in ,

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 : ಮೇ.13ರ ರಂದು ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಿದ್ಧತೆ ಹೇಗಿದೆ ? ಇಲ್ಲಿದೆ ಸಂಪೂರ್ಣ ಮಾಹಿತಿ

suddione whatsapp group join

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಮೇ.12) :
ವಿಧಾನಸಭಾ ಚುನಾವಣೆಯ ಮತ ಎಣಿಕೆ ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸಕಟ್ಟಡದಲ್ಲಿ ಇದೇ ಮೇ.13ರಂದು ಶನಿವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮತ ಎಣಿಕೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೇ.13ರಂದು ಶನಿವಾರ ಬೆಳಿಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂ ತೆರೆಯಲಾಗುವುದು. ವಿಧಾನಸಭಾ ಕ್ಷೇತ್ರವಾರು ಕೌಟಿಂಗ್ ಹಾಲ್ ವ್ಯವಸ್ಥೆ ಮಾಡಲಾಗಿದ್ದು, ಒಂದು ಕೌಟಿಂಗ್ ಹಾಲ್‍ನಲ್ಲಿ 14 ಟೇಬಲ್ ಮತ ಎಣಿಕೆ ನಡೆಯಲಿದ್ದು, ಆರ್.ಓ.ಟೇಬಲ್‍ನಲ್ಲಿ ಅಂಚೆ ಮತಪತ್ರದ ಎಣಿಕೆ ಮಾಡಲಾಗುವುದು ಎಂದರು.

ಹಿರಿಯೂರು ವಿಧಾನಸಭಾ ಕ್ಷೇತ್ರ, ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಇವಿಎಂ ಮತ ಎಣಿಕೆಯು 21 ಸುತ್ತುಗಳಲ್ಲಿ ನಡೆಯಲಿದೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಇವಿಎಂ ಮತ ಎಣಿಕೆಯು 19 ಸುತ್ತುಗಳಲ್ಲಿ ನಡೆಯಲಿದೆ. ಹೊಸದುರ್ಗ ವಿಧಾನಸಭಾ ಕ್ಷೇತ್ರದ ಇವಿಎಂ ಮತ ಎಣಿಕೆಯು 18 ಸುತ್ತುಗಳಲ್ಲಿ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು 22 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ಮೇಲ್ವಿಚಾರಕು, ಸಹಾಯಕರು ಹಾಗೂ ಮೈಕ್ರೋ ವೀಕ್ಷಕರು ಇರಲಿದ್ದಾರೆ. ಈಗಾಗಲೇ ಮತ ಎಣಿಕೆ ಸಿಬ್ಬಂದಿಗೆ ಎರಡನೇ ಹಂತದ ತರಬೇತಿಯನ್ನು ನೀಡಲಾಗಿದೆ ಎಂದರು.

ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದ ನೆಲಮಹಡಿಯಲ್ಲಿ ಹಿರಿಯೂರು ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಮೊದಲ ಮಹಡಿಯಲ್ಲಿ ಚಳ್ಳಕೆರೆ ಹಾಗೂ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ  ನಡೆಯಲಿದೆ. ಎರಡನೇ ಮಹಡಿಯಲ್ಲಿ ಹೊಸದುರ್ಗ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ.

318 ಮತ ಎಣಿಕೆ ಸಿಬ್ಬಂದಿ : ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ 102 ಮೇಲ್ವಿಚಾರಕರು, 102 ಸಹಾಯಕರು ಹಾಗೂ 114 ಮೈಕ್ರೋ ವೀಕ್ಷಕರು ಸೇರಿದಂತೆ ಒಟ್ಟು 318 ಮತ ಎಣಿಕೆ ಸಿಬ್ಬಂದಿಯನ್ನು  ನೇಮಿಸಲಾಗಿದೆ.

ವಿಧಾನಸಭಾ ಕ್ಷೇತ್ರವಾರು 17 ಮೇಲ್ವಿಚಾರಕರು, 17 ಸಹಾಯಕರು ಹಾಗೂ 19 ಮೈಕ್ರೋ ವೀಕ್ಷಕರು ಸೇರಿದಂತೆ ಒಟ್ಟು 53 ಮತ ಎಣಿಕೆ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಹೇಳಿದರು.

ಮೂರು ಹಂತದ ಭದ್ರತೆ: ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತದ ಭದ್ರತೆ ಒದಗಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ಅರೆಸೇನಾಪಡೆ ಹಾಗೂ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದ್ದು, ಮತ ಎಣಿಕೆ ಕೇಂದ್ರ ಒಳಗೆ ಹಾಗೂ ಹೊರಗೆ ಸಿಸಿ ಟಿವಿ ಅಳವಡಿಸಲಾಗಿದೆ. ಮತ ಎಣಿಕೆಯ ಟೇಬಲ್‍ನಲ್ಲಿಯೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಚುನಾವಣಾ ಆಯೋಗ ನಿಗದಿಪಡಿಸಿರುವ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ ಎಂದರು.

ಬೆಳಿಗ್ಗೆ 8ಕ್ಕೆ ಅಂಚೆಮತಪತ್ರ ಎಣಿಕೆ: ಬೆಳಿಗ್ಗೆ 8ಕ್ಕೆ ಮೊದಲು ಅಂಚೆ ಮತಪತ್ರ ಎಣಿಕೆ ಮಾಡಲಾಗುವುದು. 30 ನಿಮಿಷಗಳ ನಂತರ ಇವಿಎಂ ಮತಯಂತ್ರಗಳ ಎಣಿಕೆ ಮಾಡಲಾಗುವುದು. ಜಿಲ್ಲೆಯಲ್ಲಿ ಫಾರಂ 12ಅನ್ನು 10701 ಮಂದಿಗೆ ಅಂಚೆ ಮತಪತ್ರ ವಿತರಣೆ ಮಾಡಲಾಗಿದ್ದು, ಅದರಲ್ಲಿ ಈವರೆಗೂ 7340 ಅಂಚೆ ಮತಪತ್ರಗಳು ಸ್ವೀಕೃತವಾಗಿವೆ. 381 ಸೇವಾ ಮತದಾರರು ಇದ್ದು, ಅದರಲ್ಲಿ 61 ಸ್ವೀಕೃತವಾಗಿದೆ ಎಂದರು.

219 ಅಗತ್ಯ ಸೇವಾ ಮತದಾರರು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಅಂಚೆ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ್ದಾರೆ. 80 ವರ್ಷ ಮೇಲ್ಪಟ್ಟವರಲ್ಲಿ 1093 ಹಾಗೂ 398 ವಿಕಲಚೇತನರು ಮನೆಯಿಂದ ಮತ ಚಲಾಯಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾತನಾಡಿ, ಮತ ಎಣಿಕೆ ಕೇಂದ್ರದ ಹಾಗೂ ಮತ ಎಣಿಕೆ ಸುತ್ತಮುತ್ತ, ಜಿಲ್ಲೆಯಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ 250 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಇದರ ಜೊತೆಗೆ  ಸಿಎಪಿಎಫ್,  ಕೆಎಸ್‍ಆರ್‍ಪಿ,  ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಪ್ರತಿ ಮತ ಎಣಿಕೆ ಕೇಂದ್ರಕ್ಕೆ ಒರ್ವ ಸಬ್‍ಇನ್ಸ್‍ಪೆಕ್ಟರ್ ಹಾಗೂ ಡಿಎಸ್‍ಪಿ ಉಸ್ತುವಾರಿ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಇದ್ದರು. ಪತ್ರಿಕಾಗೋಷ್ಠಿಯ ನಂತರ ಮತ ಎಣಿಕೆ ಕೇಂದ್ರವಾದ ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿ, ಮತ ಎಣಿಕೆ ಕಾರ್ಯದ ಅಂತಿಮ ಸಿದ್ಧತೆ ಪರಿಶೀಲನೆ ನಡೆಸಿದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 : ಮೇ.13ರ ರಂದು ಮತ ಎಣಿಕೆ ಹಿನ್ನೆಲೆ ಮದ್ಯ ಮಾರಾಟ ನಿಷೇಧ

ಚಿತ್ರದುರ್ಗದ ಸಾರ್ವಜನಿಕರಿಗೆ ಮಹತ್ವದ ಮಾಹಿತಿ : ಮೇ.13ರ ರಂದು ಮತ ಎಣಿಕೆ, ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ