ಮಂಡ್ಯ: ಇವತ್ತು ಕೆಆರ್ಎಸ್ ಜಲಾಶಯಕ್ಕೆ ಸಿಎಂ ಬಾಗಿನ ಅರ್ಪಿಸಿದ್ದಾರೆ. ಈ ವೇಳೆ ಇಡೀ ಜಲಾಶಯ ತಳಿರು ತೋರಣದಿಂದ ಕಂಗೊಳಿಸುತ್ತಿತ್ತು. ಹೂಗಳಿಂದ ಅಲಂಕಾರ ಮಾಡಿ ಮಧುವಣಗಿತ್ತಿಯಂತೆ ಸಿಂಗಾರ ಮಾಡಲಾಗಿತ್ತು. ಈ ವೇಳೆ ಮುಖ್ಯ ದ್ವಾರದಲ್ಲಿ ಹಾಕಿದ್ದು ಫೋಟೋವೊಂದು ಎಲ್ಲರ ಗಮನ ಸೆಳೆದಿತ್ತು.
ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಕಲ ಜವಬ್ದಾರಿಯನ್ನು ಅಚ್ವುಕಟ್ಟಾಗಿ ನಿಭಾಯಿಸಿದ್ರು. ಅಂತ್ಯಸಂಸ್ಕಾರದ ದಿನ ಕೊನೆಯದಾಗಿ ಅಪ್ಪು ದರ್ಶನ ಮಾಡಿದ ಸಿಎಂ ಬೊಮ್ಮಾಯಿ, ಅಪ್ಪು ಹಣೆಗೆ ಮುತ್ತನ್ನಿಟ್ಟರು. ಆ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಅದೇ ಫೋಟೋವನ್ನ ಬ್ಯಾನರ್ ಮಾಡಿಸಿ, ಮಾತೃ ಹೃದಯ ಎಂದು ಕ್ಯಾಪ್ಶನ್ ಕೊಟ್ಟು ಮುಖ್ಯದ್ವಾರದಲ್ಲಿ ಹಾಕಲಾಗಿದೆ. ಆ ಫೋಟೊ ನೋಡಿದ ಸಿಎಂ ಬೊಮ್ಮಾಯಿ ಅವರಿಗೂ ಆ ಕ್ಷಣ ಅಪ್ಪು ಕಣ್ಮುಂದೆ ಬಂದಿದ್ದಾರೆ. ಆದ್ರೆ ಮುಂದಿನ ಶುಭ ಕಾರ್ಯಕ್ಕೆ ಅಡಿ ಇಟ್ಟು, ಕೆಆರ್ಎಸ್ ಹಾಗೂ ಕಬಿನಿಗೆ ಬಾಗಿನ ಅರ್ಪಿಸಿದ್ದಾರೆ.
ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿರುವ ಜಲಾಶಯಗಳು ತುಂಬಿವೆ. ಜಲಾಶಯಗಳಿಗೆ ಬಾಗಿನ ಅರ್ಪಿಸುವುದೇ ಖುಷಿಯ ವಿಚಾರ. ಇದು ರೈತರಿಗೆ ಖುಷಿಯಾದರೆ ನಮಗೆ ಅದು ಸಂತಸವೇ ಸರಿ. ಕಬಿನಿ ಜಲಾಶಯದ ಮುಂದೆ ಬೃಂದಾವನ ಮಾಡುವ ಪ್ರಸ್ತಾವನೆ ಇದೆ ಅದರ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದಿದ್ದಾರೆ.
ಇದೇ ವೇಳೆ ಅಪ್ಪು ವಿಚಾರಕ್ಕೆ ಸಿದ್ದರಾಮಯ್ಯ ನವರು ಮಾಡಿರುವ ಟ್ವೀಟ್ ಬಗ್ಗೆ ಮಾತನಾಡಿದ್ದು, ಪುನೀತ್ ರಾಜ್ ಕುಮಾರ್ ಬಗ್ಗೆ ಅಪಾರ ಗೌರವವಿದೆ. ಪುನೀತ್ ರಾಜ್‍ಕುಮಾರ್ ಎಲ್ಲಾ ಗೌರವಕ್ಕೂ ಅರ್ಹರು. ಸಿದ್ದರಾಮಯ್ಯ ನವರು ಪ್ರಸ್ತಾವನೆ ಸಲ್ಲಿಸಲಿ. ಸರ್ಕಾರ ಕೂಡ ಸಮಯ ಸಂದರ್ಭ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೆ. ಪುನೀತ್ ಬಗ್ಗೆ ನಮಗೂ ಅಪಾರ ಗೌರವವಿದೆ ಎಂದಿದ್ದಾರೆ.