ಬೆಂಗಳೂರು: ಈ ವರ್ಷದ ಮಳೆಗಾಲದಲ್ಲಿ ಎರಡನೇ ಸಲ ಸಂಪೂರ್ಣವಾಗಿ ಭರ್ತಿಯಾಗಿರುವ ಮಲ್ಲೇಶ್ವರದ ಪ್ರಸಿದ್ಧ ಸ್ಯಾಂಕಿ ಕೆರೆಗೆ ಸ್ಥಳೀಯ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಬಾಗಿನ ಅರ್ಪಿಸಿದರು.
ಆಯುಧಪೂಜೆಯ ಶುಭದಿನದಂದು ಋತ್ವಿಜರ ವೇದಮಂತ್ರ ಘೋಷಗಳೊಂದಿಗೆ ನಡೆದ ಬಾಗಿನ ಸಮರ್ಪಣೆ ವಿಧಿವಿಧಾನಗಳಲ್ಲಿ ಸ್ಥಳೀಯರೊಂದಿಗೆ ಪಾಲ್ಗೊಂಡ ಸಚಿವರು, ಸಾಂಪ್ರದಾಯಿಕ ಶ್ರದ್ಧೆಯಿಂದ ಬಾಗಿನದ ಮೊರವನ್ನು ಗಂಗೆಯ ಒಡಲಿಗೆ ಸಮರ್ಪಿಸಿದರು. ಈ ಕ್ಷಣಗಳಲ್ಲಿ ಸ್ಯಾಂಕಿ ಕೆರೆಯ ಪರಿಸರದಲ್ಲಿ ಸಂಭ್ರಮ ಮನೆಮಾಡಿತ್ತು. ಬೆಂಗಳೂರಿನ ಪರಿಸರ ಸ್ವಾಸ್ಥ್ಯವನ್ನು ಕಾಪಾಡುತ್ತಿರುವ ಪ್ರಮುಖ ತಾಣಗಳಲ್ಲಿ ಒಂದಾಗಿರುವ ಈ ಕೆರೆಯು ಹೋದ ವರ್ಷವೂ ಭರ್ತಿಯಾಗಿತ್ತು.
ಬಳಿಕ ಮಾತನಾಡಿದ ಸಚಿವರು, `ಸ್ಯಾಂಕಿ ಕೆರೆಗೆ ಮೊದಲು ಕೊಳಚೆ ನೀರೆಲ್ಲ ಹರಿದು ಬಂದು ಬಿಡುತ್ತಿತ್ತು. ಈಗ ಈ ಕೆರೆಗೆ ನೀರು ಹರಿದು ಬರುವ ಕಡೆಗಳಲ್ಲೆಲ್ಲ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸುತ್ತಿದ್ದು, ಶುದ್ಧವಾದ ನೀರು ಮಾತ್ರ ಕೆರೆಯ ಒಡಲನ್ನು ಸೇರುವಂತೆ ಕ್ರಮ ಕೈಗೊಳ್ಳಲಾಗಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇದು ಉಪಯುಕ್ತವಾದ ಕ್ರಮವಾಗಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಸ್ಯಾಂಕಿ ಕೆರೆಗೆ ನೀರು ಬರುವುದು ಕಡಿಮೆಯಾಗಿತ್ತು. ಸುತ್ತಮುತ್ತಲಿನ ಹಲವು ರಸ್ತೆಗಳಲ್ಲಿ ಕಾಲುವೆಗಳು ಮುಚ್ಚಿಹೋಗಿದ್ದೇ ಇದಕ್ಕೆ ಕಾರಣವಾಗಿತ್ತು. ಇದರಿಂದಾಗಿ, ಇಲ್ಲಿನ ನೀರೆಲ್ಲ ವೃಷಭಾವತಿ ಕಣಿವೆಯ ಕಡೆಗೆ ಹರಿದು ಹೋಗುತ್ತಿತ್ತು. ಈಗ ಇದನ್ನೆಲ್ಲ ಸರಿಪಡಿಸಿ, ಕೆರೆಗೆ ನೀರು ಬರುವಂತೆ ಮಾಡಲಾಗಿದೆ. ಸದಾಶಿವನಗರ ಬಡಾವಣೆಯ ಕಡೆಯಿಂದ ಬರುವ ಮಳೆನೀರು ಕೂಡ ಅಗತ್ಯ ಪ್ರಮಾಣದಲ್ಲಿ ಕೆರೆಯಂಗಳವನ್ನು ಸೇರುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.