in

ಬೇಡವಾದ ಗಣಪ ದುರ್ಗದ ಜನರಿಗೆ ಪ್ರಸನ್ನನಾದ : ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ಹಿನ್ನೆಲೆ ಮತ್ತು ನಡೆದುಬಂದ ಹಾದಿ

suddione whatsapp group join

ಸುದ್ದಿಒನ್, ಚಿತ್ರದುರ್ಗ : ಚಿತ್ರದುರ್ಗದ ಐತಿಹಾಸಿಕ ಏಳು ಸುತ್ತಿನ ಕೋಟೆ ವೀಕ್ಷಣೆಗೆ ಪ್ರವೇಶಿಸುವ ಎರಡು ಪ್ರಮುಖ ದ್ವಾರಗಳು ದುರ್ಗದ ಹೆಬ್ಬಾಗಿಲುಗಳು. ಒಂದು ಆನೆಬಾಗಿಲು, ಮತ್ತೊಂದು ರಂಗಯ್ಯನಬಾಗಿಲು.

ಈ ಎರಡು ಬಾಗಿಲುಗಳು ಆಕರ್ಷಣಿಯವಾಗಿದ್ದು, ಕೋಟೆ ವೀಕ್ಷಣೆಗೆ ಬರುವವರೂ ಈ ಹೆಬ್ಬಾಗಿಲುಗಳ ಮೂಲಕ ಸಾಗಬೇಕು.

ಈ ಬಾಗಿಲುಗಳಿಗೆ ಐತಿಹಾಸಿಕ ಹಿನ್ನೆಲೆಯಿದ್ದು, ಐದಾರು ದಶಕದ ಹಿಂದೆ ಇಲ್ಲಿ ಆಚರಣೆಗೆ ಬಂದ ಗಣಪತಿ ಉತ್ಸವ ಆಚರಣೆ ವಿಶೇಷವಾಗಿ ಇಡೀ ರಾಜ್ಯದ ಗಮನವನ್ನೇ ಸೆಳೆದಿತ್ತು.

ಪ್ರಸ್ತುತ ಬೀದಿ, ಗಲ್ಲಿ-ಗಲ್ಲಿಗಳಲ್ಲಿ ಗಣಪತಿ ಉತ್ಸವ ಆಚರಿಸಲಾಗುತ್ತದೆ. ಆದರೆ ದಶಕದ ಹಿಂದೆ ದುರ್ಗದಲ್ಲಿ ಮೊದಲು ಆನೆಬಾಗಿಲು ನಂತರದ ದಿನಗಳಲ್ಲಿ ರಂಗಯ್ಯನಬಾಗಿಲು ಬಳಿ ಮಾತ್ರ ಸಾರ್ವಜನಿಕವಾಗಿ ಗಣಪತಿ ಉತ್ಸವ ಆಚರಿಸಲಾಗುತ್ತಿತ್ತು. ಬಳಿಕ ಜೆಸಿಆರ್‌ ಬಡಾವಣೆಯಲ್ಲಿ ಆರಂಭವಾಯಿತು. ಈ ಮೂರು ಸ್ಥಳಗಳಲ್ಲಿ ಜರುಗುತ್ತಿದ್ದ ಗಣಪತಿ ಉತ್ಸವ ದುರ್ಗದಲ್ಲಿ ಹಬ್ಬದ ಸಂಭ್ರಮಕ್ಕೆ ಮೆರುಗು ನೀಡುವ ಜೊತೆಗೆ ಜನರಲ್ಲಿ ಧಾರ್ಮಿಕ ಭಾವನೆ ಬಿತ್ತುವ ಜತೆಗೆ ಜನರಿಗೆ ವಿವಿಧ ರೀತಿ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡುವ ಪ್ರಮುಖ ಸ್ಥಳಗಳು ಇವು ಆಗಿದ್ದವು.

ಜೆಸಿಆರ್‌, ರಂಗಯ್ಯನಬಾಗಿಲು ಬಳಿ ಗಣಪತಿ ಉತ್ಸವ ರದ್ದಾಗಿದ್ದು, ಆನೆಬಾಗಿಲು, ಸ್ಥಳದಲ್ಲಿ ಈಗಲೂ ಅಷ್ಟೇ ಸಂಭ್ರಮವಾಗಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯಿಂದ ಉತ್ಸವ ಆಚರಿಸಲಾಗುತ್ತದೆ.

1958 ರಲ್ಲಿ ಆರಂಭವಾದ ಆನೆಬಾಗಿಲ ಗಣಪತಿ ಉತ್ಸವ 2007 ರಲ್ಲಿ ಸುವರ್ಣ ಮಹೋತ್ಸವ ಆಚರಿಸಲಾಯಿತು. ಇಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದ್ದ ಗಣಪ ರಾಮಾಯಣ, ಮಹಾಭಾರತದ ಕಥೆಯನ್ನೇ ಪರಿಚಯಿಸುತ್ತಿದ್ದ. ಅಷ್ಟು ವಿಶೇಷವಾಗಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಈ ಗಣಪತಿ ಉತ್ಸವಕ್ಕೊಂದು ವಿಶೇಷ ಸಂದರ್ಭ ಇದೆ. ಆನೆಬಾಗಿಲು ರಸ್ತೆ ಗಣಪತಿ, ಗೌರಿ ಮೂರ್ತಿಗಳ ಮಾರಾಟ ಸ್ಥಳ. ಇಲ್ಲಿ ನೂರಾರು ಗಣಪ ಮೂರ್ತಿಗಳನ್ನು ಮಾರಾಟ ಮಾಡುತ್ತಾರೆ.

ಯಾರೋ ಒಬ್ಬರು ತಮಗೆ ಬೇಡವಾದ ಗಣಪತಿ ಮೂರ್ತಿಯನ್ನು ತೆಗೆದುಕೊಂಡು ಹೋಗದೇ ಆನೆಬಾಗಿಲ ಬಳಿ 1958 ರಲ್ಲಿ ಬಿಟ್ಟು ಹೋಗಿದ್ದರು. ಇದನ್ನು ಕಂಡ ಸ್ಥಳೀಯರು ಇದನ್ನು ಏನು ಮಾಡುವುದು ಎಂಬ ಚಿಂತೆಗೆ ಬಿದ್ದರು.

ಆಗಲೇ ಹುಟ್ಟಿಕೊಂಡಿದ್ದು ಗಣಪತಿ ಉತ್ಸವದ ಚಿಂತನೆ. ಸ್ಥಳೀಯರಾದ ಧಾರ್ಮಿಕ ನಂಬಿಕೆಯುಳ್ಳ ಕಾಶಿ ಶ್ರೀನಿವಾಸ್‌ ಶೆಟ್ಟಿ ಸೇರಿದಂತೆ ಒಂದಿಷ್ಟು ಮಂದಿ ಸೇರಿ ಪ್ರಸನ್ನವಾಗಿದ್ದ ಗಣಪತಿ ಮೂರ್ತಿಯನ್ನು ಕಂಡು ಪುಳಕಿತರಾದರು.

ಎಷ್ಟೊಂದು ಸುಂದರ, ಪ್ರಸನ್ನವಾಗಿದ್ದಾನೆ ಗಣಪ. ಪಾಪ ಯಾರೋ ಪ್ರತಿಷ್ಠಾಪನೆ ಮಾಡಲು ಚಿಂತನೆ ನಡೆಸಿದ್ದು, ಅದಕ್ಕಾಗಿಯೇ ಸುಂದರವಾಗಿ ಮಾಡಿಸಿದ್ದಾರೆ. ಆದರೆ, ಏನೋ ಕಷ್ಟ ಆಗಿರಬೇಕು. ಆ ಕಾರಣಕ್ಕೆ ಬಿಟ್ಟು ಹೋಗಿದ್ದಾರೆ. ಇದು ನಮ್ಮ ಸೌಭಾಗ್ಯ. ನಮ್ಮನ್ನೇ ಗಣಪ ಹುಡುಕಿಕೊಂಡು ಬಂದಿದ್ದಾನೆ. ಈತನಿಗೆ ಸೇವೆ ಸಲ್ಲಿಸುವುದು ನಮ್ಮ ಸೌಭಾಗ್ಯವಾಗಲಿದೆ. ನಾವೇ ಎಲ್ಲರೂ ಸೇರಿ ಸಮಿತಿ ರಚಿಸಿಕೊಂಡು ಈ ಗಣಪನ ಮೂಲಕ ಗಣೇಶ ಉತ್ಸವ ಯಾಕೇ ಆಚರಿಸಬಾರದು ಎಂಬ ಚಿಂತನೆ ಮುಂದಿಟ್ಟರು.

ಆಗಲೇ ಹುಟ್ಟಿಕೊಂಡಿದ್ದು ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ. ಇದಕ್ಕೆ ಕೈ ಜೋಡಿಸಿದವರು ಪಿ.ಎನ್‌.ಶ್ರೀನಿವಾಸಶೆಟ್ಟಿ, ಎಂ.ಎನ್‌.ರಾಮಚಂದ್ರಮೂರ್ತಿ, ಬಿ.ವಿ.ದೇವೋಜಿರಾವ್‌ (ಬೇದ್ರೆ) ಬಿ.ವಿ.ಪದ್ಮನಾಭಶೆಟ್ಟಿ, ಎನ್.ಸುಬ್ರಮಣ್ಯ, ಕೆ.ಎನ್‌.ಸತ್ಯನಾರಾಯರಾವ್‌, ಹಾಲಪ್ಪ ಸೇರಿ ಅನೇಕರು.  ಇವರೆಲ್ಲರೂ ಆನೆಬಾಗಿಲ ಬಳಿ ಗಣಪತಿ ಉತ್ಸವ ಆಚರಣೆಯ ಸಂಸ್ಥಾಪಕರು.
ಇವರೆಲ್ಲರೂ ಸೇರಿ ಗಣಪತಿ ಉತ್ಸವ ಆಚರಣೆಗೆ ಸಿದ್ಧತೆ ನಡೆಸಿದರು. ತಾವೇ ಕೈಯಾರೆ ಚಂದಾ ಹಾಕಿ ಚಪ್ಪರ ಸೇರಿ ವಿವಿಧ ಸಿದ್ಧತೆ ನಡೆಸಿ ಗಣಪತಿ ಉತ್ಸವ ಆಚರಣೆಗೆ ಚಾಲನೆ ನೀಡಿಯೇಬಿಟ್ಟರು. ಬಳಿಕ ಉತ್ಸವ ಸಮಿತಿ ರಚಿಸಿಕೊಂಡು ದುರ್ಗದ ಜನರಲ್ಲಿ ಧಾರ್ಮಿಕ ಚಿಂತನೆ ಬಿತ್ತುವ ಕಾರ್ಯ ಕೈಗೊಂಡರು.

ಕಾಶಿ ಶ್ರೀನಿವಾಸ್‌ ಶೆಟ್ಟಿ ಅವರು ಬರೋಬ್ಬರಿ 32 ವರ್ಷಗಳ ಕಾಲ ಉತ್ಸವ ಸಮಿತಿಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಕೆ.ಹೆಚ್.ಸತ್ಯನಾರಾಯಣರಾವ್‌ ಅವರು 50 ವರ್ಷಗಳ ಸುಧೀರ್ಘ ಕಾಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಇವರಲ್ಲಿನ ದೇವರ ಭಕ್ತಿಗೆ ಒಂದು ಸಾಕ್ಷಿ.

ಬಳಿಕ ಅಧ್ಯಕ್ಷರಾಗಿ ಕೆ.ವಿ.ನಾಗಭೂಷಣ ಶೆಟ್ಟರು 18 ವರ್ಷ ಸೇವೆ ಸಲ್ಲಿಸಿದ್ದರು. ಜೆ.ಗೋಪಾಲ್‌ ರಾವ್ ಜಾದವ್‌ 14 ವರ್ಷದಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಣಪತಿ ಹಬ್ಬಕ್ಕೆ ಒಂದು ತಿಂಗಳ ಮುಂಚಿತವಾಗಿ ಸಿದ್ದತಾಕಾರ್ಯಗಳು ನಡೆಯುತ್ತಿದ್ದವು. ಊರಿನ ಪ್ರಮುಖ ಗಣ್ಯರು ಸೇರಿದಂತೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಗುತ್ತಿತ್ತು.

ವಿಶೇಷ ಎಂದರೆ ಪ್ರತಿ ವರ್ಷ ಗಣಪತಿ ಉತ್ಸವದ ಲೆಕ್ಕಪತ್ರವನ್ನು ಬಹಿರಂಗವಾಗಿ ಗಣಪತಿ ಉತ್ಸವದ ಕರಪತ್ರದ ಜತೆಗೆ ಮನೆ ಮನೆಗೆ ತಲುಪಿಸುವುದು ಈ ಉತ್ಸವ ಸಮಿತಿಯ ಪ್ರಮಾಣಿಕತೆಗೆ ಸಾಕ್ಷಿ ಆಗಿದೆ.

ಆಡಂಬರ ಇಲ್ಲದೆ ಅರ್ಥಪೂರ್ಣ, ಜನರಲ್ಲಿ ಧಾರ್ಮಿಕ ಚಿಂತನೆ ಬಿತ್ತುವ ಕಾರ್ಯಕ್ಕೆ ಹೆಚ್ಚು ಆದ್ಯತೆ ನೀಡುವ ಉತ್ಸವ ಸಮಿತಿ ಪ್ರತಿವರ್ಷವೂ ಒಂದಿಲ್ಲೊಂದು ವಿಶೇಷ ಯೋಜನೆ ರೂಪಿಸುತ್ತಲೇ ಬರುತ್ತಿದೆ.

ಆನೆಬಾಗಿಲ ಗಣಪತಿ ಉತ್ಸವ ಎಂದರೆ ದುರ್ಗವಷ್ಟೇ ಅಲ್ಲ ಅಕ್ಕಪಕ್ಕದ ಹಳ್ಳಿ, ವಿವಿಧ ತಾಲೂಕು, ವಿವಿಧ ಜಿಲ್ಲೆ ಜನರಿಗೆ ವಿಶೇಷ ಪ್ರೀತಿ.

ದುರ್ಗದಲ್ಲಿ ಮೊದಲ ಬಾರಿಗೆ ವಿಶೇಷವಾಗಿ ಪೆಂಡಾಲ್ ಹಾಕಿಸಿ ಪ್ರತಿವರ್ಷ ಒಂದಿಂಚು ಎತ್ತರ ಕಡಿಮೆ, ಜಾಸ್ತಿ ಆಗದಂತೆ 6 ಅಡಿ ಎತ್ತರದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಇಲ್ಲಿನ ವಿಶೇಷ. ಜತೆಗೆ ಪ್ರತಿ ವರ್ಷ ಇಲ್ಲಿಗೆ ಶಿವಮೊಗ್ಗದ ಕಲಾವಿದ ಖ್ಯಾತ ಕರ್ನಾಟಕ ಶಿಲ್ಪ ಕಲಾ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ (ಮುರುಡೇಶ್ವರದಲ್ಲಿ ಶಿವನ ಬೃಹತ್‌ ಮೂರ್ತಿ ನಿರ್ಮಿಸಿರುವ ಖ್ಯಾತಿ) ಕಾಶಿನಾಥ್‌ ನೇತೃತ್ವದ ತಂಡವನ್ನು ಕರೆಯಿಸಿ ಪ್ರಸನ್ನ ಗಣಪತಿ ಮೂರ್ತಿ ರೂಪಿಸುವುದು ಇಲ್ಲಿನ ವಿಶೇಷ. ಕೆಲ ವರ್ಷಗಳಿಂದ ಪೀಠವನ್ನು ಶಿವಮೊಗ್ಗಕ್ಕೆ ಕಳುಹಿಸಿ, ಅದರ ಮೇಲೆ ಗಣಪತಿ ಮೂರ್ತಿ ನಿರ್ಮಿಸಿ ತರುವ ಕಾರ್ಯ ನಡೆಸಲಾಗುತ್ತಿದೆ.

ಭಕ್ತ ಕನಕದಾಸ, ಭಕ್ತ ಕುಂಬಾರ, ಮತ್ಸ್ಯ ಕನ್ಯ, ಬಾವಾಜಿ, ವಿಶ್ವರೂಪ, ದಶವಾತಾರ, ಶಮಂತಕ ಮಣಿ, ರಾಮಾಯಣ, ಮಹಾಭಾರತ ಕಥಾರೂಪ,ಕಾರ್ಗಿಲ್ ವಿಜಯೋತ್ಸವ, ಗೋಹತ್ಯೆ ನಿಷೇಧ ಸಾರುವ ಗಣಪತಿ, ಆಸ್ಥಾನ ಗಣಪತಿ, ಅರಮನೆ ಗಣಪತಿ
ಹೀಗೆ ಸಾಕಷ್ಟು ಪೌರಾಣಿಕ, ಐತಿಹಾಸಿಕ ಹಾಗೂ ಅಂದಿನ ಪ್ರಸ್ತುತ ವಿದ್ಯಮಾನಕ್ಕೆ ಅನುಗುಣವಾಗಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ.

ಪ್ರತಿ ಸಂಜೆ ಆಯೋಜಿಸುವ ಕಾರ್ಯಕ್ರಮಗಳೇ ಸಾವಿರಾರು ಜನರನ್ನು ಸೆಳೆಯುವುದು ಇಲ್ಲಿನ ವಿಶೇಷ. ಅಂದಿನ ಕಾಲದಲ್ಲಿ ಕೇವಲ ರೆಡಿಯೋ ಮಾತ್ರ ಇದ್ದ ಸಮಯದಲ್ಲಿ ವಿವಿಧ ರಾಜ್ಯ, ಜಿಲ್ಲೆಗಳಿಂದ ಕಲಾವಿದರನ್ನು ಕರೆಯಿಸಿ ವಿವಿಧ ರೀತಿ ಕಾರ್ಯಕ್ರಮ ಕೊಟ್ಟ ಹೆಗ್ಗಳಿಕೆ ಉತ್ಸವ ಸಮಿತಿಗಿದೆ.

1200 ಮಂದಿ ಪೂಜಾಧಾರರು ಇದ್ದು, 200 ಮಂದಿ ಶಾಶ್ವತ ಪೂಜಾದಾರರು ಇರುವುದು ವಿಶೇಷ. ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳದ ಪೂಜಾದಾರರ ಮನಗೆ ಬಾಗಿಲಿಗೆ ಪ್ರಸಾದ ತಲುಪಿಸಲಾಗುತ್ತದೆ.ಪ್ರತಿನಿತ್ಯವೂ ಪ್ರಸಾದ ಸೇವಾಕರ್ತರು ಸೇವೆ ಸಲ್ಲಿಸುತ್ತಿದ್ದರು. ಪ್ರತಿದಿನ ಒಂದೂವರೆ ಕ್ವಿಂಟಾಲ್‌ ಗೂ ಹೆಚ್ಚು ಪ್ರಸಾದ ಮಾಡಿಸಿ ವಿತರಣೆ ಮಾಡಲಾಗುತ್ತದೆ. 10ನೇ ದಿನ ಗಣಹೋಮ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಜರುಗುತ್ತವೆ.
10 ದಿನದ ಬಳಿಕ 11ನೇ ದಿನ ರಾತ್ರಿ 10 ಗಂಟೆಗೆ ಆರಂಭವಾಗುವ ಗಣಪತಿ ಮೆರವಣಿಗೆ ನೋಡಲು ಎರಡು ಕಣ್ಣುಗಳು, ಸಮಯವೇ ಸಾಲದು ಎನ್ನಬಹುದು. ಬೆಳಗ್ಗೆ 4 ಗಂಟೆಯವರಿಗೆ ಮೆರವಣಿಗೆ ಸಾಗುತ್ತದೆ. ಬಳಿಕ 12 ದಿನಕ್ಕೆ ಗಣಪತಿ ವಿಸರ್ಜನೆ ಮಾಡಲಾಗುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಹರಿಕಥೆ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಕೊಳಲು ವಾದನ, ವೀಣಾವಾದನ, ಭರತನಾಟ್ಯ, ಪಂಚವೀಣೆ, ಭಕ್ತಿ ಗೀತೆ, ಗೊಂಬೆಯಾಟ, ಯಕ್ಷಗಾನ, ಚಲನಚಿತ್ರ ಗೀತೆಗಳ ರಸಮಂಜರಿ, ಕರೋಕೆ,  ಹಾಸ್ಯಕಾರ್ಯಕ್ರಮ, ಆರ್ಕೆಸ್ಟ್ರಾ ಹೀಗೆ ವಿವಿಧ ರೀತಿ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ.
ಅಷ್ಟೇ ಅಲ್ಲದೇ ಅಂದಿನ ಕಾಲದ ಖ್ಯಾತ ಸಂಗೀತಕಾರರಾದ ಚಿಟ್ಟಿಬಾಬು, ಬಾಲಮುರಳಿಕೃಷ್ಣ, ಎಂ ಎಲ್ ವಸಂತಕುಮಾರಿ, ಗುರುರಾಜ ನಾಯ್ಡು, ಶೋಭಾ ನಾಯ್ಡು, ಮದನ್ ಮಲ್ಲು, ಬ್ಯಾಂಕ್ ಜನಾರ್ಧನ, ಜ್ಯೋತಿ ರವಿ, ತರೀಕೆರೆ, ಭದ್ರಾವತಿಯಿಂದ ಗೀತಾಂಜಲಿ ಆರ್ಕೆಸ್ಟ್ರಾ, ಗೀತಾ ಆರ್ಕೆಸ್ಟ್ರಾ, ಮನು ಮಧು ಆರ್ಕೆಸ್ಟ್ರಾ, ಮಕ್ಕಳಿಗಾಗಿ ಮ್ಯಾಜಕ್ ಶೋ, ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು.

*ಮರೆತರೂ ಮರೆಯಲಾಗದ ಸಂತೆಹೊಂಡದ ತೆಪ್ಪೋತ್ಸವ

ಆನೆಬಾಗಿಲ ಗಣಪತಿ ಉತ್ಸವದ 11 ದಿನದ ವಿಶೇಷ ಕಾರ್ಯಕ್ರಮಗಳು, ಪೂಜಾ ಕಾರ್ಯಗಳು ಒಂದು ತೂಕವಾದರೆ, ಮತ್ತೊಂದು ತೂಕ ಸಂತೆಹೊಂಡದಲ್ಲಿ 12ನೇ ದಿನ ಜರುಗುತ್ತಿದ್ದ ತೆಪ್ಪೋತ್ಸವ ಎನ್ನಬಹುದು. ಸುಮಾರು 35 ವರ್ಷಗಳ ಕಾಲ ಈ ತೆಪ್ಪೋತ್ಸವ ನಡೆಯಿತು. ಇದನ್ನು ನೋಡಲು ಸಾವಿರಾರ ಮಂದಿ ಸಂತೆಹೊಂಡದ ಬಳಿ ಜಾಗ ಕಾಯ್ದಿರಿಸಿಕೊಂಡು ಇರುತ್ತಿದ್ದರು. ಸಂಜೆಯೇ ಹೊಂಡದ ಬಳಿ ಜನ ಜಮಾಯಿಸುತ್ತಿದ್ದರು.

ವಿಶೇಷ ರೀತಿ ತೆಪ್ಪ ಮಾಡಿ ಅದರಲ್ಲಿ ಗಣಪತಿಯನ್ನು ತಂದು ಕೂರಿಸಿ ಧಾರ್ಮಿಕ ಭಾವನೆ ಬಿತ್ತುವ ಹಾಡುಗಳನ್ನು ಖ್ಯಾತ ಕಲಾವಿದರಿಂದ ಹಾಡಿಸಲಾಗುತ್ತಿತ್ತು. ಬಳಿಕ ಗಣಪತಿ ವಿಸರ್ಜನೆ ಮಾಡಲಾಗುತ್ತಿತ್ತು. ಅಂದಿನ ದಿನ ಮೆರವಣಿಗೆ ನೋಡಲು ರಾತ್ರಿಯಿಡೀ ಜನರು ಗಣಪತಿಯ ದರ್ಶನ ಪಡೆಯಲು ಕೌತುಕದಿಂದ ಕಾಯುತ್ತಿದ್ದರು.
ರಾತ್ರಿ 9 ಗಂಟೆಗೆ ಮೆರವಣಿಗೆ ಹೊರಡುತ್ತಿತ್ತು‌. ಈ ವೇಳೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದವು.
ದುರ್ಗದ ಜನರು ಎಂದೂ ಮರೆಯಾದ ತೆಪ್ಪೋತ್ಸವವಾಗಿತ್ತು. ಎಷ್ಟೋ ದಿನಗಳವರೆಗೆ ಇದನ್ನೇ ಮೆಲುಕು ಹಾಕುತ್ತಿದ್ದರು. ಆದರೆ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ಹಿನ್ನೆಲೆಯಲ್ಲಿ ಸಂತೆಹೊಂಡದ ತೆಪ್ಪೋತ್ಸವ ಚಂದ್ರವಳ್ಳಿ ಕೆರೆಗೆ ಶಿಫ್ಟ್‌ ಆಗಿತ್ತು. ಅಲ್ಲಿಯೂ ಇದೇ ರೀತಿ ವಿಜೃಂಭಣೆ, ಸಂಭ್ರಮ ಇರುತ್ತಿತ್ತು. ಅಲ್ಲಿಯೂ ಪರಿಸರ ಮಾಲೀನ್ಯ ಕಾರಣಕ್ಕೆ ತೆಪ್ಪೋತ್ಸವಕ್ಕೆ ಶಾಶ್ವತವಾಗಿ ತೆರೆಬಿದ್ದು, ಚಂದ್ರವಳ್ಳಿಯಲ್ಲಿ ಸರ್ಕಾರವೇ ನಿರ್ಮಿಸುವ ತಾತ್ಕಾಲಿನ ನೀರಿನ ಗುಂಡಿಯಲ್ಲಿ ಗಣಪತಿ ವಿಸರ್ಜನೆ ಕಾರ್ಯ ನಡೆದುಕೊಂಡು ಬರುತ್ತಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಿತ್ರದುರ್ಗದ  ರಂಗಯ್ಯನಬಾಗಿಲ ಗಣಪತಿ ಉತ್ಸವ ಇನ್ನೂ ನೆನಪಷ್ಟೇ

ಕೋಟೆನಾಡಿನ ಹೆಗ್ಗಳಿಕೆ ‘ಹಿಂದೂ ಮಹಾಗಣಪತಿ’