in ,

ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಕುರಿತು ಜಿಲ್ಲೆಯಾದ್ಯಂತ ಫೆಬ್ರವರಿ 06 ರಿಂದ ಮತದಾರರಲ್ಲಿ ಜಾಗೃತಿ :  ದಿವ್ಯಪ್ರಭು ಜಿ.ಆರ್.ಜೆ.

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ (ಫೆ.04): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಹಾಗೂ ವಿ.ವಿ. ಪ್ಯಾಟ್ ಕಾರ್ಯವೈಖರಿ ಕುರಿತಂತೆ ಅಣಕು ಪ್ರದರ್ಶನ ನಡೆಸುವ ಮೂಲಕ ಫೆ. 06 ರಿಂದ ಜಿಲ್ಲೆಯಾದ್ಯಂತ ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಹಾಗೂ ಮತದಾನ ಖಾತ್ರಿ ಕುರಿತಂತೆ ವಿವಿ ಪ್ಯಾಟ್ ಬಳಕೆ ಬಗ್ಗೆ ಮತದಾರರಲ್ಲಿ ಚುನಾವಣಾ ಪ್ರಕ್ರಿಯೆ ವಿಷಯದಲ್ಲಿ ವಿಶ್ವಾಸ ಮೂಡಿಸುವುದು ಹಾಗೂ ಜಾಗೃತಿ ಮೂಡಿಸುವುದಕ್ಕಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಫೆ. 06 ರಿಂದ ಮಾರ್ಚ್ 06 ರವರೆಗೆ ಒಂದು ತಿಂಗಳುಗಳ ಕಾಲ ಜಿಲ್ಲೆಯಾದ್ಯಂತ 1206 ಸ್ಥಳಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಗಳಲ್ಲಿ ಮತ ಚಲಾಯಿಸುವ ಬಗೆ ಹಾಗೂ ಮತದಾರರು ತಾವು ಹಾಕಿದ ಮತವನ್ನು ಖಾತ್ರಿ ಪಡಿಸಿಕೊಳ್ಳಲು ವೀಕ್ಷಿಸುವ ವಿವಿ ಪ್ಯಾಟ್ ಯಂತ್ರದ ಕಾರ್ಯ ವೈಖರಿ ಕುರಿತು ಅಣಕು ಪ್ರದರ್ಶನ ನಡೆಸಿ, ಮತದಾರರಲ್ಲಿ ಜಾಗೃತಿ ಮೂಡಿಸಲಾಗುವುದು.

ಇದೇ ರೀತಿ ಒಂದು ತಿಂಗಳ ಒಳಗಾಗಿ ಪ್ರತಿ ಸ್ಥಳದಲ್ಲಿಯೂ ಎರಡು ಬಾರಿ ಇಂತಹ ಪ್ರದರ್ಶನ ಏರ್ಪಡಿಸಲಾಗುವುದು.  ಇದರಲ್ಲಿ ಮತದಾರರು ಪಾಲ್ಗೊಂಡು, ಇವಿಎಂ ಯಂತ್ರದಲ್ಲಿ ಮತ ಚಲಾಯಿಸುವ ಹಾಗೂ ಮತದಾನ ಖಾತ್ರಿ ಮಾಡಿಕೊಳ್ಳುವ ಬಗ್ಗೆ ಅಣಕು ಮತದಾನ ಮಾಡಿ, ಖುದ್ದು ಮನವರಿಕೆ ಮಾಡಿಕೊಳ್ಳಬಹುದಾಗಿದ್ದು, ಪ್ರಮುಖವಾಗಿ ಯುವ ಮತದಾರರು, ಮೊದಲ ಬಾರಿಗೆ ಮತದಾನ ಮಾಡುವಂತಹವರಿಗೂ ಸಹಕಾರಿಯಾಗಲಿದೆ.

ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇಂತಹ ಜಾಗೃತಿ ಕಾರ್ಯಕ್ರಮ ಫೆ. 06 ರಿಂದ ಏಕಕಾಲಕ್ಕೆ ಪ್ರಾರಂಭವಾಗಲಿದೆ.  ಜಿಲ್ಲೆಯಲ್ಲಿ ಇದಕ್ಕಾಗಿ ಒಟ್ಟು 75 ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, 152 ಸೆಕ್ಟರ್ ಅಧಿಕಾರಿಗಳು ಹಾಗೂ 07 ಜನ ಹೆಚ್ಚುವರಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಜಿಲ್ಲೆಯಲ್ಲಿ ಎಮೊಳಕಾಲ್ಮೂರು ಕ್ಷೇತ್ರದಲ್ಲಿ 207 ಸ್ಥಳಗಳಲ್ಲಿ ಮತದಾನ ಯಂತ್ರದ ಅಣಕು ಪ್ರದರ್ಶನ ಏರ್ಪಡಿಸಲಾಗಿದ್ದು, ಇಲ್ಲಿ 14 ವಾಹನಗಳನ್ನು ನಿಯೋಜಿಸಲಾಗಿದೆ.

ಚಳ್ಳಕೆರೆ ಕ್ಷೇತ್ರದಲ್ಲಿ 180 ಸ್ಥಳಗಳಲ್ಲಿ ಪ್ರದರ್ಶನ ಏರ್ಪಡಿಸಿದ್ದು 12 ವಾಹನಗಳು.

ಚಿತ್ರದುರ್ಗ ಕ್ಷೇತ್ರದಲ್ಲಿ 175 ಸ್ಥಳಗಳಲ್ಲಿ ಏರ್ಪಡಿಸಿದ್ದು, 10 ವಾಹನಗಳು.

ಹಿರಿಯೂರು ಕ್ಷೇತ್ರದಲ್ಲಿ 203 ಸ್ಥಳಗಳಲ್ಲಿ ಪ್ರದರ್ಶನ ಏರ್ಪಡಿಸಲು 14 ವಾಹನಗಳು.

ಹೊಸದುರ್ಗ ಕ್ಷೇತ್ರದಲ್ಲಿ 195 ಕಡೆ ಪ್ರದರ್ಶನ ಏರ್ಪಡಿಸಲು 11 ವಾಹನಗಳು ಹಾಗೂ ಹೊಳಲ್ಕೆರೆ ಕ್ಷೇತ್ರದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು 246 ಸ್ಥಳಗಳಲ್ಲಿ ಪ್ರದರ್ಶನ ಕೈಗೊಳ್ಳಲು 14 ವಾಹನಗಳನ್ನು ನಿಯುಕ್ತಿಗೊಳಿಸಲಾಗಿದೆ.

ಇದರ ಜೊತೆಗೆ ಜಿಲ್ಲೆಯಲ್ಲಿ ಈ ಒಂದು ತಿಂಗಳಲ್ಲಿ ನಡೆಯುವ ಪ್ರಮುಖ ಜಾತ್ರೆ, ಸಂತೆಗಳಲ್ಲಿಯೂ ಕೂಡ ಇವಿಎಂ ಹಾಗೂ ವಿವಿ ಪ್ಯಾಟ್ ಯಂತ್ರಗಳ ಕುರಿತಂತೆ ಪ್ರದರ್ಶನ ಏರ್ಪಡಿಸಲಾಗುವುದು.

ಸಾರ್ವಜನಿಕರು, ಮತದಾರರು ಅದರಲ್ಲೂ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಯಾ ಕ್ಷೇತ್ರದಲ್ಲಿ ನಡೆಯುವ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಈ ವಿಶೇಷ ಅಭಿಯಾನದ ಸದುಪಯೋಗ ಪಡಿಸಿಕೊಳ್ಳಬೇಕು.  ಈ ಮೂಲಕ ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಸಲು ತಮ್ಮ ಸಹಭಾಗಿತ್ವ ದೊರಕಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಮನವಿ ಮಾಡಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ತಗಲಾಕಿಕೊಂಡ 14 ಸಾವಿರ ದಂಡ ಕಟ್ಟಿದ..!

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಅನುಕೂಲವಾಗುವಂತೆ ಶಾಶ್ವತ ಯೋಜನೆಗಳ ಅನುಷ್ಠಾನ ಸಂಕಲ್ಪ : ಸಚಿವ ಬಿ. ಶ್ರೀರಾಮುಲು