ದಾವಣಗೆರೆ: ಗುರು ದೇವರಿಗೆ ಸಮಾನ. ಅವರಿಗೆ ತಲೆ ಬಾಗಿ ನಮಿಸಿದರೆ ಸರಸ್ವತಿಯ ಆಶೀರ್ವಾದ ವಿದ್ಯಾರ್ಥಿಗೆ ಸಿಗದೆ ಇರದು. ಆದ್ರೆ ಅಂಥ ಮಹಾನ್ ಗುರುಗಳನ್ನೇ ಅವಮಾನಿಸೋದು ಎಷ್ಟರಮಟ್ಟಿಗೆ ಸರಿ ಅಲ್ವಾ.. ಅಂಥದ್ದೊಂದು ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿಗಳಲ್ಲಿ ತುಂಟತನ ಇರೋದು ಸಹಜ. ಆದ್ರೆ ಆ ತುಂಟತನ ಶಿಕ್ಷಕರಿಗೆ ಖುಷಿ ಕೊಡಬೇಕೆ ವಿನಃ ನೋವು ಕೊಡಬಾರದು. ಈ ಶಾಲೆಯ ವಿದ್ಯಾರ್ಥಿಗಳು ಮಾಡಿದ ತಪ್ಪು ಅಂತಿದ್ದಲ್ಲ. ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಕೋಪ ನೆತ್ತಿಗೇರುತ್ತೆ. ಯಾಕಂದ್ರೆ ಹಿರಿಯ ಶಿಕ್ಷಕರೊಬ್ಬರಿಗೆ ಮಾಡ ಬಾರದ ರೀತಿಯಲ್ಲಿ ಅವಮಾನ ಮಾಡಿದ್ದಾರೆ.
ಡಸ್ಟ್ ಬಿನ್ ಶಿಕ್ಷಕರ ತಲೆಗೆ ಹಾಕಿದ್ದಾರೆ. ಕುಣಿದು ಕೀಟಲೆ ಮಾಡಿದ್ದಾರೆ. ಇಷ್ಟೆಲ್ಲ ಮಾಡಿದ್ರು ಆ ಶಿಕ್ಷಕ ಪ್ರಕಾಶ್ ಎಂಬುವವರಿಗೆ ಮಾತ್ರ ಮಕ್ಕಳ ಮೇಲೆ ಕೋಪ ಬಂದಿಲ್ಲ. ಸಮಾಧಾನವಾಗಿಯೇ ಮಾತನಾಡಿದ್ದಾರೆ. ಈ ಘಟನೆ ನಡೆದಿರೋದು ಡಿಸೆಂಬರ್ 3 ರಂದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹತ್ತನೇ ತರಗತಿ ನಾಲ್ವರು ವಿದ್ಯಾರ್ಥಿಗಳಿಂದ ಈ ಘಟನೆ ನಡೆದಿದೆ. ಶಿಕ್ಷಕ ಪ್ರಕಾಶ್ ಗೆ ರಿಟೈಡ್ ಆಗಲು ಇನ್ನು ಒಂದು ವರ್ಷ ಬಾಕಿ ಇದೆ. ಜೊತೆಗೆ ಅವರಿಗೆ ಹೃದಯ ಸಂಬಂಧಿ ಕಾಯಿಲೆಯೂ ಇದೆ. ಹೀಗಿರುವಾಗ ಮಕ್ಕಳು ಈ ರೀತಿಯೆಲ್ಲಾ ಮಾಡೋದಾ..? ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ವಿದ್ಯಾರ್ಥಿಗಳನ್ನ ಅಮಾನತು ಮಾಡಬೇಕೆಂಬ ಮಾತುಗಳು ಕೇಳಿ ಬಂದಿತ್ತು. ಈ ಬೆನ್ನಲ್ಲೇ ವಿದ್ಯಾರ್ಥಿಗಳೆಲ್ಲಾ ಆ ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಗುರುಗಳ ಮನಸ್ಸು ಗೊತ್ತಲ್ವಾ ಅವರದು ಕ್ಷಮಿಸಿದ್ದಾರೆ. ಆದ್ರೆ ಯಾವುದೇ ವಿದ್ಯಾರ್ಥಿಗಳು ಮತ್ತೆಂದು ಇಂಥ ತಪ್ಪನ್ನು ಮಾಡದಿರಿ.