Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಜನಿ, ಲಗಾನ್ ಸಿನಿಮಾ ಖ್ಯಾತಿಯ ನಟ ಪ್ರದೀಪ್ ರಾವತ್ ನಿಧನ

---Advertisement---

ಮುಂಬೈ.ಆಗಸ್ಟ್.5 : ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಖಳನಾಯಕ ಹಾಗೂ ಪೋಷಕ ಪಾತ್ರಗಳ ಮೂಲಕ ಮನೆಮಾತಾಗಿದ್ದ ಹಿರಿಯ ನಟ ಪ್ರದೀಪ್ ರಾವತ್ (74) ಅವರು ಮಂಗಳವಾರ ಸಂಜೆ ಭಿವಂಡಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಈ ದುಃಖದ ಸುದ್ದಿಯನ್ನು ಅವರ ಬಿಸಿನೆಸ್ ಮ್ಯಾನೇಜರ್ ಸಿದ್ಧಾರ್ಥ್ ತಿವಾರಿ ದೃಢಪಡಿಸಿದ್ದಾರೆ. “ರಾವತ್ ಅವರು ಆರಂಭದಲ್ಲಿ ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದರು. ಆದರೆ ಕೆಲವು ತಿಂಗಳ ಹಿಂದೆ ಕಾಯಿಲೆ ಮರುಕಳಿಸಿತು. ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದ ಅವರ ಆರೋಗ್ಯ ಸ್ಥಿತಿ ಇತ್ತೀಚಿನ ದಿನಗಳಲ್ಲಿ ತೀವ್ರ ಕ್ಷೀಣಿಸಿತ್ತು,” ಎಂದು ಅವರು ತಿಳಿಸಿದ್ದಾರೆ. ನಟನ ಅಂತ್ಯಕ್ರಿಯೆ ಬುಧವಾರ ನೆರವೇರಲಿದೆ.

‘ಲಗಾನ್’ ಚಿತ್ರದಲ್ಲಿ ರಾವತ್ ಅವರೊಂದಿಗೆ ನಟಿಸಿದ್ದ ಯಶಪಾಲ್ ಶರ್ಮಾ ಇನ್ಸ್ಟಾಗ್ರಾಮ್‌ನಲ್ಲಿ ಸಂತಾಪ ಸೂಚಿಸುತ್ತಾ, “ನಮ್ಮ ಗಜನಿ, ಲಗಾನ್‌ನ ದೇವ್ ಪ್ರದೀಪ್ ರಾವತ್ ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ಬರೆದುಕೊಂಡಿದ್ದಾರೆ.

ಪ್ರದೀಪ್ ರಾವತ್ ಅವರ ಸಿನಿಮಾ ಪಯಣ:

ಮಹಾಭಾರತ: ಬಿ.ಆರ್. ಚೋಪ್ರಾ ಅವರ ಪ್ರಸಿದ್ಧ ‘ಮಹಾಭಾರತ’ ಧಾರಾವಾಹಿಯಲ್ಲಿ ‘ಅಶ್ವತ್ಥಾಮ’ನ ಪಾತ್ರ ಮಾಡುವ ಮೂಲಕ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದರು.

ಗಜನಿ: ಸೂರ್ಯ ಅಭಿನಯದ ತಮಿಳಿನ ‘ಗಜನಿ’ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಇವರು, ಆಮಿರ್ ಖಾನ್ ಅಭಿನಯದ ಹಿಂದಿ ರೀಮೇಕ್‌ನಲ್ಲೂ ಅದೇ ಮುಖ್ಯ ಖಳನಾಯಕನ (‘ಗಜನಿ ಧರ್ಮಾತ್ಮ’) ಪಾತ್ರ ಮಾಡಿ ದೇಶಾದ್ಯಂತ ದೊಡ್ಡ ಜನಪ್ರಿಯತೆ ಗಳಿಸಿದರು.

ಲಗಾನ್: ಆಸ್ಕರ್ ರೇಸ್‌ನಲ್ಲಿದ್ದ ‘ಲಗಾನ್’ ಚಿತ್ರದ ‘ದೇವ ಸಿಂಗ್ ಸೋಧಿ’ ಪಾತ್ರ ಇವರಿಗೆ ಬಹುದೊಡ್ಡ ಹೆಸರು ತಂದಿಕೊಟ್ಟಿತ್ತು.

ವಿವಿಧ ಭಾಷೆಗಳಲ್ಲಿ ಅಭಿನಯ: 1952 ಜನವರಿ 21 ರಂದು ಜನಿಸಿದ ರಾವತ್ ಅವರು ರಾಜಮೌಳಿ ನಿರ್ದೇಶನದ ‘ಸೈ’ ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದರು. ಕನ್ನಡದಲ್ಲಿ ‘ಪಾರೋಡಿ’,ಗಜ ಮಲಯಾಳಂನಲ್ಲಿ ‘ಚೀನಾ ಟೌನ್’, ಬಂಗಾಳಿಯಲ್ಲಿ ‘ಹೀರೋ 420’ ಹಾಗೂ ಭೋಜ್‌ಪುರಿಯಲ್ಲಿ ‘ಕ್ರ್ಯಾಕ್ ಫೈಟರ್’ ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು.

ತಮ್ಮ ಗಂಭೀರ ಕಂಠ ಮತ್ತು ವಿಶಿಷ್ಟ ಅಭಿನಯ ಶೈಲಿಯಿಂದ ಬಹುಭಾಷಾ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಪ್ರದೀಪ್ ರಾವತ್ ಅವರ ಅಗಲಿಕೆಗೆ ಚಲನಚಿತ್ರ ರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

Join WhatsApp

Join Now

Join Telegram

Join Now