ಸುದ್ದಿಒನ್, ಚಿತ್ರದುರ್ಗ(ಜೂ.23) : ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಡಿಎಂಎಫ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ 12 ಲಕ್ಷ ಮೊತ್ತದ ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿ ಪೂರ್ಣಗೊಳಿಸದೆ ಕಾಮಗಾರಿ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಹಾಗೂ ತನಿಖಾಧಿಕಾರಿಗಳ ವರದಿಯ ಆಧಾರದಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೆ.ಜಿ. ಮೂಡಲಗಿರಿಯಪ್ಪ ಹಾಗೂ ಯೋಜನಾ ಅಭಿಯಂತರ ಸತೀಶ್ ಕಲ್ಲಟ್ಟಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಿಮುಕ್ತಿಗೊಳಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಆದೇಶಿಸಿದ್ದಾರೆ.
ಚಿತ್ರದುರ್ಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಹಾಗೂ ಯೋಜನಾ ಅಭಿಯಂತರರು ಡಿಎಂಎಫ್ ಯೋಜನೆಯಡಿ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ನಿರ್ಮಿಸುತ್ತಿರುವ 12 ಲಕ್ಷ ಮೊತ್ತದ ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿ ಪೂರ್ಣಗೊಳಿಸದೆ ಕಾಮಗಾರಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ, ಹೀಗಾಗಿ ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ನಿರ್ಮಿತಿ ಕೇಂದ್ರದ ಸಹಾಯಕ ಯೋಜನಾ ವ್ಯವಸ್ಥಾಪಕ ಎಂ.ಜೆ. ಮಲ್ಲಿಕಾರ್ಜುನ ಅವರು ದೂರು ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಉಪವಿಭಾಗಾಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು.
ಅದರನ್ವಯ ಉಭಯ ಅಧಿಕಾರಿಗಳು ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಖುದ್ದಾಗಿ ಪರಿಶೀಲಿಸಿ, ಜಂಟಿ ತಪಾಸಣಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು. ಈ ವರದಿಯ ಮೇರೆಗೆ ನಿಯಮಾನುಸಾರ ಕ್ರಮ ವಹಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿಯವರು ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್‍ನ ಹಣ ದುರ್ಬಳಕೆ ಆಗಿರುವುದಾಗಿ, ಕಾಮಗಾರಿ ವ್ಯಾಪ್ತಿಯ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೆ.ಜಿ. ಮೂಡಲಗಿರಿಯಪ್ಪ ಹಾಗೂ ಯೋಜನಾ ಅಭಿಯಂತರ ಸತೀಶ್ ಕಲ್ಲಟ್ಟಿ ಅವರ ವಿರುದ್ಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಎಫ್‍ಐಆರ್ ಸಲ್ಲಿಸಿರುತ್ತಾರೆ.
ಈ ಎಲ್ಲ ವರದಿಗಳ ಆಧಾರದಲ್ಲಿ ಡಿಎಂಎಫ್ ಅನುದಾನದ ಹಣ ದುರುಪಯೋಗಕ್ಕೆ ಸಂಬಂಧಿಸಿರುವ ಆರೋಪವು ಗಂಭೀರ ಸ್ವರೂಪದ್ದಾಗಿದ್ದು, ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆಗೆ ಅಡಚಣೆ ಉಂಟು ಮಾಡುವ, ದಾಖಲೆಗಳನ್ನು ತಿದ್ದುವ, ದಾಖಲೆಗಳನ್ನು ನಾಶಪಡಿಸುವ ಹಾಗೂ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಮತ್ತು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೆ.ಜಿ. ಮೂಡಲಗಿರಿಯಪ್ಪ ಹಾಗೂ ಯೋಜನಾ ಅಭಿಯಂತರ ಸತೀಶ್ ಕಲ್ಲಟ್ಟಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಿಮುಕ್ತಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.