ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ನಿಮ್ಹಾನ್ಸ್ ಸಂಸ್ಥೆಯು ನೀತಿ ಆಯೋಗ ಹಾಗೂ ಆರೋಗ್ಯ ಇಲಾಖೆಯ ನೆರವಿನಲ್ಲಿ ‘ಕರ್ನಾಟಕ ಮೆದುಳು ಆರೋಗ್ಯ ಕಾರ್ಯಕ್ರಮ’ (ಕರ್ನಾಟಕ ಬ್ರೇನ್ ಹೆಲ್ತ್ ಇನೀಶಿಯೇಟಿವ್) ಜಾರಿ ಮಾಡಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕಾರ್ಯಕ್ರಮಕ್ಕೆ ವರ್ಚುವಲ್ ಚಾಲನೆ ನೀಡಿದ್ದಾರೆ.
ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿಮ್ಹಾನ್ಸ್ ನಿಂದ ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ಮಾನಸಿಕ ರೋಗಗಳ ತಪಾಸಣೆ ಮಾಡುವ ಹಾಗೂ ಚಿಕಿತ್ಸೆ ನೀಡುವ ಕುರಿತು ವೈದ್ಯರಿಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ ರೋಗಿಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೋವಿಡ್ ಸಂದರ್ಭದಲ್ಲಿ ನಿಮ್ಹಾನ್ಸ್ ನೇತೃತ್ವದಲ್ಲಿ, ಅನೇಕ ಕೊರೊನಾ ರೋಗಿ ಹಾಗೂ ಕುಟುಂಬದವರ ಮಾನಸಿಕ ಆರೋಗ್ಯ ನಿರ್ವಹಣೆಗೆ ಒತ್ತು ನೀಡಲಾಯಿತು. ಕೆಲ ಪ್ರಕರಣಗಳಲ್ಲಿ ಆತ್ಮಹತ್ಯೆಯ ಘಟನೆಯೂ ನಡೆಯಿತು. ಆ ವೇಳೆ ಅನೇಕರಿಗೆ ಮಾನಸಿಕ ಆರೋಗ್ಯ ಆಪ್ತ ಸಮಾಲೋಚನೆ ಸೇವೆ ನೀಡಲಾಯಿತು. ಇದನ್ನು ಇನ್ನಷ್ಟು ಮುಂದುವರಿಸಲಾಗುತ್ತಿದೆ.
ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶ. ಮೆದುಳಿನ ಆರೋಗ್ಯ ಇಡೀ ದೇಹದ ಒಟ್ಟು ಆರೋಗ್ಯ ಕಾಪಾಡಲು ಅಗತ್ಯವಾಗಿದೆ. ನಿಮ್ಹಾನ್ಸ್, ಜನರ ಬಳಿಯೇ ಹೋಗಿ ಆರೋಗ್ಯ ಸೇವೆ ನೀಡುವಂತಹ ಪ್ರತಿಷ್ಠಿತ ಸಂಸ್ಥೆಯಾಗಿದೆ. ಸಾಮಾನ್ಯ ಫಿಸಿಶೀಯನ್ ಕೂಡ ಮಾನಸಿಕ ಆರೋಗ್ಯ ಸೇವೆ ನೀಡುವಂತೆ ನಿಮ್ಹಾನ್ಸ್ ತರಬೇತಿ ನೀಡಲಿದೆ ಎಂದರು.
ನವಜಾತ ಶಿಶುವಿಗೂ ಮಾನಸಿಕ ಆರೋಗ್ಯದ ತಪಾಸಣೆ ಮಾಡಿ ರೋಗ ಪತ್ತೆ ಮಾಡುವ ಅಗತ್ಯವಿದೆ. ಸಾಮಾಜಿಕ ಪರಿಸ್ಥಿತಿ, ಕೌಟುಂಬಿಕ ಸ್ಥಿತಿ ಮೊದಲಾದ ಕಾರಣಗಳಿಂದ ಅನೇಕರು ಮಾನಸಿಕ ಒತ್ತಡದಿಂದ ಬಳಲುತ್ತಾರೆ. ಇದು ಪ್ರತಿ ದಿನದ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಹೆಚ್ಚು ಮಾನಸಿಕ ಆರೋಗ್ಯ ತಜ್ಞರು ರಾಜ್ಯಕ್ಕೆ ಬೇಕಾಗಿದೆ. ರಾಜ್ಯದಲ್ಲಿ ಸುಮಾರು 2 ಲಕ್ಷ ಮಂದಿ ವೈದ್ಯ ಶಿಕ್ಷಣ ಪಡೆಯುತ್ತಿದ್ದಾರೆ. ಇವರನ್ನು ಬಳಸಿಕೊಂಡು ಮಾನಸಿಕ ಅನಾರೋಗ್ಯಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.







GIPHY App Key not set. Please check settings