ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ಡಿ.04): ಜಾತಿ, ಮತ, ಪಂಥ, ಭಾಷೆ, ಲಿಂಗಭೇದವಿಲ್ಲದೆ ಮತದಾರರು ನನ್ನನ್ನು ಆಯ್ಕೆ ಮಾಡಿರುವುದರಿಂದ ಕನ್ನಡ ಸಾಹಿತ್ಯ ಪರಿಷತ್‍ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಸಂಕಲ್ಪ ತೊಡುವುದಾಗಿ ವಿಜಯಪುರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಹಾಸಿಂಪೀರ್ ವಾಲೇಕರ್ ವಾಗ್ದಾನ ಮಾಡಿದರು.
ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗೆ ಶುಕ್ರವಾರ ಭೇಟಿ ನೀಡಿ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್‍ರವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು
ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಕೆಲಸ ಮಾಡುವ ಹಂಬಲ ಹೊಂದಿದ್ದ ನನಗೆ ಈ ಬಾರಿಯ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲಾ ಮಠಾಧೀಶರು, ಬ್ರಹ್ಮಕುಮಾರಿಯವರು ಬೆಂಬಲವಾಗಿ ನಿಂತರು. ಜೊತೆಗೆ ಪ್ರಜ್ಞಾವಂತ ಮತದಾರರು ನನ್ನನ್ನು ಆಶೀರ್ವದಿಸಿ ಗೆಲ್ಲಿಸಿದ್ದಾರೆ.
ಹಿಂದಿನವರು ಕನ್ನಡ ಸಾಹಿತ್ಯದ ಯಾವುದೇ ಕಾರ್ಯಕ್ರಮಗಳಿಗೆ ಸ್ವಾಮೀಜಿಗಳನ್ನು ಆಹ್ವಾನಿಸದೆ ಕಡೆಗಣಿಸುತ್ತಿದ್ದರು. ಈಗ ನನ್ನ ಅಧಿಕಾರವಧಿಯಲ್ಲಿ ಕಸಾಪ.ಚಟುವಟಿಕೆಗಳಲ್ಲಿ ವಿಜಯಪುರ ಜಿಲ್ಲೆಯ ಎಲ್ಲಾ ಮಠಾಧೀಶರುಗಳನ್ನು ಜೊತೆಯಲ್ಲಿರಿಸಿಕೊಳ್ಳುತ್ತೇನಲ್ಲದೆ ಮಕ್ಕಳ ಸಾಹಿತ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದರು.
ತಾಯಿ ಭಾಷೆ ಜಾನಪದಕ್ಕೆ ಒತ್ತು ಕೊಡುತ್ತೇನೆ. ಬಾಯಿಂದ ಬಾಯಿಗೆ ಹರಡುವ ಜಾನಪದವನ್ನು ಪುಸ್ತಕ ರೂಪದಲ್ಲಿ ಹೊರತರುವ ಚಿಂತನೆಯಿದೆ. ವಿಜಯಪುರ ಜಿಲ್ಲೆಯ ಹದಿಮೂರು ತಾಲ್ಲೂಕುಗಳಲ್ಲಿ ಸಮ್ಮೇಳನ ನಡೆಸಿ ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತೇನೆ. ದತ್ತಿ ಉಪನ್ಯಾಸ, ವಿಚಾರ ಸಂಕಿರಣಕ್ಕೆ ಆದ್ಯತೆ ನೀಡಲಾಗುವುದು. ಒಂದೊಂದು ದತ್ತಿಗಳನ್ನು ಪ್ರತ್ಯೇಕವಾಗಿ ಮಾಡಲಾಗುವುದು.
ಜಿಲ್ಲೆಯ ಹದಿಮೂರು ತಾಲ್ಲೂಕಿನಲ್ಲಿ ಬೇರೆ ಬೇರೆ ಜಾತಿಯ ಪ್ರತಿಭಾವಂತರನ್ನು ಹುಡುಕಿ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವುದು ನನ್ನ ಪರಿಕಲ್ಪನೆ. ವರ್ಷಕ್ಕೊಮ್ಮೆ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಿ ಪ್ರತಿ ಜಿಲ್ಲೆಯಿಂದ ಐವತ್ತು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಉತ್ತಮ ಚಿಂತನೆ, ವಿಚಾರ ಗೋಷ್ಟಿಗಳನ್ನು ಏರ್ಪಡಿಸಲಾಗುವುದು ಎಂದರು.
ಹಾಸಿಂಪೀರ್ ವಾಲೇಕರ್‍ರವರನ್ನು ಸನ್ಮಾನಿಸಿ ಮಾತನಾಡಿದ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್ ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ತತ್ವ ಆದರ್ಶಗಳನ್ನು ಪಾಲಿಸಿಕೊಂಡು ಕಾಯಕದಲ್ಲಿಯೇ ದೇವರನ್ನು ಕಾಣುತ್ತಿರುವ ಡಾ.ಹಾಸಿಂಪೀರ್ ವಾಲೇಕರ್‍ರವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ವಿಜಯಪುರ ಜಿಲ್ಲೆಯ ಸಾಹಿತ್ಯಾಸಕ್ತ ಮತದಾರರು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಜಯಶಾಲಿಯನ್ನಾಗಿಸಿದ್ದಾರೆ. ನಿಮ್ಮ ಸೇವೆ ನಿರಂತರವಾಗಿರಲಿ ಎಂದು ಹಾರೈಸಿದರು.
ಜಾನಪದ ಹಾಡುಗಾರ ಕಾಲ್ಕೆರೆ ಚಂದ್ರಪ್ಪ, ಡಿಜಿಟಲ್ ವಲ್ಡ್ಸ್ ನ ದಾದಾಪೀರ್, ತಿಪ್ಪೇಸ್ವಾಮಿ, ಜಿ.ಬಸವರಾಜಪ್ಪ ಪಿಳ್ಳೆಕೆರನಹಳ್ಳಿ, ನಾಗರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.