ಕ್ರಿಕೆಟ್ ದಿಗ್ಗಜ, ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ತೀವ್ರ ಹೃದಯಾಘಾತದಿಂದ ನಿಧನ

ಕ್ರಿಕೆಟ್ ದಿಗ್ಗಜ ಆಟಗಾರ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಥೈಲ್ಯಾಂಡ್‌ನ ಅವರ ವಿಲ್ಲಾದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು. ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಅವರ ಮನೆಯ ಸಿಬ್ಬಂದಿ  ಕಂಡು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ವಾರ್ನ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಸ್ಪಿನ್‌ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಶೇನ್ ವಾರ್ನ್ ಅವರು 1992ರಲ್ಲಿ ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.

ಅವರು 145 ಟೆಸ್ಟ್‌ಗಳಲ್ಲಿ 708 ವಿಕೆಟ್‌ಗಳನ್ನು ಮತ್ತು 194 ODIಗಳಲ್ಲಿ 293 ವಿಕೆಟ್‌ಗಳನ್ನು ಪಡೆದಿದ್ದಾರೆ. ಶೇನ್ ವಾರ್ನ್ ಸಮಕಾಲೀನ ಕ್ರಿಕೆಟ್‌ನಲ್ಲಿ ಸಾವಿರ ವಿಕೆಟ್ ಪಡೆದ ಎರಡನೇ ಆಟಗಾರ. ಮೊದಲ ಸ್ಥಾನದಲ್ಲಿ ಶ್ರಿಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಇದ್ದಾರೆ.

ಶೇನ್ ವಾರ್ನ್ ಕ್ರಿಕೆಟ್‌ನಲ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಹೊಂದಿದ್ದಾರೆ. ಟೆಸ್ಟ್ ನಲ್ಲಿ 37 ಬಾರಿ 5 ವಿಕೆಟ್ ಪಡೆದಿದ್ದಾರೆ. 2013 ರಲ್ಲಿ ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡರು.

ವಾರ್ನ್ 1999 ರ ODI ವಿಶ್ವಕಪ್ ಗೆದ್ದಾಗ  ಆಸ್ಟ್ರೇಲಿಯನ್ ತಂಡದ ಸದಸ್ಯರಾಗಿದ್ದರು.  ಶೇನ್ ವಾರ್ನ್ ಕೂಡ ಐಪಿಎಲ್ ನಲ್ಲಿ ಪಾಲ್ಗೊಂಡಿದ್ದರು. ವಾರ್ನ್ 2008 ರ ಆರಂಭದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು. ಆ ಆವೃತ್ತಿಯಲ್ಲಿ ನಾಯಕ ಮತ್ತು ಆಟಗಾರನಾಗಿ ರಾಜಸ್ಥಾನ ಪ್ರಶಸ್ತಿ ಗೆಲ್ಲುವಲ್ಲಿ ಶೇನ್ ವಾರ್ನ್ ಪ್ರಮುಖ ಪಾತ್ರ ವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *