ಮಂಗಳಮುಖಿಯರಿಗೆ ವಿಶೇಷ ಗೌರವ ಜೊತೆಗೆ ಬದುಕಿಗೆ ದಾರಿ ತೋರಿಸುವ ಜವಾಬ್ದಾರಿ ಸಮಾಜದ ಮೇಲಿದೆ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

suddionenews
2 Min Read

ಚಿತ್ರದುರ್ಗ : ಮಂಗಳಮುಖಿಯರಿಗೆ ವಿಶೇಷ ಗೌರವ ನೀಡುವುದರ ಜೊತೆಗೆ ಬದುಕಿಗೆ ದಾರಿ ತೋರಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಿ ಎ.ನಾರಾಯಣಸ್ವಾಮಿ ಹೇಳಿದರು.

ಬಿಜೆಪಿ.ಕಚೇರಿಯಲ್ಲಿ ಗುರುವಾರ ಮಂಗಳಮುಖಿಯರಿಗೆ ಹಮ್ಮಿಕೊಳ್ಳಲಾಗಿದ್ದ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಿಕ್ಷಾಟನೆ ಮಂಗಳಮುಖಿಯರಿಗೆ ವೃತ್ತಿಯಲ್ಲ. ಜೀವನಕ್ಕೆ ಪರ್ಯಾಯವೂ ಅಲ್ಲ. ಸ್ವ-ಉದ್ಯೋಗ ಮಾಡಲು ಇಚ್ಚಿಸಿದರೆ ತರಬೇತಿ, ಸಾಲ ಮತ್ತು ಮೂಲಸೌಲಭ್ಯಗಳನ್ನು ಒದಗಿಸುತ್ತೇವೆ. ಆದರೆ ದುಡಿದು ತಿನ್ನುವ ಬದ್ದತೆ ನಿಮ್ಮಲ್ಲಿರಬೇಕು. ಆಗ ಮಾತ್ರ ಬೇರೆಯವರು ನಿಮ್ಮನ್ನು ಕೀಳಾಗಿ ನೋಡುವುದಿಲ್ಲ. ಮನೆ ಬೇಕೆಂದು ಕೇಳಿದ್ದೀರಿ ಜಿಲ್ಲಾಧಿಕಾರಿಗೆ ನಿಮ್ಮ ಪಟ್ಟಿ ಕೊಡಿ ಎಲ್ಲಿಯಾದರೂ ಜಾಗ ಗುರುತಿಸಿ ಮನೆಗಳನ್ನು ನಿರ್ಮಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಅಧಿಕಾರಿಗಳ ಸಭೆ ಕರೆದು ನಿಮ್ಮ ಅಭಿವೃದ್ದಿ ವಿಚಾರದಲ್ಲಿ ಏನೇನು ಕಾರ್ಯಕ್ರಮಗಳನ್ನು ರೂಪಿಸಬೇಕೋ ಅವನ್ನೆಲ್ಲಾ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದರು.

ಈ ದೇಶದ ಸಂಪತ್ತಿನಲ್ಲಿ ಎಲ್ಲರಿಗೂ ಹಕ್ಕಿರುವಂತೆ ನಿಮಗೂ ಸಮಾನವಾದ ಹಕ್ಕಿದೆ. ರಾಜ್ಯ ಮತ್ತು ಕೇಂದ್ರಕ್ಕೆ ನೀವುಗಳು ಒಂದಲ್ಲ ಒಂದು ರೀತಿಯಲ್ಲಿ ತೆರಿಗೆ ಕಟ್ಟುತ್ತೀರ. ಆದರೆ ಎಲ್ಲರಂತೆ ನೀವುಗಳು ಸಮಾಜದಲ್ಲಿ ಗೌರವದಿಂದ ಬದುಕಬೇಕಾದರೆ ನಿಮ್ಮ ಮನಸ್ಥಿತಿ ಬದಲಾಗಬೇಕು. ಮನೆಯಲ್ಲಿಯೇ ಸ್ವ-ಉದ್ಯೋಗ ಮಾಡುವುದಾದರೆ ಅನೇಕ ತಾಂತ್ರಿಕ ತರಬೇತಿಗಳಿವೆ.

ನಕಾರಾತ್ಮಕ ಚಿಂತನೆಯನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬನ್ನಿ. ಹಿಂದುತ್ವದ ಹಬ್ಬಗಳನ್ನು ಧೈರ್ಯವಾಗಿ ಆಚರಿಸುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ.ಮಾತ್ರ. ಬಿಜೆಪಿ.ಬರೀ ಭಾಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ಹೃದಯ ವೈಶಾಲ್ಯತೆಯು ನಮ್ಮ ನಾಯಕರುಗಳಿಗಿದೆ. ಮುಂದೆ ಮಂಗಳಮುಖಿಯರಿಗೂ ರಾಖಿ ಕಟ್ಟಿ ಹಬ್ಬದ ರೀತಿಯಲ್ಲಿ ಆಚರಿಸುತ್ತೇವೆಂದು ಹೇಳಿದರು.

ಬಿಜೆಪಿ.ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಮಾತನಾಡಿ ಮಂಗಳಮುಖಿಯರಿಗೂ ಬಾಗಿನ ಅರ್ಪಿಸಿ ಅವರ ಸಂತೋಷದಲ್ಲಿ ಭಾಗಿಯಾಗಬೇಕೆನ್ನುವುದು ದೇಶದ ಪ್ರಧಾನಿ ನರೆಂದ್ರಮೋದಿರವರ ಚಿಂತನೆ. ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ. ಎಲ್ಲಾ ವರ್ಗದ ಜನರಿಗೂ ಸಮಾನತೆ ಸಿಗಬೇಕೆನ್ನುವುದು ಬಿಜೆಪಿ.ಧ್ಯೇಯ.

ಬಿಜೆಪಿ.ಸರ್ಕಾರ ಮಂಗಳಮುಖಿಯರಿಗೂ ಉತ್ತಮ ಪ್ರಶಸ್ತಿ ನೀಡಿ ಗೌರವಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಎಂದರು.

ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಪಾಲ್, ರಾಜೇಶ್ ಬುರುಡೆಕಟ್ಟೆ, ಸುರೇಶ್ ಸಿದ್ದಾಪುರ, ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಶ್ರೀಮತಿ ಶೈಲಜಾರೆಡ್ಡಿ, ಯುವ ಮುಖಂಡ ಡಾ.ಸಿದ್ದಾರ್ಥ ಗುಂಡಾರ್ಪಿ ವೇದಿಕೆಯಲ್ಲಿದ್ದರು.
ರೈತ ಮೋರ್ಚ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್, ಎಸ್.ಆರ್.ಗಿರೀಶ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಎ.ರೇಖ ಈ ಸಂದರ್ಭದಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *