ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಈಗ ನೀಡುವುದಕ್ಕಿಂತ ಎರಡರಷ್ಟು ಭೂಮಿ ನೀಡುವುದು ನನ್ನ ಸರ್ಕಾರದ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ7,600 ಕೋಟಿ ರೂ. ಅನ್ನು ಈ ಸಮುದಾಯದ ಕಲ್ಯಾಣಕ್ಕೆ ನೀಡಲಾಗಿದೆ ಎಂದರು.
ಇನ್ನೂ ಎಷ್ಟು ಹಣ ನೀಡಲಾಗಿದೆ ಎನ್ನುವುದಕ್ಕಿಂತ ಇದನ್ನು ಹೇಗೆ? ಬಳಕೆ ಮಾಡಲಾಗಿದೆ ಎನ್ನುವುದು ಮುಖ್ಯ. ಹೆಚ್ಚಿನ ಸಂಖ್ಯೆಯಲ್ಲಿ ಇವರಿಗೆ ಭೂ ಒಡೆತನ ನೀಡಬೇಕೆನ್ನುವುದು ಸರ್ಕಾರದ ಆಶಯವಾಗಿದೆ.ಹಾಗಾಗಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ವಿಚಾರವಾಗಿ ಸೂಚನೆ ನೀಡಿದ್ದೇನೆ.
ಇದರಿಂದ ಮಾತ್ರ ಸಮುದಾಯವನ್ನು ಮುಂದಿನ ಜನಾಂಗಕ್ಕೆ ಮುಂಚೂಣಿಯಲ್ಲಿ ಕರೆದೊಯ್ಯಲು ಸಾಧ್ಯ ಎಂಬುದನ್ನು ನಾನು ನಂಬಿದ್ದೇನೆ ಎಂದರು.ಈ ಎರಡು ಸಮುದಾಯದ ಹೆಣ್ಣು ಮಕ್ಕಳಿಗೆ ಸಿಗಬೇಕಾದ ನಿಜವಾದ ಪ್ರೋತ್ಸಾಹ ಇನ್ನು ಸಿಕ್ಕಿಲ್ಲ ಎನ್ನುವುದು ನನ್ನ ಭಾವನೆ. ಇವರನ್ನ ಆರ್ಥಿಕವಾಗಿ ಸಬಲರನ್ನಾಗಿಸುವ ವೃತ್ತಿಗೆ ದೊಡ್ಡ ಪ್ರಮಾಣದಲ್ಲಿ ಸಹಾಯ, ಸಹಕಾರ ನೀಡಬೇಕು. ಈ ಸಮುದಾಯದ ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾದರೆ ಸಮಾಜದಲ್ಲಿ ಪರಿವರ್ತನೆಯಾಗಲಿದೆ. ಈ ನಿಟ್ಟಿನಲ್ಲಿ ನನ್ನ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಸಿಎಂ ಭರವಸೆ ನೀಡಿದರು.
ಜಗತ್ತಿನ ಮನುಕುಲದ ಮನಸ್ಸನ್ನೇ ಪರಿವರ್ತಿಸಿದ ಮಹಾನ್ ಸಾಧಕ ವಾಲ್ಮೀಕಿ. ಒಂದು ಮಹತ್ವದ ಮೂಲಭೂತ ಬದಲಾವಣೆ ದೇಶ, ಸೈನ್ಯ ಒಂದು ಸಮುದಾಯದಿಂದ ಆಗಿಲ್ಲ. ಆದರೆ, ಕೆಲ ವ್ಯಕ್ತಿಗಳಿಂದ ಆಗಿದೆ. ಇಂತಹ ವ್ಯಕ್ತಿತ್ವಗಳಿಂದ ದೇಶದಲ್ಲಿ ಮಹತ್ವದ ಮೂಲಭೂತ ಬದಲಾವಣೆ ಆಗಿವೆ. ಈ ಭೂಮಿಯ ಮೇಲೆ ಸೂರ್ಯ ಚಂದ್ರ ಇರುವವರೆಗೂ ಮಹರ್ಷಿ ವಾಲ್ಮೀಕಿಯವರ ಕೃತಿ ಹಾಗೂ ಜೀವನ ಕ್ರಮ ಜೀವಂತವಾಗಿ ಉಳಿಯಲಿದೆ ಎಂದರು.’ರಾಮಾಯಣ’ ಒಂದು ಅದ್ಭುತ ಕಾವ್ಯ ರಚನೆ. ಒಂದು ಮೌಲ್ಯವನ್ನು ಇದು ಹೇಳುತ್ತದೆ ಎಂದು ತಿಳಿಸಿದರು.