ವರದಿ ಮತ್ತು ಫೋಟೋ ಕೃಪೆ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ನಗರದ ದೊಡ್ಡಪೇಟೆ ಬಳಿಯ ಕೆಂಚನಾರಹಟ್ಟಿಯಲ್ಲಿರುವ ಕಾಡುಗೊಲ್ಲರ ಆರಾಧ್ಯ ದೈವ ಕಾಟಲಿಂಗೇಶ್ವರಸ್ವಾಮಿಯ ಕಾಳು ಹಬ್ಬದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ಫೆ.27 ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ಕೆಂಚನಾರ ಗೊಲ್ಲರು, ಬಾಲೇನರ ಗೊಲ್ಲರು ಗುಡಿಕಟ್ಟಿನ ಅಣ್ಣತಮ್ಮಂದಿರು, ಗೌಡರು, ಯಜಮಾನರುಗಳು ಸೇರಿಕೊಂಡು ಸ್ವಾಮಿಯನ್ನು ಸೋಮವಾರ ಬೆಳಿಗ್ಗೆ ದೇವಸ್ಥಾನದಿಂದ ಕಾಲುನಡಿಗೆ ಮೂಲಕ ತೆಗೆದುಕೊಂಡು ಹೋಗಿ ಚಿತ್ರದುರ್ಗ ಸಮೀಪವಿರುವ ಹೊಸದ್ಯಾಮವ್ವನಹಳ್ಳಿ ಬಳಿ ಮೂಲ ಸ್ಥಾನವಿರುವ ಪೌಳಿಯ ಹತ್ತಿರ ವರ್ತಿ ತೆಗೆದು ಅದರಲ್ಲಿ ಸಿಗುವ ಗಂಗಾಜಲದಿಂದ ಸ್ವಾಮಿಗೆ ಜಲಾಭಿಷೇಕ, ಹಾಲು, ಮೊಸರು, ಜೇನುತುಪ್ಪ ಅಭಿಷೇಕ ಪೂಜೆಗೈದು ನಂತರ ದೇವರುಗಳನ್ನು ಪೌಳಿಯಲ್ಲಿರುವ ಮೂಲ ಸ್ಥಾನದಲ್ಲಿ ಕುಳ್ಳಿರಿಸಿ ಕರಿಕಂಬಳಿ ಗದ್ದುಗೆ ಹಾಸಿ ಕಾಳು ಬೇಯಿಸಿ ರಾಶಿ ಹಾಕಿ ಬಾಳೆಹಣ್ಣು, ಎಲೆ ಅಡಿಕೆ, ಕಾಯಿ, ತಂಬಿಟ್ಟು, ಚಿಗಳಿ ಇನ್ನಿತರೆ ಪೂಜಾ ಸಾಮಾಗ್ರಿಗಳನ್ನಿಟ್ಟು ನೈವೇದ್ಯ ಸಮರ್ಪಿಸಿ ಮಹಾ ಮಂಗಳಾರತಿ ನಂತರ ಅಲ್ಲಿ ಬಂದಂತಹ ಭಕ್ತರಿಗೆ ಅನ್ನಸಂತರ್ಪಣೆ ವಿನಿಯೋಗಿಸಲಾಯಿತು.
ಸಂಜೆ ಮೂಲ ಸ್ಥಾನದಿಂದ ದೇವರುಗಳನ್ನು ಪಾದಯಾತ್ರೆಯಲ್ಲಿ ಚಿತ್ರದುರ್ಗಕ್ಕೆ ಕರೆ ತಂದು ರಂಗಯ್ಯನಬಾಗಿಲು ಬಳಿಯಿರುವ ರಾಮಾಂಜನೇಯ ದೇವಸ್ಥಾನ ಹತ್ತಿರ ರಾತ್ರಿ ದೇವರುಗಳನ್ನು ಹೂಗಳಿಂದ ಅಲಂಕರಿಸಿ ವಿವಿಧ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ದೊಡ್ಡಪೇಟೆ, ದೊಡ್ಡಗರಡಿ, ಕರುವಿನಕಟ್ಟೆ ವೃತ್ತದ ಮೂಲಕ ಸಾಗಿ ಕೆಂಚನಾರಹಟ್ಟಿಯಲ್ಲಿರುವ ದೇವಸ್ಥಾನಕ್ಕೆ ಮರಳಿ ತಲುಪಿಸಲಾಯಿತು.