Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವೈದ್ಯಕೀಯ ವಿದ್ಯಾರ್ಥಿನಿಯ ಕೈಯಲ್ಲಿ ಅರಳಿದ ಕಲೆಯ ಕನಸು : ಬಿಳಿ ಹಾಳೆಗೆ ಜೀವ ತುಂಬುವ ದೀಪಿಕಾ ಅವರ ಪ್ರೇರಣಾದಾಯಕ ಪಯಣ..!

---Advertisement---

ಸುದ್ದಿಒನ್, ಚಿತ್ರದುರ್ಗ, ಜೂನ್‌. 09 : ಒಂದು ಕೈಯಲ್ಲಿ ರೋಗಿಗಳಿಗೆ ಬೆಳಕಾಗುವ ವೈದ್ಯಕೀಯ ಶಿಕ್ಷಣದ ಪುಸ್ತಕಗಳು, ಮತ್ತೊಂದು ಕೈಯಲ್ಲಿ ಬಿಳಿ ಹಾಳೆಯ ಮೇಲೆ ಭಾವನೆಗಳನ್ನು ಜೀವಂತಗೊಳಿಸುವ ಡ್ರಾಯಿಂಗ್ ಪೆನ್ಸಿಲ್‌ಗಳು. ಇದು ಚಿತ್ರದುರ್ಗ ಜಿಲ್ಲೆಯ ಯುವ ಪ್ರತಿಭೆ ದೀಪಿಕಾ ಅವರ ಅಪರೂಪದ ವ್ಯಕ್ತಿತ್ವ. ಕೇವಲ ಓದಿನ ಕಡೆಗಷ್ಟೇ ಗಮನ ಹರಿಸದೆ, ಸ್ವಯಂ ಕಲಿಕೆಯ ಮೂಲಕ ಅದ್ಭುತ ಕಲಾವಿದೆಯಾಗಿ ಮೂಡಿಬರುತ್ತಿರುವ ದೀಪಿಕಾ ಅವರ ಸಾಧನೆ ನಿಜಕ್ಕೂ ಯುವ ಪೀಳಿಗೆಗೆ ಮಾದರಿ.

(ಮೊಬೈಲ್ ಸಂಖ್ಯೆ 63609 22402 )

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೇರೆಕೊಂಡಾಪುರ ಗ್ರಾಮದ ಅಂಬರೀಶ್ ಆಚಾರಿ ಮತ್ತು ರಾಜೇಶ್ವರಿ ದಂಪತಿಗಳ ಪುತ್ರಿ ದೀಪಿಕಾ. ಇವರು 1 ರಿಂದ 7 ನೇ ತರಗತಿಯವರೆಗೆ ಕೆರೆಕೊಂಡಾಪುರ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ನಂತರ ರಾಂಪುರದಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿದ್ದಾರೆ. ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿ. ಆದರೆ ಅವರ ವ್ಯಕ್ತಿತ್ವದ ಮತ್ತೊಂದು ಮುಖ ಕಲೆಯೊಂದಿಗೆ ಗಾಢವಾಗಿ ಬೆಸೆದುಕೊಂಡಿದೆ. ಓದಿನ ಜೊತೆಗೆ ಡ್ರಾಯಿಂಗ್ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಈ ಯುವ ಪ್ರತಿಭೆ, ಸ್ವಯಂ ಕಲಿಕೆಯ ಮೂಲಕ ಕಲಾವಿದೆಯಾಗಿ ಗುರುತಿಸಿಕೊಳ್ಳುವತ್ತ ಹೆಜ್ಜೆ ಹಾಕಿದ್ದಾರೆ.


ಪ್ರಸ್ತುತ ಚಿತ್ರದುರ್ಗದ ಬಿಸಿಎಂ ಹಾಸ್ಟೆಲ್‌ ನಲ್ಲಿ ವಾಸವಾಗಿರುವ ದೀಪಿಕಾ, ಪ್ಯಾರಾಮೆಡಿಕಲ್ ಕೋರ್ಸ್‌ನ ಆಪ್ತಮಾಲಜಿ ವಿಭಾಗದಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ತರಬೇತಿಯನ್ನೂ ಪಡೆಯುತ್ತಿದ್ದಾರೆ. ವೈದ್ಯಕೀಯ ಶಿಕ್ಷಣದ ಒತ್ತಡದ ನಡುವೆಯೂ ತಮ್ಮ ಕಲಾಸಕ್ತಿಯನ್ನು ಕೈಬಿಡದೆ ಮುನ್ನಡೆಯುತ್ತಿರುವುದು ವಿಶೇಷ. ದೀಪಿಕಾ ಅವರಿಗೆ ಡ್ರಾಯಿಂಗ್ ಮೇಲಿನ ಆಸಕ್ತಿ ಹೈಸ್ಕೂಲ್ ದಿನಗಳಲ್ಲೇ ಆರಂಭವಾಯಿತು. ಶಾಲೆಯ ಶಿಕ್ಷಕರು ಬಿಡಿಸುತ್ತಿದ್ದ ಚಿತ್ರಗಳು ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದವು. ಆ ಪ್ರೇರಣೆಯೇ ಮುಂದೆ ಕಲೆಯತ್ತ ಅವರನ್ನು ಸೆಳೆಯಿತು. ಅಲ್ಲಿಂದ ಆರಂಭವಾದ ಆಸಕ್ತಿ ಇಂದು ಅವರ ಜೀವನದ ಪ್ರಮುಖ ಭಾಗವಾಗಿದೆ.

ಗಮನಾರ್ಹ ಸಂಗತಿಯೆಂದರೆ, ದೀಪಿಕಾ ಯಾವುದೇ ವೃತ್ತಿಪರ ಡ್ರಾಯಿಂಗ್ ತರಬೇತಿ ಪಡೆದಿಲ್ಲ. ಯೂಟ್ಯೂಬ್ ವಿಡಿಯೋಗಳು, ಇನ್‌ಸ್ಟಾಗ್ರಾಂ ರೀಲ್ಸ್ ಮತ್ತು ಇತರ ಕಲಾವಿದರ ಕಲಾಕೃತಿಗಳನ್ನು ಗಮನಿಸುವ ಮೂಲಕವೇ ಅವರು ಡ್ರಾಯಿಂಗ್ ಕಲಿತಿದ್ದಾರೆ. ಸ್ವಯಂ ಅಭ್ಯಾಸ, ಪರಿಶ್ರಮ ಮತ್ತು ನಿರಂತರ ಕಲಿಕೆಯ ಮನೋಭಾವವೇ ಅವರ ಪ್ರತಿಭೆಯನ್ನು ಬೆಳೆಸಿದೆ.ಸಮಯ ಸಿಕ್ಕಾಗಲೆಲ್ಲಾ ಪೆನ್ಸಿಲ್ ಸ್ಕೆಚ್, ಕಲರ್ ಡ್ರಾಯಿಂಗ್ ಮತ್ತು ಕ್ರಿಯೇಟಿವ್ ಆರ್ಟ್‌ಗಳಲ್ಲಿ ತೊಡಗಿಕೊಳ್ಳುವ ಅವರು, ಮುಖ್ಯವಾಗಿ ಪ್ರಕೃತಿ ಸೌಂದರ್ಯ ಮತ್ತು ವ್ಯಕ್ತಿಚಿತ್ರಗಳನ್ನು ಚಿತ್ರಿಸುವುದರಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ಕಲಾಕೃತಿಗಳಲ್ಲಿ ಸೂಕ್ಷ್ಮತೆ ಮತ್ತು ನೈಜತೆ ಎದ್ದು ಕಾಣುತ್ತದೆ.

ಕಲಾಕೃತಿಗಳನ್ನು ರಚಿಸಲು ದೀಪಿಕಾ ವಿವಿಧ ರೀತಿಯ ಡ್ರಾಯಿಂಗ್ ಪೆನ್ಸಿಲ್‌ಗಳು, ಚಾರ್ಕೋಲ್ ಪೆನ್ಸಿಲ್‌ಗಳು, ಎಲೆಕ್ಟ್ರಿಕ್ ಎರೇಸರ್ ಹಾಗೂ ರಿಟ್ರಾಕ್ಟಬಲ್ ಎರೇಸರ್ ಬಳಸುತ್ತಾರೆ. ಉತ್ತಮ ಗುಣಮಟ್ಟದ Brustro A3 ಗಾತ್ರದ ಡ್ರಾಯಿಂಗ್ ಪೇಪರ್‌ನಲ್ಲಿ ತಮ್ಮ ಕಲ್ಪನೆಗಳಿಗೆ ಜೀವ ತುಂಬುತ್ತಾರೆ. ಟಿಷ್ಯೂ ಪೇಪರ್, ಮೇಕಪ್ ಬ್ರಶ್ ಹಾಗೂ ಬಡ್ಸ್‌ಗಳ ಸಹಾಯದಿಂದ ಚಿತ್ರಗಳಿಗೆ ವಿಶೇಷ ಫಿನಿಶಿಂಗ್ ನೀಡುತ್ತಾರೆ.


ಅವರ ಕಲಾಕೃತಿಗಳಿಗೆ ಉತ್ತಮ ಬೇಡಿಕೆಯೂ ಇದೆ. ದೀಪಿಕಾ ತಮ್ಮ ಚಿತ್ರಗಳನ್ನು ಮಾರಾಟ ಮಾಡುತ್ತಿದ್ದು, ಕಲಾಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಆರ್ಟ್‌ವರ್ಕ್‌ಗಳನ್ನು ಹಂಚಿಕೊಳ್ಳುವ ಮೂಲಕ ಹೆಚ್ಚಿನ ಜನರನ್ನು ತಲುಪುತ್ತಿದ್ದಾರೆ. ಅಲ್ಲಿಯೂ ಅವರಿಗೆ ಪ್ರೋತ್ಸಾಹ ಮತ್ತು ಮೆಚ್ಚುಗೆ ದೊರೆಯುತ್ತಿದೆ.

 

ಕಲೆಯ ಮೇಲಿನ ಅಪಾರ ಪ್ರೀತಿಯ ನಡುವೆಯೂ ದೀಪಿಕಾ ಅವರ ಮನಸ್ಸಿನಲ್ಲಿ ಇನ್ನೂ ಒಂದು ದೊಡ್ಡ ಕನಸಿದೆ. ಅದು ಫೈನ್ ಆರ್ಟ್ಸ್ ಪದವಿ (BFA) ಮಾಡುವ ಕನಸು. ಆರ್ಥಿಕ ಅಡಚಣೆಗಳಿಂದಾಗಿ ಸದ್ಯಕ್ಕೆ ಆ ಕನಸು ನನಸಾಗದಿದ್ದರೂ, ಅದನ್ನು ಸಾಧಿಸುವ ವಿಶ್ವಾಸವನ್ನು ಅವರು ಕಳೆದುಕೊಂಡಿಲ್ಲ. ಒಂದು ದಿನ ವೃತ್ತಿಪರ ಕಲಾವಿದೆಯಾಗಿ ಗುರುತಿಸಿಕೊಂಡು ತಮ್ಮ ಕಲೆಯ ಮೂಲಕ ಸಮಾಜಕ್ಕೆ ಪ್ರೇರಣೆಯಾಗಬೇಕು ಎಂಬ ಗುರಿಯನ್ನು ಅವರು ಹೊಂದಿದ್ದಾರೆ.


ಯಾವುದೇ ಸೌಲಭ್ಯಗಳಿಲ್ಲದ ಗ್ರಾಮೀಣ ಹಿನ್ನೆಲೆಯಿಂದ ಬಂದು, ಕೇವಲ ಸ್ವಯಂ ಪ್ರಯತ್ನದಿಂದ ಕಲಾ ಜಗತ್ತಿನಲ್ಲಿ ತನ್ನದೇ ಆದ ಮುದ್ರೆ ಒತ್ತುತ್ತಿರುವ ದೀಪಿಕಾ ಅವರ ಕಥೆ ನಮಗೆಲ್ಲರಿಗೂ ಕಲಿಸುವ ಪಾಠ ಒಂದೇ ಅವಕಾಶಗಳು ಕಡಿಮೆ ಇರಬಹುದು, ಆದರೆ ಆಸಕ್ತಿ, ಪರಿಶ್ರಮ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಕನಸುಗಳನ್ನು ನನಸಾಗಿಸಿಕೊಳ್ಳಬಹುದು ಎಂಬುದಕ್ಕೆ ಅವರು ಜೀವಂತ ಉದಾಹರಣೆಯಾಗಿದ್ದಾರೆ.
ವೈದ್ಯಕೀಯ ಶಿಕ್ಷಣದ ಜೊತೆಗೆ ಕಲಾ ಲೋಕದಲ್ಲೂ ಹಾರಡುತ್ತಿರುವ ಈ ‘ಚಿತ್ರದುರ್ಗದ ಕಲೆಯ ಚದುರೆ’ಗೆ ಶುಭ ಹಾರೈಕೆಗಳು!

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now