ್ಞರ ಪ್ರಕಾರ, ಸಾಮಾನ್ಯ ಆದಾಯ ಮತ್ತು ಮಿತವಾದ ಖರ್ಚುಗಳನ್ನು ಹೊಂದಿರುವ ವ್ಯಕ್ತಿಗೆ ಎರಡು ಬ್ಯಾಂಕ್ ಖಾತೆಗಳು ಸಾಕಾಗುತ್ತವೆ. ಮೊದಲ ಖಾತೆಯನ್ನು ಮಾಸಿಕ ವೇತನ ಪಡೆಯಲು, ದಿನನಿತ್ಯದ ಖರ್ಚುಗಳು ಮತ್ತು ಬಿಲ್ ಪಾವತಿಗಳಿಗೆ ಬಳಸಬಹುದು. ಎರಡನೇ ಉಳಿತಾಯ ಖಾತೆಯನ್ನು ಕೇವಲ ಹಣ ಉಳಿತಾಯ ಮಾಡಲು ಅಥವಾ ತುರ್ತು ನಿಧಿಗಾಗಿ ಮೀಸಲಿಡಬಹುದು. ಈ ಮಾದರಿಯನ್ನು ಅನುಸರಿಸುವುದರಿಂದ ಅನಗತ್ಯ ಖರ್ಚುಗಳನ್ನು ಸುಲಭವಾಗಿ ನಿಯಂತ್ರಿಸಬಹುದು ಮತ್ತು ಪ್ರತಿ ತಿಂಗಳು ಎಷ್ಟು ಹಣ ಖರ್ಚಾಗುತ್ತಿದೆ, ಎಷ್ಟು ಮೊತ್ತ ಉಳಿತಾಯವಾಗುತ್ತಿದೆ ಎಂಬ ಸ್ಪಷ್ಟ ಲೆಕ್ಕಾಚಾರ ಸಿಗುತ್ತದೆ.
ಒಬ್ಬ ವ್ಯಕ್ತಿಗೆ ಹಲವು ಆದಾಯದ ಮೂಲಗಳಿದ್ದರೆ ಅಥವಾ ಉದ್ಯೋಗದ ನಿಮಿತ್ತ ಬೇರೆ ಊರುಗಳಿಗೆ ಸ್ಥಳಾಂತರಗೊಂಡಾಗ ನಿರ್ದಿಷ್ಟ ಬ್ಯಾಂಕಿಂಗ್ ಸೇವೆಗಳಿಗಾಗಿ ಮೂರನೇ ಖಾತೆಯನ್ನು ತೆರೆಯುವುದು ಸೂಕ್ತವಾಗಿರುತ್ತದೆ. ಆದರೆ ಮೂರಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವುದು ಆರ್ಥಿಕವಾಗಿ ನಷ್ಟವನ್ನುಂಟುಮಾಡಬಹುದು. ಏಕೆಂದರೆ ಪ್ರತಿ ಖಾತೆಯ ಎಟಿಎಂ ಶುಲ್ಕ, ಎಸ್ಎಂಎಸ್ ಶುಲ್ಕ ಹಾಗೂ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ಬೀಳುವ ದಂಡಗಳಿಂದಾಗಿ ಬ್ಯಾಂಕ್ ಖಾತೆಗಳ ನಿರ್ವಹಣೆ ಹೊರೆಯಾಗುತ್ತದೆ. ಇದಲ್ಲದೆ, ನಿಷ್ಕ್ರಿಯ ಖಾತೆಗಳನ್ನು ಗಮನಿಸದೆ ಬಿಟ್ಟರೆ ಮೋಸ ಹೋಗುವ ಸಾಧ್ಯತೆಗಳೂ ಹೆಚ್ಚಿರುತ್ತವೆ.
ಹಣದ ಸುರಕ್ಷತೆಯ ದೃಷ್ಟಿಯಿಂದ ಒಂದೇ ಬ್ಯಾಂಕಿನಲ್ಲಿ ದೊಡ್ಡ ಮೊತ್ತವನ್ನು ಇಡುವ ಬದಲು, ವಿಭಿನ್ನ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿರುವುದು ಹೆಚ್ಚು ಪ್ರಯೋಜನಕಾರಿ. ಭಾರತ ಸರ್ಕಾರದ ಡಿಐಸಿಜಿಸಿ (DICGC) ನಿಯಮಗಳ ಪ್ರಕಾರ, ಪ್ರತಿ ಬ್ಯಾಂಕಿನಲ್ಲಿ ಠೇವಣಿ ಮತ್ತು ಬಡ್ಡಿಗೆ ಸೇರಿ ಗರಿಷ್ಠ ಐದು ಲಕ್ಷ ರೂಪಾಯಿಗಳವರೆಗೆ ವಿಮಾ ರಕ್ಷಣೆ ದೊರೆಯುತ್ತದೆ. ಹೀಗಾಗಿ ಪ್ರತ್ಯೇಕ ಬ್ಯಾಂಕುಗಳಲ್ಲಿ ಹಣ ಹೂಡಿಕೆ ಮಾಡುವುದರಿಂದ ಆಕಸ್ಮಿಕ ಸಂದರ್ಭಗಳಲ್ಲಿ ನಿಮ್ಮ ಕಷ್ಟಪಟ್ಟು ದುಡಿದ ಹಣಕ್ಕೆ ಸಂಪೂರ್ಣ ಭದ್ರತೆ ಸಿಗುತ್ತದೆ.











