ಉಡುಪಿ: ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿರುವುದಲ್ಲದೆ, ಸಾವು, ನೋವುಗಳು ಜಾಸ್ತಿಯಾಗ್ತಾ ಇದೆ. ಉಡುಪಿಯಲ್ಲಿನ ಮಹಾಮಳೆಗೆ ಅರ್ಚಕರು ಸೇರಿದಂತೆ ಮೂರು ಜನ ಸಾವನ್ನಪ್ಪಿದ್ದಾರೆ.
ಮಳೆಯಿಂದಾಗಿ ಬೈಕ್ ಸ್ಕಿಡ್ ಆಗಿ, ನೀರಿಗೆ ಬಂದ ದಿವಾಕರ್ ಎಂಬಾತ ಸಾವನ್ನಪ್ಪಿದ್ದಾರೆ. ಕುಂದಾಪುರದ ತೆಕ್ಕಟೆ ಬಳಿ ಈ ಘಟನೆ ನಡೆದಿದೆ. ಬೈಂದೂರು ಕಮಲಶಿಲೆ ಬಳಿ ಶೇಷಾದ್ರಿ ಐತಾಳ್ ಎಂಬುವವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನದಿಗೆ ಬಿದ್ದ ಸುಮಾರು ನೂರು ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಕಾರವಾರದಲ್ಲಿ ಮನೆಯ ಅಂಗಳದಲ್ಲಿ ನಿಂತಿದ್ದ ನೀರಿನಲ್ಲಿ ಜಾರಿ ಬಿದ್ದು, ವೃದ್ಧೆ ಸಾವನ್ನಪ್ಪಿದ್ದಾರೆ.
ಕರಾವಳಿ ಭಾಗದ ಮೂರೂ ಜಿಲ್ಲೆಗಳಲ್ಲಿ ಮಳೆ ಚುರುಕಾಗಿದೆ. ಉಡುಪಿಯಲ್ಲಿ ಎಡೆಬಿಡದೆ ಮಳೆ ಬರುತ್ತಿದ್ದು, ಸ್ವರ್ಣ, ಸೀತಾ ಹಾಗೂ ಶಾಂಭವಿ ನದಿಗಳು ಮೈದುಂಬಿ ಹರಿಯುತ್ತಿವೆ. ಸ್ವರ್ಣ ನದಿಗೆ ಹಿರಿಯಡ್ಕದಲ್ಲಿ ಕಟ್ಟಿರುವ ಬಜೆ ಡ್ಯಾಮ್ ಭರ್ತಿಯಾಗಿದ್ದು, ಡ್ಯಾಂನಿಂದ 15 ಟಿಎಂಸಿ ನೀರು ಹೊರಕ್ಕೆ ಬಿಡಲಾಗುತ್ತಿದೆ. ನದಿ ತಟದಲ್ಲಿರುವ ಬೈಂದೂರು, ಕುಂದಾಪುರ, ಕಾರ್ಕಳ ಭಾಗದ ನದಿ ತಟದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.