ಮುಖ್ಯಮಂತ್ರಿಗಳ ತವರು ಜಿಲ್ಲೆಗೆ ಭರ್ಜರಿ ಕೊಡುಗೆ ; ಹಾವೇರಿಗೆ ನೂತನ ವಿಶ್ವವಿದ್ಯಾಲಯ – ಸವಣೂರಿಗೆ ಆಯುರ್ವೇದ ಕಾಲೇಜು ಘೋಷಣೆ

suddionenews
4 Min Read

ಹಾವೇರಿ,(ಮಾ.04) :  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  2022-23ನೇ ಸಾಲಿನ ರಾಜ್ಯ ಬಜೆಟ್ ಮಂಡಣೆ ಮಾಡಿದ್ದು, ತವರು ಜಿಲ್ಲೆಯಾದ ಹಾವೇರಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ.

ವಿಧಾನಸಭೆಯಲ್ಲಿಂದು ಸತತ ಎರಡು ಗಂಟೆ ಹದಿನೈದು ನಿಮಿಷ ಕಾಲ ಮಂಡಿಸದ ಬಜೆಟ್‍ನಲ್ಲಿ ಎಲ್ಲ ವಲಯ, ವರ್ಗಗಳಿಗೆ ತಲುಪುವ ಸರ್ವ ಸ್ಪರ್ಶಿ ಅಭಿವೃದ್ಧಿ ದೃಷ್ಟಿಕೋನದ, ಶಿಕ್ಷಣ, ಉದ್ಯೋಗ, ಸಬಲೀಕರಣ ತ್ರಿ ಸೂತ್ರಗಳ ಮಾನದಂಡಂತೆ  ಬಜೆಟ್ ಮಂಡನೆಮಾಡಿದ್ದಾರೆ. ವಿಶೇಷವಾಗಿ ಹಾವೇರಿ ಜಿಲ್ಲೆಗೆ ವಿಶಿಷ್ಟವಾದಂತಹ ಕೊಡುಗೆ ನೀಡಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಗೋವಿನಜೋಳ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಮೆಣಸು ಮತ್ತು ಇತರೆ ಸಾಂಬರ ಪದಾರ್ಥಗಳ ಗುಣಮಟ್ಟ ಹೆಚ್ಚಿಸಲು ಬ್ಯಾಡಗಿಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ, ಹಾನಗಲ್‍ನಲ್ಲಿ ಮಾವು  ಸಂಸ್ಕರಣಾ ಘಟಕ ಸ್ಥಾಪನೆ, ರಾಣೇಬೆನ್ನೂರಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರೇಷ್ಮೆ ದ್ವಿ ತಳಿ ಮೊಟ್ಟೆ ಉತ್ಪಾದಿಸಲು ಶೈತ್ಯೀಕರಿಸಲು ಶೈತ್ಯಾಗಾರ ಸ್ಥಾಪನೆ, ನಬಾರ್ಡ್ ನೆರವಿನೊಂದಿಗೆ ಹಾವೇರಿ ಜಿಲ್ಲೆಯಲ್ಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ  ಘೋಷಿಸುವುದರೊಂದಿಗೆ ಜಿಲ್ಲೆಯ ರೈತಾಪಿ ವರ್ಗಕ್ಕೆ ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಕೆಗೆ ಒತ್ತಾಸೆಯಾಗಿ ನಿಂತಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಒಂದು ಲಕ್ಷ ಲೀಟರ್ ಸಾಮಥ್ರ್ಯದ ಮೆಗಾ ಡೈರಿ ಸ್ಥಾಪನೆ, ಸಾಂಪ್ರದಾಯಿಕ ವಿವಿಗಿಂತ ಭಿನ್ನ ತಂತ್ರಜ್ಞಾನ ಬಳಕೆಯೊಂದಿಗೆ ಕಾರ್ಯನಿರ್ವಹಿಸಲು ಹಾವೇರಿಯಲ್ಲಿ ವಿನೂತನ ಮಾದರಿಯ ವಿಶ್ವವಿದ್ಯಾಲಯ ಸ್ಥಾಪನೆ ಉದ್ದೇಶಿತ ವಿಶ್ವವಿದ್ಯಾಲಯಕ್ಕೆ  ವಾರ್ಷಿಕ ಎರಡು ಕೋಟಿರೂ. ಅನುದಾನ ನೀಡುವುದಾಗಿ ಘೋಷಣೆ. ಶಿಗ್ಗಾಂವ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಉಪಕರಣಾಗಾರ  ಮತ್ತು ತರಬೇತಿ ಕೇಂದ್ರದಲ್ಲಿ ತರಬೇತುದಾರರಿಗೆ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು.

ಗ್ರಾಮೀಣ ಪ್ರದೇಶಗಳಲ್ಲಿ ಮನೆಬಾಗಿಲಿಗೆ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ಮುಖ್ಯಮಂತ್ರಿ ಆರೋಗ್ಯ ವಾಹಿನಿ ಎಂಬ ಹೊಸ ಯೋಜನೆಯಡಿ ಹಾವೇರಿಗೆ ಸಂಚಾರಿ ಕ್ಲಿನಿಕ್ ಮಂಜೂರಾತಿ,  ಹಾವೇರಿ ಜಿಲ್ಲೆ ಶಿಗ್ಗಾಂವ ಸಾರ್ವಜನಿಕ ಆಸ್ಪತ್ರೆ 250 ಹಾಸಿಗೆಗಳಿಗೆ ಮೆಲ್ದರ್ಜೆಗೆ, ಸವಣೂರಿಗೆ ಹೊಸ ಆಯುರ್ವೇದಿಕ್ ಕಾಲೇಜ್ ಸ್ಥಾಪನೆ.
ಚರ್ಮ ಕುಲಶಕರ್ಮಿಗಳ ಉತ್ತೇಜನ ಮತ್ತು ವಿನೂತನ ವಿನ್ಯಾಸ ಅಳವಡಿಕೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರದ ನೆರವಿನೊಂದಿಗೆ ಹಾವೇರಿಯಲ್ಲಿ ಸಾಮಾನ್ಯ ಸೌಲಭ್ಯ ಸಮುಚ್ಚಯಗಳನ್ನು ಸ್ಥಾಪನೆ.

ಕರ್ನಾಟಕ ರಾಜ್ಯದಲ್ಲಿ ರೈಲ್ವೆ ಸಾಂದ್ರತೆ ಹೆಚ್ಚಿಸುವ ಮೂಲಕ ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ನಿರ್ಧರಿಸಲು ಉದ್ದೇಶಿಸಿರುವ ಸರ್ಕಾರ, ಶಿವಮೊಗ್ಗ- ಶಿಕಾರಿಪುರ- ರಾಣೇಬೆನ್ನೂರ ರೈಲು ಮಾರ್ಗಕ್ಕೆ ಚಾಲನೆ ನೀಡದ್ದು, ನೂತನವಾಗಿ 55 ಕಿ.ಮೀ. ಉದ್ದ ಗದಗ-ಯಲವಿಗಿ ರೈಲು ಮಾರ್ಗವನ್ನು ಕೇಂದ್ರದ ಸಹಯೋಗದಲ್ಲಿ ರೂ.640 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಪ್ರಸ್ತಾವನೆ ಸಲ್ಲಿಸುವುದಾಗಿ ಘೋಷಿಸಲಾಗಿದೆ.

ಚೆನೈ-ಬೆಂಗಳೂರು-ಮುಂಬೈ ಕಾರಿಡಾರ ವ್ಯಾಪ್ತಿಯ ಹಾವೇರಿಯಲ್ಲಿ ಕೈಗಾರಿಕೆ ಸ್ಥಾಪಿಸಲು ಉತ್ತೇಜನ ನೀಡಲು ಘೋಷಿಸಲಾಗಿದೆ.  ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನೂತನ ಜವಳಿ ಪಾರ್ಕ್ ಸ್ಥಾಪನೆಗೆ ಘೋಷಣೆ ಮಾಡಲಾಗಿದೆ.

ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರೂ.20 ಕೋಟಿ ಘೋಷಿಸಲಾಗಿದೆ.  ಕರ್ನಾಟಕದ ಹೆಸರಾಂತ ಸಾಹಿತಿಗಳಾದ ಚಂದ್ರಶೇಖರ ಪಾಟೀಲ(ಚಂಪಾ) ಅವರ ಅಮೂಲ್ಯ ಸಾಹಿತ್ಯ ಉಳಿಸಲು ವಿಶೇಷ ಘೋಷಣೆ ಮಾಡಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ರೂ.ಎರಡು ಕೋಟಿ ವೆಚ್ಚದಲ್ಲಿ ಡಾ.ಮಹದೇವ ಬಣಕಾರ ಸಾಂಸ್ಕøತಿಕ ಭವನ ನಿರ್ಮಾಣ ಮಾಡಲು ಘೋಷಣೆ ಮಾಡಲಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ 28 ಕೋಟಿ ರೂ. ವೆಚ್ಚದಲ್ಲಿ ಬಸ್ ಘಟಕ ಮತ್ತು ಚಾಲನಾ ಕೇಂದ್ರ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನೀಟ್, ಬ್ಯಾಂಕಿಂಗ್, ಕೆ.ಎ.ಎಸ್. ಸೇರಿದಂತೆ ಸ್ಪರ್ಧಾತ್ಮ ಪರೀಕ್ಷೆ ತರಬೇತಿ ಕೇಂದ್ರ ಸ್ಥಾಪನೆ, ಸಾರ್ವಜನಿಕ ಸಹಭಾಗಿತ್ವದಲ್ಲಿ ಹಾವೇರಿ ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಿನಿ ಆಹಾರ ಪಾರ್ಕ್, ಹೋಬಳಿಗೊಂದು ಮಾದರಿ ಶಾಲೆ, ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಸ್ವಾಮಿವಿವೇಕಾನಂದ ಯುವಕರ ಸ್ವ ಸಹಾಯ ಗುಂಪು, ಬೀದಿಬದಿ ವ್ಯಾಪಾರಿಗಳಿಗೆ ವಿತರಿಸಿದ ಎಲ್ಲ ಸಾಲಗಳ ಮುದ್ರಾಂಕ ಶುಲ್ಕ ವಿನಾಯಿತಿ,  ಯಶಸ್ವಿ ಯೋಜನೆ  ಪುನರಾರಂಭ, ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳನ್ನು ಗುರುತಿಸಿ ಅಭಿವೃದ್ಧಿಗೆ ಅನುದಾನ,  ರೈತ ಶಕ್ತಿ ಯೋಜನೆಯಡಿ ರೈತರಿಗೆ ಡಿಸೈಲ್ ಸಹಾಯಧನ, ಹಾಲು ಉತ್ಪಾದಕರ ಬ್ಯಾಂಕ್ ಸ್ಥಾಪನೆ,  ನರೇಗಾದಡಿ ಕ್ರೀಡಾ ಅಂಕಣ ಸ್ಥಾಪನೆ,  ಗ್ರಾಮ ಪಂಚಾಯತಿಗಳಿಗೆ ಆರೋಗ್ಯ ಕಿಟ್ ವಿತರಿಸುವ ಪಂಚಾಯತ್ ಆರೋಗ್ಯ ಯೋಜನೆ, ಗ್ರಾಮ ಪಂಚಾಯತ್ ಕೆರೆಗಳ ಸರ್ವೇ ನಡೆಸಿ ಅಭಿವೃದ್ಧಿ, ಅಸ್ಮಿತೆ ಯೋಜನೆಯಡಿ ಹೋಬಳಿ, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಮಹಿಳಾ ಉತ್ಪನ್ನಗಳಿಗೆ ಮಾರಾಟ ಮೇಳಗಳ ಆಯೋಜನೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ  ನಡೆಸುವ  ಬಹುವಿಧ ವಸತಿ ಶಾಲೆಗಳನ್ನು ಉನ್ನತೀಕರಿಸಿ ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಗಳೆಂದು ಮರು ನಾಮಕರಣಮಾಡಿ ಸಿಬಿಎಸ್‍ಸಿ ಮಾನ್ಯ ಪಡೆಯಲು ಕ್ರಮ.

ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆ ಆರಂಭ,  ಎಲ್ಲೋ ಬೋರ್ಡ್ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ, ವಕೀಲರಿಗೆ ಆರೋಗ್ಯ ಸೌಲಭ್ಯ,  ಗ್ರಾಮ ಸಹಾಯಕರಿಗೆ ಗೌರವಧನ ಒಂದು ಸಾವಿರಕ್ಕೆ ಹೆಚ್ಚಳ, ಆಸಿಡ್ ದಾಳಿಗೆ ಒಳಗಾದ ಮಹಿಳೆಯ ಮಾಸಿಕ ಪಿಂಚಣಿ ಮೂರು ಸಾವಿರದಿಂದ ರೂ.10 ಸಾವಿರಕ್ಕೆ ಹೆಚ್ಚಳ, ಸಾಮಾಜಿಕ ಭದ್ರತಾ ಯೋಜನೆಯಡಿ  ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮಾಸಿಕ ಪಿಂಚಣಿ ರೂ.600 ರಿಂದ ರೂ.800ಕ್ಕೆ ಹೆಚ್ಚಳ, ಅಕ್ಷರ ದಾಸೋಹದಡಿ ಬಿಸಿಯೂಟ ತಯಾರಿಕರ ಗೌರವಧನ ಒಂದು ಸಾವಿರ ಹೆಚ್ಚಳ ಸೇರಿದಂತೆ ಹಲವು ನೆರವಿನ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *