ಬೆಂಗಳೂರು : ವಿಧಾನಸಭೆಯಲ್ಲೂ ಅಶ್ವತ್ಥ್ ನಾರಾಯಣ್ ಹೇಳಿಕೆ ಪ್ರತಿಧ್ವನಿಸಿದೆ. ಇಂದಿನ ಸದನದಲ್ಲಿ ಕಾಂಗ್ರೆಸ್ ನಾಯಕರು ಈ ವಿಚಾರಕ್ಕೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸದನದಲ್ಲಿಯೇ ಅಶ್ವತ್ಥ್ ನಾರಾಯಣ್ ಈ ಬಗ್ಗೆ ಮಾತನಾಡಿದ್ದಾರೆ. ನಾನು ಸಿದ್ದರಾಮಯ್ಯ ಅವರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ಆಡು ಭಾಷೆಯಲ್ಲಿ ಮಾತನಾಡಿದ್ದೇನೆ ಎಂದು ಸದನದಲ್ಲಿ ತಮ್ಮ ಮಾತಿಗೆ ಸಮರ್ಥನೆ ಮಾಡಿಕೊಂಡ ಅಶ್ವತ್ಥ್ ನಾರಾಯಣ್ ಅವರ ಮಾತಿಗೆ ಕೆಂಡಾಮಂಡಲರಾದ ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದ್ದಾರೆ.
ಈ ವೇಳೆ ಸ್ಪೀಕರ್ ಕೆಂಡಾಮಂಡಲರಾಗಿದ್ದಾರೆ. ನಾನು ಈಗ ಅಧಿಕಾರವನ್ನು ಚಲಾಯಿಸಿ, ನಿಮ್ಮನ್ನು ಸದನದಿಂದ ಹೊರಗೆ ಕಳುಹಿಸಬೇಕಾಗುತ್ತದೆ ಎಂದು ಸ್ಪೀಕರ್ ಹೇಳಿದ್ದಾರೆ. ಆದರೂ ಕಾಂಗ್ರೆಸ್ ನಾಯಕರು ಸ್ಪೀಕರ್ ಮಾತನ್ನು ಕೇಳುವುದಕ್ಕೆ ಹೋಗಿಲ್ಲ.
ಸ್ಪೀಕರ್ ಮಾತಿಗೆ ಸಿಟ್ಟಿಗೆದ್ದು ಸದನದ ಬಾವಿಗಿಳಿದ ಈಶ್ವರ್ ಖಂಡ್ರೆ ಮತ್ತು ಕಾಂಗ್ರೆಸ್ ನಾಯಕರು ಬೆಂಚು ಬಡಿದು ವಿರೋಧ ವ್ಯಕ್ತಪಡಿಸಿದ್ದಾರೆ. ಇಡೀ ಸದನದಲ್ಲಿ ಅಶ್ವತ್ಥ್ ನಾರಾಯಣ್ ಹೇಳಿದ ಹೇಳಿಕೆಯೇ ಸದ್ದು ಮಾಡಿದೆ.